Site icon Vistara News

Lok Sabha Election 2024: ಎಚ್.ಡಿ.ಕುಮಾರಸ್ವಾಮಿ ಆಸ್ತಿ ಎಷ್ಟು ನೂರು ಕೋಟಿ? ಎಚ್‌ಡಿಕೆ ಬಳಿ ಕಾರಿಲ್ಲ!

Lok Sabha Election 2024 What is the value of HD Kumaraswamy assets

ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಸಂಬಂಧಪಟ್ಟಂತೆ 14 ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದೆ. ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರ ಆಸ್ತಿಯನ್ನು ಘೋಷಿಸಿಕೊಂಡಿದ್ದು, 54.65 ಕೋಟಿ ರೂ. ಒಡೆಯರಾಗಿದ್ದಾರೆ. ಆದರೆ, ಅವರ ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಪಾಲೂ ಸೇರಿದರೆ 217.21 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಎಚ್‌ಡಿಕೆ ಹೊಂದಿದ್ದಾರೆ.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿರುವ ಮಾಹಿತಿ ಪ್ರಕಾರ, HUF (ಹಿಂದೂ ಅವಿಭಜಿತ ಕುಟುಂಬ) ನಿಂದ ಅವರ ಹೆಸರಿನಲ್ಲಿ ಸುಮಾರು 8.17 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಮೌಲ್ಯ 54.65 ಕೋಟಿ ರೂ. ಆಗಿದೆ. ಆದರೆ, ಅವರ ಪತ್ನಿ ಅನಿತಾ ಹೆಸರಿನಲ್ಲಿ ಒಟ್ಟು 154.39 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯವಿದ್ದು, ಇಬ್ಬರದ್ದೂ ಸೇರಿದರೆ ಒಟ್ಟು 217.21 ಕೋಟಿ ರೂಪಾಯಿ ಆಗುತ್ತದೆ.

65 ವರ್ಷ ವಯಸ್ಸಿನ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಎಸ್ಸಿ ಪದವೀಧರರು, ಸಮಾಜ ಸೇವಕ, ರಾಜಕಾರಣಿ ಮತ್ತು ಕೃಷಿಕ ಎಂದು ಘೋಷಿಸಿಕೊಂಡಿದ್ದಾರೆ. ಅನಿತಾ ಅವರು ವ್ಯಾಪಾರ ಮತ್ತು ಬಾಡಿಗೆ ಆದಾಯವನ್ನು ಹೊಂದಿದ್ದಾರೆ. ನಿಖಿಲ್ ಮತ್ತು ಕೋ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವುದಾಗಿ ಘೋಷಣೆ ಮಾಡಲಾಗಿದೆ. ಅಲ್ಲದೆ, ಉದ್ಯಮಿಯಾಗಿದ್ದು, ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.

ಕುಮಾರಸ್ವಾಮಿಗೆ ಕಾರಿಲ್ಲ!

ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಯಾವುದೇ ಕಾರು ಇಲ್ಲ. ಆದರೆ, 12.55 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಹೊಂದಿದ್ದಾರೆ. ಅನಿತಾ ಅವರು ನಿಖಿಲ್ ಮತ್ತು ಕಂಪನಿಯಿಂದ 11.15 ಲಕ್ಷ ರೂ. ಮೌಲ್ಯದ ಕಾರನ್ನು ಹೊಂದಿದ್ದಾರೆ.

ಇದನ್ನೂ ಓದಿ: Lok Sabha Election 2024: ತೇಜಸ್ವಿ ಸೂರ್ಯಗೆ ʼರೋಡ್‌ ಶೋʼ ಕಂಟಕ? ನಾಮಪತ್ರ ರದ್ದು ಕೋರಿ ಆಯೋಗಕ್ಕೆ ಮೊರೆ

ಚಿನ್ನಾಭರಣ ಎಷ್ಟಿದೆ?

ಕುಮಾರಸ್ವಾಮಿ ಬಳಿ 47.06 ಲಕ್ಷ ಮೌಲ್ಯದ ಚಿನ್ನ ಮತ್ತು 2.60 ಲಕ್ಷ ಮೌಲ್ಯದ ವಜ್ರ ಹಾಗೂ ಅನಿತಾ ಬಳಿ 2.41 ಕೋಟಿ ಮೌಲ್ಯದ ಚಿನ್ನ ಮತ್ತು 33.09 ಲಕ್ಷ ರೂ.ಮೌಲ್ಯದ ವಜ್ರವಿದೆ. 37.48 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಮತ್ತು ಜೆಪಿ ನಗರ ಮೂರನೇ ಹಂತದಲ್ಲಿ 6.46 ಕೋಟಿ ರೂ.ಮೌಲ್ಯದ ನಿವಾಸವನ್ನು ಹೊಂದಲಾಗಿದೆ.

ಎಚ್‌ಯುಎಫ್‌ನಿಂದ ವಾಣಿಜ್ಯ ಕಟ್ಟಡದಲ್ಲಿ ಕುಮಾರಸ್ವಾಮಿ ಅವರ ಪಾಲು ಸುಮಾರು 6.97 ಕೋಟಿ ರೂ. ಆಗಿದೆ. ಅನಿತಾ ಅವರು 28.38 ಕೋಟಿ ರೂ ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದು, 35.69 ಕೋಟಿ ರೂ ಮೌಲ್ಯದ ಎರಡು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಇನ್ನು ಕುಮಾರಸ್ವಾಮಿ ಅವರ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.

Exit mobile version