Site icon Vistara News

Lok Sabha Election 2024: ಸುಮಲತಾ ಭೇಟಿ ಮಾಡಿದ ವಿಜಯೇಂದ್ರ; ನಾಳೆಯೇ ಫೈನಲ್‌ ಅಂದ್ರು ರೆಬೆಲ್‌ ಲೇಡಿ!

Lok Sabha Election 2024 and BY Vijayendra meets Sumalatha Ambareesh for discussion on support to NDA candidate in Mandya Lok Sabha Constituency

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಸಾಕಷ್ಟು ಬಿರುಸುಗೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya Lok Sabha constituency) ಬಿಜೆಪಿಯಿಂದ ಸ್ಪರ್ಧೆ ಬಯಸಿದ್ದ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಈಗಾಗಲೇ ನಿರಾಸೆಯಾಗಿದೆ. ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಸುಮಲತಾ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಆದರೆ, ತಮ್ಮ ಮುಂದಿನ ನಿರ್ಧಾರದ ಬಗ್ಗೆ ಗುಟ್ಟು ಬಿಟ್ಟುಕೊಡದ ಸುಮಲತಾ, ನಾಳೆ (ಶನಿವಾರ – ಮಾ. 30) ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.

ಶುಕ್ರವಾರ ನಡೆದ ಬಿಜೆಪಿ – ಜೆಡಿಎಸ್‌ ಸಮನ್ವಯ ಸಮಿತಿ ಸಭೆಯ ಬಳಿಕ ಸುಮಲತಾ ಅಂಬರೀಶ್‌ ಅವರನ್ನು ಬಿ.ವೈ. ವಿಜಯೇಂದ್ರ ಭೇಟಿ ಮಾಡಿದ್ದಾರೆ. ಅಲ್ಲದೆ, ಎನ್‌ಡಿಎ ಅಭ್ಯರ್ಥಿಯಾಗಿರುವ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಮಾ. 30ಕ್ಕೆ ಬೆಂಗಳೂರು ನಿವಾಸದಲ್ಲಿ ಸಭೆ

ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಲು ನಾಳೆ (ಮಾ. 30) ಮಧ್ಯಾಹ್ನ 3 ಗಂಟೆಗೆ ಜೆಪಿ ನಗರ ನಿವಾಸದಲ್ಲಿ ಬೆಂಬಲಿಗರು, ಆಪ್ತರು ಹಾಗೂ ಹಿತೈಷಿಗಳ ಸಭೆ ಕರೆದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಈ ಬಾರಿ ಬಿಜೆಪಿಯಿಂದ ಟಿಕೆಟ್‌ ಬಯಸಿದ್ದೆ. ಆದರೆ, ಅಲ್ಲಿ ಮೈತ್ರಿ ಧರ್ಮ ಪಾಲನೆ ಸಂಬಂಧ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟು ಕೊಡಲಾಗಿದೆ. ಹೀಗಾಗಿ ನಾನು ಮುಂದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು? ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಬೇಕೋ? ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕೋ? ಎಂಬ ಪ್ರಶ್ನೆಯನ್ನು ಈ ಸಭೆಯ ಮುಂದಿಡಲಿದ್ದಾರೆ. ಇಲ್ಲಿ ಬರುವ ಅಭಿಪ್ರಾಯಗಳ ಆಧಾರದ ಮೇಲೆ ಸುಮಲತಾ ಅವರು ಶನಿವಾರ ಸಂಜೆಯೇ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

Lok Sabha Election 2024 Vijayendra meets Sumalatha final decision will be announced tomorrow

ಅಭಿಮಾನಿಗಳ ಸಂಘದಿಂದ ಹೊರಬಿದ್ದ ಪ್ರಕಟಣೆ!

ಸುಮಲತಾ ಅಂಬರೀಶ್‌ ಅವರ ಸ್ಪರ್ಧೆ ಸಂಬಂಧ ಈಗ ಎದ್ದಿರುವ ಗೊಂದಲಗಳ ಪರಿಹಾರಕ್ಕೆ ಶನಿವಾರ ಸಭೆಯನ್ನು ಕರೆದಿರುವ ಬಗ್ಗೆ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘವು ಪ್ರಕಟಣೆಯೊಂದನ್ನು ಹೊರಡಿಸಿದೆ. ಇದರ ಅನುಸಾರ, “2019ರಲ್ಲಿ ಜಿಲ್ಲೆಯ ಸ್ವಾಭಿಮಾನಿ ಸಂಸದರಾಗಿ ಆಯ್ಕೆಯಾಗಿ ತಮ್ಮ ಕ್ರಿಯಾಶೀಲತೆ ಮೂಲಕ ಜಿಲ್ಲೆಯ ಜನರ ವಿಶ್ವಾಸಾರ್ಹತೆ ಗಳಿಸಿರುವ ಸಂಸದರಾದ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುಂದಿನ ನಡೆ ಬಗ್ಗೆ ಹಲವಾರು ಬೆಂಬಲಿಗರು, ಕಾರ್ಯಕರ್ತರಲ್ಲಿ ಆತಂಕ ಹಾಗೂ ಗೊಂದಲಗಳಿವೆ. ಈ ಬಗ್ಗೆ ಪರಸ್ಪರ ಚರ್ಚಿಸುವ ಸಲುವಾಗಿ ಹಾಗೂ ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲು ಸುಮಲತಾ ಅಂಬರೀಶ್ ಅವರು ಬೆಂಗಳೂರಿನ ನಿವಾಸಕ್ಕೆ ಅವರ ಬೆಂಬಲಿಗರು, ಹಿತೈಷಿಗಳು, ಅಂಬರೀಶ್ ಕುಟುಂಬದ ಅಭಿಮಾನಿಗಳು ಆಪ್ತರು ಸೇರಿದಂತೆ ಜಿಲ್ಲೆಯ ಸ್ವಾಭಿಮಾನಿ ಮುಖಂಡರು ಕಾರ್ಯಕರ್ತರು ಶನಿವಾರ (30-03-2024) ಅವರ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ. ಆಸಕ್ತಿ ಉಳ್ಳವರು ಮಧ್ಯಾಹ್ನ 2.30ಕ್ಕೆ ಸರಿಯಾಗಿ ಅವರ ನಿವಾಸಕ್ಕೆ ಭೇಟಿ ನೀಡಿ” ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸುಮಲತಾರಿಂದ ಸಕಾರಾತ್ಮಕ ಸ್ಪಂದನೆ: ಬಿ.ವೈ. ವಿಜಯೇಂದ್ರ

ಸುಮಲತಾ ಅಂಬರೀಶ್‌ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಸುಮಲತಾ ಅವರು ಸಾಕಷ್ಟು ವಿಚಾರವನ್ನು ಚರ್ಚೆ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಬಲಿಗರೊಂದಿಗೆ ಮಾತನಾಡಿ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆ. ಸಂಸದರಾಗಿ ತೀರ್ಮಾನ ತೆಗೆದುಕೊಳ್ಳುವಾಗ ಅಭಿಮಾನಿಗಳ ಅಭಿಪ್ರಾಯ ಪಡೆಯಬೇಕಾಗುತ್ತದೆ. ಎಲ್ಲವೂ ಕೂಡ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದೆ. ದೆಹಲಿ ಮಟ್ಟದಲ್ಲಿ ಎಲ್ಲವೂ ಚರ್ಚೆಯಾಗಿದೆ. ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂಬ ಸದಾಭಿಪ್ರಾಯ ಅವರಲ್ಲಿದೆ. ಎಲ್ಲದರ ಬಗ್ಗೆಯೂ ರಾಷ್ಟ್ರೀಯ ನಾಯಕರು ಚರ್ಚೆ ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ

ನನ್ನ ತೀರ್ಮಾನವನ್ನು ನಾಳೆ ಹೇಳ್ತೇನೆ: ಸುಮಲತಾ ಅಂಬರೀಶ್

‌ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್‌, ಇಂದು ಬಿ.ವೈ. ವಿಜಯೇಂದ್ರ, ಪ್ರೀತಂಗೌಡ ಅವರು ನನ್ನನ್ನು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು. ಅವರ ಭಾವನೆಯನ್ನು ಹೇಳಿದ್ದಾರೆ. ಪಕ್ಷಕ್ಕೆ ನೀವು ಸೇರ್ಪಡೆಯಾಗಬೇಕು ಅಂತ ಕೇಳಿಕೊಂಡಿದ್ದಾರೆ. ನಾಳೆ ಬೆಂಬಲಿಗರು ನಮ್ಮ ಮನೆಗೆ ಬರುತ್ತಿದ್ದಾರೆ. ಅವರ ಭಾವನೆಯನ್ನು ಕೇಳಬೇಕಾದ ಕರ್ತವ್ಯವಿದೆ. ನಾನು ಕಾರ್ಯಕರ್ತರ ಭಾವನೆಯನ್ನು ಕೇಳಿ ಮಂಡ್ಯದಲ್ಲಿ ನಿಲುವನ್ನು ತಿಳಿಸುತ್ತೇನೆ. ಬಿಜೆಪಿಗೆ ಸಪೋರ್ಟ್ ಅನ್ನೊದು ಒಂದು ಕಡೆಯಾದರೆ, ಬೆಂಬಲಿಗರು ಏನು ಹೇಳುತ್ತಾರೆ ಎಂಬುದನ್ನು ಸಹ ನಾನು ಕೇಳಬೇಕು. ಮಂಡ್ಯಕ್ಕೆ ಹೋಗಿ ಅವರ ಮುಂದೆಯೇ ನಿಲುವನ್ನು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದರು.

ಸುಲಭವಾಗಿ ಗೆಲ್ಲುವ ಕ್ಷೇತ್ರಗಳ ಆಫರ್ ನನಗೆ ಇತ್ತು. ಬೇರೆ ಪಕ್ಷದಿಂದಲೂ ಆಫರ್ ಇತ್ತು. ಆದರೆ, ನಾನು ಮಂಡ್ಯವನ್ನು ಬಿಟ್ಟರೆ ಮತ್ತೆಲ್ಲೂ ಹೋಗುತ್ತಿಲ್ಲ. ನನ್ನ ಅಸ್ತಿತ್ವ ಅಂದರೆ ಮಂಡ್ಯ ಮಾತ್ರ. ಅದನ್ನು ಕಳೆದುಕೊಳ್ಳಲು ಇಷ್ಟಪಡಲ್ಲ. ಮಂಡ್ಯ ಲೋಕಸಭಾ ಕ್ಷೇತ್ರವು ಜೆಡಿಎಸ್‌ಗೆ ಹೋಗಿದೆ ಎಂಬುದರ ಬಗ್ಗೆ ನಾನು ಮಾತನಾಡಲ್ಲ. ನಾವು ಉಳಿಸಿಕೊಂಡಿದ್ದರೆ ಒಳ್ಳೆಯದಿತ್ತು. ಭೇಟಿಗೆ ನನ್ನ ಆಕ್ಷೇಪ ಇಲ್ಲ. ಇದು ಅಂಬರೀಶ್ ಮನೆ. ಯಾರೇ ಬಂದರೂ ಸ್ವಾಗತ. ಮೈಶುಗರ್ ವಿಚಾರದಲ್ಲಿ ಕಾರ್ಯ ಆರಂಭ ಮಾಡಿದಾಗ ನಾರಾಯಣಗೌಡ ಸಚಿವರಾಗಿರಲಿಲ್ಲ. ಅವರ ಬೆಂಬಲ ಇಲ್ಲ ಅಂತಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಹಕಾರ ಕೊಟ್ಟರು.‌ ಬಸವರಾಜ ಬೊಮ್ಮಾಯಿ ಕೂಡ ಬೆಂಬಲಿಸಿದರು. ಬೇರೆ ಆಫರ್ ಏನೂ ಕೊಟ್ಟಿಲ್ಲ. ಆ ರೀತಿ ಕೇಳಿ ಪಡೆಯುವ ಅಭ್ಯಾಸ ಇಲ್ಲ ಎಂದು ಸುಮಲತಾ ಅಂಬರೀಶ್‌ ಹೇಳಿದರು.

Exit mobile version