ಮೈಸೂರು: ಲೋಕಸಭಾ ಚುನಾವಣೆಯನ್ನು (Lok Sabha Election 2024) ಈ ಬಾರಿ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಬೀಗಿರುವ ಕಾಂಗ್ರೆಸ್‌ಗೆ (Congress Karnataka) ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಆಡಳಿತಾರೂಢ ಪಕ್ಷ ಇದ್ದರೂ ಹೆಚ್ಚಿನ ಸೀಟು ಗೆಲ್ಲದೇ ಹೋದರೆ ತೀವ್ರ ಮುಖಭಂಗವಾಗಲಿದೆ. ಅಲ್ಲದೆ, ಕನಿಷ್ಠ 20 ಸ್ಥಾನಗಳನ್ನು ಗೆದ್ದುಕೊಡುವಂತೆ ಹೈಕಮಾಂಡ್ ಫರ್ಮಾನು ಹೊರಡಿಸಿದೆ. ಇದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮರ್ಯಾದೆ ಪ್ರಶ್ನೆಯಾಗಿದೆ. ಅಲ್ಲದೆ, ತವರು ಕ್ಷೇತ್ರವನ್ನೇ ಬಿಟ್ಟುಕೊಟ್ಟರೆ ಅವಮಾನ ಆಗಲಿದೆ ಎಂಬ ಕಾರಣಕ್ಕೆ ಮೂರು ದಿನಗಳಿಂದ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದರು. ಮೂರು ರಾತ್ರಿ, ಎರಡು ಹಗಲು ರೆಸಾರ್ಟ್‌ನಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರು ತವರಿನ ಕ್ಷೇತ್ರವಾದ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರವನ್ನು (Kodagu – Mysore Lok Sabha constituency) ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಸಿದ್ದರಾಮಯ್ಯ, ವಿಶ್ರಾಂತಿ ನೆಪದಲ್ಲಿ ಹಗಲು- ರಾತ್ರಿ ರಾಜಕೀಯ ತಂತ್ರಗಾರಿಕೆ ನಡೆಸಿದ್ದಾರೆ. ಈ ಮೂಲಕ ಮತ ಶಿಕಾರಿಗಾಗಿ ಬಲೆ ಹೆಣೆದಿದ್ದಾರೆ.
ಲೋಕಸಭೆಗಾಗಿ (Lok Sabha Election 2024) ಸಿದ್ದರಾಮಯ್ಯ ಮಾಡಿದ್ದೇನು?
- ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ 16 ವಿಧಾನಸಭಾ ಕ್ಷೇತ್ರಗಳ ಇಂಚಿಂಚೂ ಮಾಹಿತಿಯನ್ನು ಸಂಗ್ರಹ
- ಮೈಸೂರಿಗೆ ಬಂದ ಕೂಡಲೇ ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರೊಂದಿಗೆ ಖಾಸಗಿ ಹೋಟೆಲ್ನಲ್ಲಿ ಸೀಕ್ರೆಟ್ ಮೀಟಿಂಗ್
- ರಾಜವಂಶಸ್ಥ, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಬಗ್ಗೆ ಯಾರೊಬ್ಬರೂ ಟಾರ್ಗೆಟ್ ಮಾಡುವುದಾಗಲೀ, ಹಗುರವಾಗಿ ಮಾತನಾಡುವುದನ್ನಾಗಲೀ ಮಾಡದಂತೆ ಕಟ್ಟಪ್ಪಣೆ
- ಶಾಸಕರಿಗೆ ಆಯಾ ಪ್ರತಿ ವಿಧಾನಸಭೆ ಕ್ಷೇತ್ರದ ಲೀಡ್ ಕೊಡಿಸುವ ಹೊಣೆ
- ವಿಭಾಗವಾರು ಜವಾಬ್ದಾರಿ ಹಂಚಿಕೆ, ಸಚಿವ ಡಾ. ಮಹದೇವಪ್ಪ ಹೆಗಲಿಗೆ ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಚಾಮರಾಜನಗರ, ತಿ.ನರಸೀಪುರದ ಜವಾಬ್ದಾರಿ
- ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯಗೆ ಎಚ್.ಡಿ.ಕೋಟೆ, ನಂಜನಗೂಡು, ವರುಣ ಕ್ಷೇತ್ರದ ಜವಾಬ್ದಾರಿ
- ಸಚಿವ ಕೆ. ವೆಂಟಕೇಶ್ಗೆ ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ, ವೀರಾಜಪೇಟೆ ಜವಾಬ್ದಾರಿ
- ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡನನ್ನು ಚುನಾವಣಾ ಉಸ್ತುವಾರಿಯಾಗಿ ನೇಮಿಸಲು ಸಮ್ಮತಿ
- ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಲು ನಿರ್ದೇಶನ, ಇದರೊಂದಿಗೆ ಪಕ್ಷಕ್ಕೆ ಬರುವ ಮುಖಂಡರನ್ನು ಸೇರಿಸಿಕೊಂಡು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ಸೂಚನೆ.
ರೆಸಾರ್ಟ್‌ನಲ್ಲೇ ಆಪರೇಷನ್ ಹಸ್ತ ಶುರು ಮಾಡಿದ ಸಿಎಂ
ಶತಾಯಗತಾಯ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಆಪ್ತರಿಗೆ ಒಬ್ಬೊಬ್ಬರಾದ ಮೇಲೆ ಒಬ್ಬೊಬ್ಬರಂತೆ ಗಾಳ ಹಾಕುತ್ತಿದ್ದಾರೆ. ಮೂಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬೇಟೆ ನಂತರ ಈಗ ಮತ್ತೊಬ್ಬ ಆಪ್ತನನ್ನು ಸೆಳೆದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅತ್ಯಾಪ್ತರಾಗಿರುವ, ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಶ ಕಂಡಿದ್ದಾರೆ.
ಸದಾನಂದ ಸೇರ್ಪಡೆ ಯಾಕೆ?
ಸದಾ ಬಿಎಸ್‌ವೈ ಮತ್ತು ವಿಜಯೇಂದ್ರ ಬೆನ್ನಿಗೆ ನಿಲ್ಲುತ್ತಿದ್ದ ಸದಾನಂದ ಅವರನ್ನು ಟಾರ್ಗೆಟ್ ಮಾಡಲು ಕಾರಣವೂ ಇಲ್ಲವೆಂದೆಲ್ಲ. ಸದಾನಂದ ಅವರು ವೀರಶೈವ ಸಮುದಾಯದ ಮುಖಂಡರಾಗಿದ್ದಾರೆ. ಅಲ್ಲದೆ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಮತಗಳು ಹೆಚ್ಚಿವೆ. ಹೀಗಾಗಿ ವೀರಶೈವರ ಮತಗಳನ್ನು ಕ್ರೋಡೀಕರಣ ಮಾಡುವ ಪ್ಲ್ಯಾನ್ ಅನ್ನು ಸಿಎಂ ಮಾಡಿದ್ದಾರೆ.
ಯಾವೆಲ್ಲ ನಾಯಕರಿಗೆ ಗಾಳ?
- ಮೈಸೂರು ಚಾ.ನಗರ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸದಾನಂದ (ಲಿಂಗಾಯತ)
- ಮೈಮುಲ್ ನಿರ್ದೇಶಕ ಓಂಪ್ರಕಾಶ್ (ಲಿಂಗಾಯತ)
- ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ (ಬ್ರಾಹ್ಮಣ)
- ಮಾಜಿ ಮೇಯರ್ ಬಿ.ಎಲ್. ಭೈರಪ್ಪ (ಕುರುಬ)
- ಮಾಜಿ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ (ಲಿಂಗಾಯತ)
ಇದನ್ನೂ ಓದಿ: Lok Sabha Election 2024: ಮೋದಿ ಗೆಲುವಿಗಾಗಿ ಈ 4 ವರ್ಗಗಳನ್ನು ಟಾರ್ಗೆಟ್ ಮಾಡಿದ ಬಿಜೆಪಿ
ಮೈಸೂರಲ್ಲಿ ಆಪರೇಷನ್ ಹಸ್ತ ಶುರು ಮಾಡಿದ ಸಿಎಂ;
ಈಗ ಕಾಂಗ್ರೆಸ್ ಸೇರುತ್ತಿರುವ ನಾಯಕರಲ್ಲಿ ಮೂವರು ಬಿಜೆಪಿ, ಓರ್ವ ಜೆಡಿಎಸ್ ಹಾಗೂ ಮತ್ತೊಬ್ಬರು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಮಾಜಿ ಪಾಲಿಕೆ ಸದಸ್ಯರಾಗಿದ್ದಾರೆ. ಈ ಎಲ್ಲ ನಾಯಕರು ಒಟ್ಟಾದರೆ ಗೆಲುವು ಸುಲಭ ಎಂಬ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಅವರು ಆಪರೇಷನ್ ಹಸ್ತವನ್ನು ರೆಸಾರ್ಟ್‌ನಲ್ಲಿದ್ದುಕೊಂಡೇ ಶುರು ಮಾಡಿದ್ದಾರೆ.