Site icon Vistara News

Lok Sabha Election 2024: ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದ ಟಿಎಂಸಿ ಮುಖಂಡ; ವಿವಾದಾತ್ಮಕ ವಿಡಿಯೊ ಇಲ್ಲಿದೆ

prasun

prasun

ಕೋಲ್ಕತ್ತಾ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election 2024)ಯ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಇದೀಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಮುಖಂಡ ಪ್ರಸೂನ್ ಬಂಡೋಪಾಧ್ಯಾಯ (Prasun Bandyopadhyay) ಕೇಂದ್ರ ಪಡೆಗಳು ಮತ್ತು ಚುನಾವಣಾ ಆಯೋಗಕ್ಕೆ ಚುನಾವಣೆಯ ಸಮಯದಲ್ಲಿ ಬೆದರಿಸಬೇಡಿ ಎಂದು ಎಚ್ಚರಿಕೆ ನೀಡುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಬಂಡೋಪಾಧ್ಯಾಯ ಅವರ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಟಿಎಂಸಿ ನಾಯಕ ಅರೆ ಸೈನಿಕ ಪಡೆ ಮತ್ತು ಚುನಾವಣಾ ಆಯೋಗದ ಬಗ್ಗೆ ಹೇಳಿಕೆಗಳನ್ನು ನೀಡುವುದು ಸ್ಪಷ್ಟವಾಗಿ ಕಂಡು ಬಂದಿದೆ.

ಬಂಡೋಪಾಧ್ಯಾಯ ಹೇಳಿದ್ದೇನು?

ಮಾಲ್ಡಾದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಂಡೋಪಾಧ್ಯಾಯ, “ಎಲ್ಲ ಬಿಎಸ್ಎಫ್ ಮತ್ತು ಅರೆಸೈನಿಕ ಪಡೆಗಳು ಕಾನೂನಿನ ಪರಿಧಿಯೊಳಗೆ ಇರಬೇಕು. ನಾವು ಕೂಡ ಕಾನೂನು ಉಲ್ಲಂಘನೆ ಮಾಡುವುದಿಲ್ಲ. ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿರಲಿ. ಅರೆಸೈನಿಕ ಪಡೆಗಳು ಬೆದರಿಸಲು ಪ್ರಯತ್ನಿಸಿದರೆ ನಾನಿದ್ದೇನೆʼʼ ಎಂದು ಹೇಳಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಮತ್ತು ಉತ್ತರ ಮಾಲ್ಡಾ ಸಂಸದೀಯ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿರುವ ಬಂಡೋಪಾಧ್ಯಾಯ, ʼʼಚುನಾವಣಾ ಆಯೋಗದ ಅಧಿಕಾರಿಗಳನ್ನು ಶಾಲೆಗಳಲ್ಲಿ ಕೂರಿಸಬೇಕು ಮತ್ತು ನಾನು ಎಲ್ಲವನ್ನೂ ನಿರ್ವಹಿಸುತ್ತೇನೆʼʼ ಎಂದು ಹೇಳಿದ್ದಾರೆ. “ಚುನಾವಣಾ ಆಯೋಗದ ಅದಿಕಾರಿಗಳನ್ನು ಶಾಲೆಗಳಲ್ಲಿ ಕೂರಿಸಬೇಕು. ಅವರಿಗೆ ನೀರು ಕೊಡಿ. ಅವರನ್ನು ನಿರ್ಲಕ್ಷಿಸಬೇಡಿ. ಪ್ರಸೂನ್ ಬಂಡೋಪಾಧ್ಯಾಯ ಆಡಲು ಬಂದಿದ್ದಾರೆ ಎಂದು ಹೇಳಿ. ಚುನಾವಣೆ ವೇಳೆ ಎಕೆ 47, ಎಸ್ಎಲ್ಆರ್ ಬಳಕೆ ಇಲ್ಲ. ಏನಾದರೂ ಸಮಸ್ಯೆಯಾದರೆ ನನ್ನನ್ನು ಕರೆಯಿರಿ. ನಾನು ಅರ್ಧ ಗಂಟೆಯಲ್ಲಿ ಆಗಮಿಸುತ್ತೇನೆ” ಎಂದು ಅವರು ಬೆದರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

ಈ ವಿಡಿಯೊವನ್ನು ಪೋಸ್ಟ್ ಮಾಡಿದ ಮಾಳವೀಯ, ಪ್ರಸೂನ್ ಬಂಡೋಪಾಧ್ಯಾಯ ಮತ್ತು ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಐಪಿಎಸ್ ತೊರೆದು ಮರುದಿನ ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಪ್ರಸೂನ್ ಈಗ ಭಾರತದ ಚುನಾವಣಾ ಆಯೋಗಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಪೊಲೀಸ್ ಅಧಿಕಾರಿಯಾಗಿ ಅವರು ಏನು ಮಾಡಿದ್ದಾರೆ ಎನ್ನುವುದನ್ನು ಊಹಿಸಬಹುದಾಗಿದೆ” ಎಂದು ಟೀಕಿಸಿದ್ದಾರೆ. ಸದ್ಯ ಪ್ರಸೂನ್ ಬಂಡೋಪಾಧ್ಯಾಯ ಹೇಳಿಕೆ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ.

ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 42 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಎಸ್‌ಸಿ ಅಭ್ಯರ್ಥಿಗಳಿಗೆ ಮತ್ತು 2 ಸ್ಥಾನಗಳನ್ನು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 22, ಕಾಂಗ್ರೆಸ್ 2 ಮತ್ತು ಬಿಜೆಪಿ 18 ಸ್ಥಾನಗಳನ್ನು ಗೆದ್ದಿದೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ಗಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗ; ಇದರಲ್ಲಿ ಏನಿದೆ?‌

543 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತ, ಏಪ್ರಿಲ್ 26ರಂದು ಎರಡನೇ ಹಂತ, ಮೇ 7ರಂದು ಮೂರನೇ ಹಂತ, ಮೇ 13ರಂದು ನಾಲ್ಕನೇ ಹಂತ, ಮೇ 20 ರಂದು 5ನೇ ಹಂತ, ಮೇ 25ರಂದು 6ನೇ ಹಂತ ಮತ್ತು ಜೂನ್ 1ರಂದು ಕೊನೆಯ ಮತ್ತು 7ನೇ ಹಂತದ ಮತದಾನ ನಡೆದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version