ರಾಮನಗರ: ದೇಶದ ಜನರು ಯಾವುದೇ ಉಗ್ರರ ದಾಳಿ ಇಲ್ಲದೆ ಸುರಕ್ಷಿತವಾಗಿ, ನೆಮ್ಮದಿಯಿಂದ ಬಾಳಬೇಕಾದರೆ ಮತ್ತು ದೇಶದ ಆರ್ಥಿಕತೆ ನಂಬರ್ 3ರ ಸ್ಥಾನಕ್ಕೇರಬೇಕಾದರೆ ನರೇಂದ್ರ ಮೋದಿ (PM Narendra Modi) ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು. ಹಾಗಾಗಿ ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ನೀವು ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಡಿಕೆ ಬ್ರದರ್ಸ್ (DK Brothers) ಕೋಟೆಯಲ್ಲಿ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha constituency) ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಪರ ರೋಡ್ ಶೋ ವೇಳೆ ಈ ಮನವಿಯನ್ನು ಮಾಡಿದ್ದಾರೆ.
ರೋಡ್ ಶೋ ವೇಳೆ ಮಾತನಾಡಿದ ಅಮಿತ್ ಶಾ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಆರ್ಥಿಕತೆಯಲ್ಲಿ 11ರಲ್ಲಿದ್ದ ಭಾರತವನ್ನು 5ನೇ ಸ್ಥಾನಕ್ಕೆ ತಂದಿದ್ದಾರೆ. ಅದೇ ರೀತಿಯಾಗಿ ಈಗಲೂ ಅವರನ್ನು ಗೆಲ್ಲಿಸಿದರೆ 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗಿದ್ದಾರೆ. ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ. ಹೀಗಾಗಿ ದೇಶದ ಜನರು ಮೋದಿ ಪರವಾಗಿ ಇದ್ದಾರೆ. ಇಂದಿನ ರೋಡ್ ಶೋ ನೋಡಿದರೆ ನಮ್ಮ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಐದು ಲಕ್ಷ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನನಗೆ ಮೂಡಿದೆ. ಹೀಗಾಗಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಲು ಬಂದಿದ್ದೇನೆ. ನೀವು ಹಾಕುವ ಮತ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Lok Sabha Election 2024: ಡಿಕೆ ಬ್ರದರ್ಸ್ ಕೋಟೆಯಲ್ಲಿ ರೋಡ್ ಶೋ ಮೂಲಕ ಅಬ್ಬರಿಸಿದ ಅಮಿತ್ ಶಾ!
ಮೋದಿ ಇರುವುದರಿಂದ ದೇಶ ಸುರಕ್ಷಿತ
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿವೆ. ಆದರೆ, ಕಾಂಗ್ರೆಸ್ ಎಸ್‌ಡಿಪಿಐ ಅನ್ನು ಸಮರ್ಥನೆ ಮಾಡಿಕೊಂಡು ಬರುತ್ತಿದೆ. ಹಾಗಾದರೆ, ಜನ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಬರುವುದಿಲ್ಲವೇ? ಆದರೆ, ದೇಶದಲ್ಲಿ ಈಗ ಆಡಳಿತ ನರೇಂದ್ರ ಮೋದಿ ಅವರ ಕೈಯಲ್ಲಿ ಇರುವುದರಿಂದ ಇಡೀ ದೇಶ ಸುರಕ್ಷಿತವಾಗಿದೆ ಎಂದು ಹೇಳಿದರು.
28 ಕ್ಷೇತ್ರಗಳನ್ನು ನಮ್ಮ ಜೋಳಿಗೆಗೆ ಹಾಕಿ
ರಾಜ್ಯದ 28ಕ್ಕೂ 28 ಕ್ಷೇತ್ರಗಳನ್ನು ನಮ್ಮ ಜೋಳಿಗೆಗೆ ಹಾಕಿ ಎಂದು ರಾಜ್ಯದ ಜನರಿಗೆ ಮನವಿ ಮಾಡಲು ಬಂದಿದ್ದೇನೆ. ತೆನೆ ಹೊತ್ತ ಮಹಿಳೆಗೆ ಕೊಡುವ ಮತವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಮಲದ ಚಿಹ್ನೆಗೆ ಹಾಕಿ. ಇದಕ್ಕೆ ಹಾಕಿದರೂ ನೀವು ನರೇಂದ್ರ ಮೋದಿಯವರಿಗೆ ಮತ ಹಾಕಿದಂತಾಗುತ್ತದೆ. ಈ ಬಾರಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ನರೇಂದ್ರ ಮೋದಿ ಅವರು ಗುರಿಯನ್ನು ಹಾಕಿಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ: Lok Sabha Election 2024: ಅಧಿಕಾರಕ್ಕೆ ಅಂಟಿಕೊಂಡಿಲ್ಲವೆಂದು ಸುಮಲತಾ ಪತ್ರ; ನಾಳೆಯ ನಿರ್ಧಾರ ಏನು? ದರ್ಶನ್ ಭಾಗಿ!
Live : ಚನ್ನಪಟ್ಟಣದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah ಅವರ ರೋಡ್ ಶೋ#PhirEkBaarModiSarkar#ಮತ್ತೊಮ್ಮೆಮೋದಿಸರ್ಕಾರ#BJPJodoVsCongressTodo https://t.co/MEhCKpudNC
— BJP Karnataka (@BJP4Karnataka) April 2, 2024
ಮೋದಿ ಮೇಲೆ ಆಪಾದನೆ ಇಲ್ಲ
ರಾಜಕಾರಣದಲ್ಲಿ ನರೇಂದ್ರ ಮೋದಿಯವರು 23 ವರ್ಷಗಳಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಗಿನಿಂದ ಇಲ್ಲಿಯವರೆಗೂ ಅವರ ಮೇಲೆ ಒಂದೇ ಒಂದು ಗುರುತರ ಆಪಾದನೆ ಇಲ್ಲ. ಅದೇ ಇನ್ನೊಂದೆಡೆ ಪ್ರತಿಪಕ್ಷಗಳ ಮೇಲೆ 12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರದ ಆರೋಪಗಳಿವೆ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.