ಮಂಡ್ಯ: ಲೋಕಸಭಾ ಚುನಾವಣೆಗೆ (Lok Sabha Election 2024) ಮತದಾನದ ದಿನ ಸಮೀಪಿಸುತ್ತಿದೆ. ಈ ವೇಳೆ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ನಾಯಕರು ಅಖಾಡಕ್ಕೆ ಧುಮುಕಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya Lok Sabha constituency) ಹೊಸ ತಿರುವೊಂದು ಸಿಕ್ಕಿದೆ. ಜಿಲ್ಲಾ ರಾಜಕಾರಣಕ್ಕೆ ನಟ ದರ್ಶನ್ (Actor Darshan) ರೀ ಎಂಟ್ರಿ ಕೊಡುತ್ತಿದ್ದಾರೆ. ಆದರೆ, ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗ ಇಡೀ ಪ್ರಕ್ರಿಯೆಯಲ್ಲಿ ಬೆನ್ನಿಗೆ ನಿಂತವರು ನಟರಾದ ಯಶ್ ಹಾಗೂ ದರ್ಶನ್. ಈ ಬಾರಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಸುಮಲತಾಗೆ ಟಿಕೆಟ್ ಸಿಕ್ಕಿಲ್ಲ. ಈ ಕ್ಷೇತ್ರ ಜೆಡಿಎಸ್ ಪಾಲಾಗಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಲ್ಲದೆ, ತಾವು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಘೋಷಣೆ ಮಾಡುವ ದಿನವೂ ಅವರ ಬೆನ್ನಿಗೆ ನಿಂತಿದ್ದವರು ದರ್ಶನ್.
ಅಲ್ಲದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದರ್ಶನ್, ಸುಮಲತಾ ನನ್ನ ತಾಯಿ ಅವರು ಬಾವಿಗೆ ಬೀಳು ಎಂದರೂ ಬೀಳುತ್ತೇನೆ ಎಂದು ಹೇಳಿದ್ದರು. ದರ್ಶನ್ ಅವರು ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆಯೇ ಎಂದು ಅಂದು ಸುಮಲತಾ ಅಂಬರೀಶ್ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ ಅಂಬರೀಶ್, ಈ ವಿಷಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಅದು ನನಗೆ ಸಂಬಂಧಪಟ್ಟ ವಿಷಯ ಅಲ್ಲ. ಅದನ್ನು ದರ್ಶನ್ ಅವರೇ ತೀರ್ಮಾನ ಮಾಡುತ್ತಾರೆ. ನನ್ನ ವಿಷಯಕ್ಕೆ ಸಂಬಂಧಪಟ್ಟರೆ ನಾನು ಹೇಳಬಹುದು ಎಂದು ಹೇಳಿಕೆ ನೀಡಿದ್ದರು.
ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಆಗಮಿಸುತ್ತಿರುವ ದರ್ಶನ್, ಗುರುವಾರ (ಏಪ್ರಿಲ್ 18) ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ದರ್ಶನ್ ಅವರ ಈ ನಡೆ ಈಗ ಕುತೂಹಲವನ್ನು ಕೆರಳಿಸಿದೆ. ಇದು ಮತದಾರರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಲಿದೆ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಎಚ್‌ಡಿಕೆ ಪರ ಸುಮಲತಾ ಪ್ರಚಾರ
ಇತ್ತ ಬಿಜೆಪಿಗೆ ಸೇರ್ಪಡೆಯಾಗಿರುವ ಸುಮಲತಾ ಅಂಬರೀಶ್ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕೆ ಇಳಿದಿರುವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಅವರ ಪರಮಾಪ್ತ ದರ್ಶನ್ ಈಗ ವಿರೋಧಿ ಅಭ್ಯರ್ಥಿ ಪರ ಪ್ರಚಾರಕ್ಕೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.