Site icon Vistara News

Lok Sabha Election 2024: ಎಚ್‌ಡಿಕೆ ಬೆಂಗಳೂರು ಗ್ರಾಮಾಂತರದಲ್ಲೇಕೆ ಸ್ಪರ್ಧಿಸಲಿಲ್ಲ; ಸೋಲಿನ ಭಯವೇ?: ಸಿಎಂ ಪ್ರಶ್ನೆ

Lok Sabha Election 2024 Why HD Kumaraswamy didnt contest from Bengaluru Rural CM Siddaramaiah questions

ಮಂಡ್ಯ: ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಅವರ ಮಗ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರನ್ನು ಕಣಕ್ಕಿಳಿಸಿದ್ದರು. ಆದರೆ, ಅವರಿಗೆ ಸೋಲಾಯಿತು. ಸುಮಲತಾ ಅಂಬರೀಶ್‌ (Sumalatha Amabareesh) ಗೆದ್ದಿದ್ದರು. ಇಂದು ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಯೇ (Bangalore Rural Lok Sabha constituency) ಸ್ಪರ್ಧೆ ಮಾಡಬಹುದಿತ್ತು. ಆದರೆ, ಅಲ್ಲಿ ಸೋಲುವ ಭಯದಿಂದ ಇಲ್ಲಿಗೆ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ (Lok Sabha Election 2024) ಮಂಡ್ಯದ ಜನತೆ ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು.

ಮಂಡ್ಯದಲ್ಲಿ ಬುಧವಾರ ಏರ್ಪಡಿಸಲಾಗಿರುವ ಕಾಂಗ್ರೆಸ್ ಪ್ರಜಾಧ್ವನಿ- 2 ಸಮಾವೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಪ್ರಚಾರ ಮಾಡಿದ ಸಿಎಂ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳಲಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಕೋಟಿ ರೂಪಾಯಿಯನ್ನು ಹಾಕುತ್ತೇವೆ ಎಂದು ಹೇಳಿದ್ದರು. ಯಾರ ಖಾತೆಗೂ ಹಣ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಅದೂ ಆಗಲಿಲ್ಲ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲಗಳ ದರ ಹೆಚ್ಚಾಗಿದ್ದು ಬಿಟ್ಟರೆ ಅಚ್ಚೇ ದಿನ್‌ ಬರಲೇ ಇಲ್ಲ. ಆದರೆ, ನಾವು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡಿದೆವು. ಈ ಮೂಲಕ ರಾಜ್ಯದ ಜನತೆಗೆ ಬೆಂಬಲವಾಗಿ ನಿಂತಿದ್ದೇವೆ. ನಾವು ಈ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದು ಮಾತ್ರವಲ್ಲ, ಇವೆಲ್ಲವೂ ಜನರಿಗೆ ಮುಟ್ಟಿದೆಯೇ ಎಂಬುದನ್ನು ಸಹ ಖಚಿತ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪಂಚ ಗ್ಯಾರಂಟಿ ಬಗ್ಗೆ ಸಿಎಂ ಉಲ್ಲೇಖ

ಗೃಹ ಲಕ್ಷ್ಮಿ ಯೋಜನೆಯಲ್ಲಿ 1.17 ಕೋಟಿ ಮಹಿಳೆಯರಿಗೆ ಮಾಸಿಕವಾಗಿ ತಲಾ 2000 ಸಾವಿರ ರೂಪಾಯಿ ಕೊಡುತ್ತಾ ಬಂದಿದ್ದೇವೆ. ಅನ್ನಭಾಗ್ಯ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಬಿಜೆಪಿಯವರು ಮೋಸ ಮಾಡಿದರೂ ಸಹ ನಾವು ಹೇಳಿದ 5 ಕೆಜಿ ಅಕ್ಕಿಗೆ ಪ್ರತಿಯಾಗಿ 170 ರೂಪಾಯಿ ಕೊಡುತ್ತಿದ್ದೇವೆ. ಒಂದು ಮನೆಯಲ್ಲಿ ಐದು ಜನರಿದ್ದರೆ, ಅವರ ಕುಟುಂಬಕ್ಕೆ 850 ರೂಪಾಯಿ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಯುವ ನಿಧಿ ಯೋಜನೆ ಅಡಿ ನಿರುದ್ಯೋಗಿ ಪದವೀಧರ ಯುವಕರಿಗೆ ತಲಾ 3000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿ ನೀಡಿದ್ದೇವೆ. ಶಕ್ತಿ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಸಂಚಾರ ಮಾಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಇಂದು ಲಕ್ಷಾಂತರ ಕುಟುಂಬದವರು ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ನಮ್ಮ ಯೋಜನೆಯಿಂದ ಅನೇಕರು ಇವುಗಳ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯಕ್ಕೆ ಹೊಸ ಶುಗರ್‌ ಫ್ಯಾಕ್ಟರಿ

ನಾವು ಅಧಿಕಾರಕ್ಕೆ ಬಂದ ಕೂಡಲೇ ಮೈಸೂರು ಶುಗರ್‌ ಫ್ಯಾಕ್ಟರಿಗೆ 50 ಕೋಟಿ ರೂಪಾಯಿಯನ್ನು ಕೂಡಲೇ ಬಿಡುಗಡೆ ಮಾಡಿದ್ದೇವೆ. ಆದರೆ, ಇದು ಪದೇ ಪದೆ ದುರಸ್ತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ಹೊಸ ಫ್ಯಾಕ್ಟರಿಯನ್ನು ನಿರ್ಮಾಣ ಮಾಡುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಸೇರಿದ ಕರಡಿ ಸಂಗಣ್ಣ; ಪಕ್ಷ ಸೇರ್ಪಡೆಗೆ ಲಕ್ಷ್ಮಣ ಸವದಿ ಕಾರಣ!

ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆ ಮಾಡ್ತೇವೆ

ಮಂಡ್ಯದಲ್ಲಿ ಕೃಷಿ ಕಾಲೇಜನ್ನು ಸ್ಥಾಪನೆ ಮಾಡಬೇಕು ಎಂದು ಸಚಿವ ಎನ್.‌ ಚಲುವರಾಯ ಸ್ವಾಮಿ ಅವರು ಕೇಳಿದ್ದಾರೆ. ಹೀಗಾಗಿ ಇದಕ್ಕೊಂದು ಸಮಿತಿಯನ್ನು ಮಾಡೋಣ. ಬಳಿಕ ಇಲ್ಲಿ ಕಾಲೇಜನ್ನು ನಿರ್ಮಾಣ ಮಾಡೋಣ ಎಂದು ಹೇಳಿದ್ದೇನೆ. ಇನ್ನು ಕೆಆರ್‌ಎಸ್‌ ಬೃಂದಾವನ ಅಭಿವೃದ್ಧಿಗೂ ನಾವು ಮುಂದಾಗುತ್ತಿದ್ದೇವೆ. ವಿಶ್ವೇಶ್ವರಯ್ಯ ನಾಲೆಯನ್ನು ಆಧುನೀಕರಣಗೊಳಿಸುತ್ತೇವೆ. ಆ ಮೂಲಕ ನಾಲೆಯ ಕಟ್ಟಕಡೆಯ ವ್ಯಕ್ತಿಗೂ ನೀರು ಸಿಗುವಂತೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Exit mobile version