ಮೈಸೂರು: ಚುನಾವಣಾ ರಾಜಕೀಯ ನಿವೃತ್ತಿ (Political retirement) ಬಗ್ಗೆ ಈಗಾಗಲೇ ತೀರ್ಮಾನ ಮಾಡಿದ್ದೇನೆ. ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳಿದರು. ಆದರೆ, ನನ್ನ ಆರೋಗ್ಯದ ದೃಷ್ಟಿಯಿಂದ ಸ್ಪರ್ಧೆ ಮಾಡಲಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಚುನಾವಣಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಲೋಕಸಭಾ ಚುನಾವಣೆಯ (Lok Sabha Election 2024) ಹೊತ್ತಿನಲ್ಲಿ ಅವರ ಈ ಹೇಳಿಕೆಯು ಮಹತ್ವವನ್ನು ಪಡೆದುಕೊಂಡಿದೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ನನಗೆ ಆತಂಕ ಇದ್ದರೆ ತಾನೇ ಟೆನ್ಷನ್ ಆಗುವುದು. ನನಗೆ ಯಾವ ಆತಂಕವೂ ಇಲ್ಲ. ಹೀಗಾಗಿ ನಾನು ಕೂಲ್ ಆಗಿ ಇದ್ದೇನೆ. ಅದು ಕೂಡ ನನ್ನ ಆರೋಗ್ಯದ ಗುಟ್ಟು. ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳಿದರು. ಆದರೆ, ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವಯಸ್ಸು ಆಗಿ ಬಿಡುತ್ತದೆ. 83 ವಯಸ್ಸು ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಇದಕ್ಕಾಗಿತೇ ಚುನಾವಣಾ ರಾಜಕಾರಣ ಸಾಕು ಎಂದಿಕೊಂಡಿದ್ದೇನೆ ಎಂದು ಹೇಳಿದರು.
ಕೇಂದ್ರವು ಕನ್ನಡಿಗರಿಗೆ ದ್ರೋಹವೆಸಗಿದೆ
ರಾಜ್ಯದ ಜನರಿಗೆ ಬರ ಸಂಕಷ್ಟದಲ್ಲಿ ಸಹಾಯಕ್ಕೆ ಬರದ ಕೇಂದ್ರ ಸಚಿವ ಅಮಿತ್ ಶಾ ಅವರು, ರಾಜ್ಯದ ಜನರ ಬಳಿ ಮತ ಕೇಳಲು ಯಾವ ನೈತಿಕ ಹಕ್ಕಿದೆ. ಇಂತಹ ಬಿಜೆಪಿಯವರಿಗೆ ಜನರು ಮತ ನೀಡಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಈ ಬಗ್ಗೆ ಚಕಾರವೆತ್ತದೆ, ಬಿಜೆಪಿಯ ವಕ್ತಾರರಾಗಿಬಿಟ್ಟಿದ್ದಾರೆ. ಕೇಂದ್ರದ ಈ ಧೋರಣೆ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಬಿಜೆಪಿಯವರ ಈ ಧೋರಣೆಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಮಿತ್ ಶಾ ಅವರು ಬರ ಪರಿಹಾರಕ್ಕೆ ಸಮ್ಮತಿ ಸೂಚಿಸಿಲ್ಲ. ಮೇಕೆದಾಟು ಯೋಜನೆ, ಮಹದಾಯಿ ಯೋಜನೆಗೂ ಇದುವರೆಗೆ ಅನುಮತಿ ನೀಡಿದ್ದಾರೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಅಮಿತ್ ಶಾ ವಿರುದ್ಧ ನೀಡಿದ್ದ ಗೂಂಡಾ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಚುನಾವಣಾ ಆಯೋಗ ನೀಡಿರುವ ನೋಟಿಸ್‌ಗೆ ನನ್ನ ಮಗ ಉತ್ತರ ಕೊಟ್ಟಿದ್ದಾನೆ. ಸಿಬಿಐನವರು ನೀಡಿರುವ ವರದಿಯ ಮೇಲೆ ಅವರು ಹೇಳಿಕೆಯನ್ನು ನೀಡಿದ್ದು, ಈ ಬಗ್ಗೆ ಸ್ಪಷ್ಟೀಕರಣವನ್ನು ಈಗಾಗಲೇ ನೀಡಲಾಗಿದೆ. ಈ ಬಗ್ಗೆ ಹೆಚ್ಚಿಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಸಾಧನೆಗಳ ಮೇಲೆ ಚುನಾವಣೆ
ರಾಜ್ಯದಲ್ಲಿ ಜನಪರ ಯೋಜನೆಗಳು ,ಅಭಿವೃದ್ಧಿ ಕಾರ್ಯಗಳು ಮುಂದುವರೆಯಬೇಕಾದರೆ ನಮ್ಮ ಸರ್ಕಾರವೇ ಅಸ್ತಿತ್ವದಲ್ಲಿರಬೇಕು. ಬಿಜೆಪಿಯವರು ಅಧಿಕಾರಕ್ಕೆ ಬಂದಲ್ಲಿ, ಜನಪರ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಜನರಿಗೆ ಮನವರಿಕೆ ಮಾಡಿಸಿದ್ದೇನೆ. ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತಿದ್ದು, ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ಭರವಸೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ
ರಾಜ್ಯದಲ್ಲಿ ಬರದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮಾಧ್ಯಮಗಳು ಊಹಾಪೋಹಗಳ ಮೇಲೆ ವರದಿ ಮಾಡಬಾರದು. ರಾಜ್ಯದ ಯಾವುದೇ ಭಾಗದಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ಅಮಿತೋತ್ಸಾಹ; ಸಿದ್ದರಾಮಯ್ಯ, ಡಿಕೆಶಿಗೆ ತವರಲ್ಲಿ ಚೆಕ್‌ಮೇಟ್‌ಗೆ ಮೆಗಾ ಪ್ಲ್ಯಾನ್!
ಅಕ್ರಮ ಗಣಿಗಾರಿಕೆ: ಸಚಿವರ ವಿರುದ್ಧ ವರದಿ ಬಂದಿಲ್ಲ
ಶಾಸಕ ಜನಾರ್ದನ ರೆಡ್ಡಿಯವರು ಸಚಿವರಾದ ಸಂತೋಷ್ ಲಾಡ್ ಹಾಗೂ ನಾಗೇಂದ್ರ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪದ ಕುರಿತು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕು. ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು ಎಂದು ವರದಿಯಲ್ಲಿ ಬಂದ ಕಾರಣದಿಂದಾಗಿ, ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೋರಾಟ ಮಾಡಿ, ಪಾದಯಾತ್ರೆ ಕೈಗೊಂಡಿದ್ದೆ. ಈ ರೀತಿಯ ಯಾವ ವರದಿಗಳು ಈ ಸಚಿವರ ಮೇಲೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಸನದಲ್ಲಿ ಕಾಂಗ್ರೆಸ್ ಪರ ಜನರ ಒಲವು
ಮಂಡ್ಯದಲ್ಲಿ ಕುಮಾರಸ್ವಾಮಿಯವರು ಚುನಾವಣೆ ಎದುರಿಸುತ್ತಿರುವುದು ದೈವೇಚ್ಛೆ ಎಂದ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಗನನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಸೋಲನ್ನು ಅನುಭವಿಸಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರಿಂದ ಅವರು ಹಾಸನದಲ್ಲಿ ಗೆಲುವನ್ನು ಸಾಧಿಸಿದರು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಕಾರ್ಯಪ್ರವೃತ್ತರಾಗಿದ್ದು, ಹಾಸನದ ಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎಂದರು.