ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೂ, ಆಕ್ಸಿಜನ್ ಸಮೇತ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಇನ್ನು ಮೈಸೂರಿನ ಹುಣಸೂರಿನಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿ ಮೃತಪಟ್ಟಿದ್ದಾರೆ.
ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Bangalore South Lok Sabha constituency) ಜಯನಗರದಲ್ಲಿ ವೃದ್ಧೆಯೊಬ್ಬರು ಆಕ್ಸಿಜನ್ ಸಹಾಯದಿಂದಲೇ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. 78 ವರ್ಷದ ಕಲಾವತಿ ಎಂಬುವವರೇ ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆಯಾಗಿದ್ದಾರೆ. ಕಲಾವತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರನ್ನು ಏಪ್ರಿಲ್ 23ರಂದು ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಅವರನ್ನು ಆಂಬ್ಯುಲೆನ್ಸ್ ಮೂಲಕ ವೈದ್ಯಕೀಯ ಸಿಬ್ಬಂದಿ ಜತೆ ಕರೆತರಲಾಗಿದ್ದು, ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕೊನೆಗೂ ಅವರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ವೋಟು ಹಾಕಿ ಬಂದು ವೃದ್ಧೆ ನಿಧನ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Mysore Lok Sabha constituency) ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ವೃದ್ಧೆಯೊಬ್ಬರು ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಹೊರ ಬರುತ್ತಿದ್ದಂತೆ ಅವರು ಕುಸಿದು ಮೃತಪಟ್ಟಿದ್ದಾರೆ.
ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ಪುಟ್ಟಮ್ಮ (90) ಮೃತರು. ಇವರು ಪ್ರತಿ ಚುನಾವಣೆಯಂತೆ ಈ ಬಾರಿಯೂ ತಮ್ಮ ಹಕ್ಕನ್ನು ತಪ್ಪದೇ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಅದೇ ಖುಷಿಯಲ್ಲಿ ವಾಪಸಾಗುತ್ತಿದ್ದಾಗ ದಿಢೀರ್ ಕುಸಿದುಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.
ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (First phase of polling) ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನ (cardiac arrest) ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ಬಂದಿದ್ದರಿಂದ ಅವರ ಜೀವ ಉಳಿದಿದೆ.
ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದಾರೆ. ಅವರು ಆಯಾಸವಾಗಿದೆ ಎಂದು ಮತಗಟ್ಟೆಯಲ್ಲಿ ಇಟ್ಟಿದ್ದ ನೀರು ಕುಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.
ನಾಡಿಮಿಡಿತವನ್ನು ಪರಿಶೀಲಿಸಿದ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್, ಪಲ್ಸ್ ರೇಟ್ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೊದಲೆರಡು ಗಂಟೆಗಳ ಮತದಾನ ಚುರುಕು, ಶೇ.9.21 ಚಲಾವಣೆ, ಕೆಲವೆಡೆ ಚಕಮಕಿ
ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ (lok sabha constituency) ನಡೆಯುತ್ತಿರುವ ಲೋಕಸಭೆ ಚುನಾವಣೆ (lok sabha election 2024) ಮತದಾನ (voting) ಬೆಳಗ್ಗಿನ ಹೊತ್ತಿನಲ್ಲಿ ಚುರುಕಾಗಿ ನೆರವೇರಿತು. 7 ಗಂಟೆಗೆ ಮತದಾನ ಆರಂಭವಾಗಿದ್ದು, ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 10% ಮತದಾನ ಕಂಡುಬಂತು.
ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತ ಚಲಾವಣೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಗಂಟೆಯವರೆಗೆ 14.33% ಹಾಗೂ ಉಡುಪಿ ಜಿಲ್ಲೆಯಲ್ಲಿ 12.82% ಮತದಾನ ದಾಖಲಾಗಿದೆ. ತುಮಕೂರು 9.6%, ಚಾಮರಾಜನಗರ 7.7%, ಮಂಡ್ಯ 7.70%, ಚಿಕ್ಕಬಳ್ಳಾಪುರ 8.70%, ಹಾಸನ 8.2%, ಚಿಕ್ಕಮಗಳೂರು 11.02%, ಮೈಸೂರು 11.04% ಮತದಾನ ನಡೆದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 9.8%, ಬೆಂಗಳೂರು ಕೇಂದ್ರ 8.14%, ಬೆಂಗಳೂರು ಉತ್ತರ 8.64%, ಬೆಂಗಳೂರು ಗ್ರಾಮಾಂತರ 8.34% ಮತದಾನ ದಾಖಲಿಸಿವೆ.
ಹತ್ತು ಗಂಟೆಯ ಬಳಿಕ ಬಿಸಿಲು ಏರುವುದರಿಂದ, ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿನಲ್ಲಿ ಮತದಾನ ಇಳಿಕೆಯಾಗಿ, ಸಂಜೆ ಮತ್ತೆ ಏರುವ ನಿರೀಕ್ಷೆ ಇದೆ. ರಾಜಧಾನಿಯಲ್ಲಿ ಹಲವಾರು ಗಣ್ಯರು ಮುಂಜಾನೆಯೇ ಮತ ಚಲಾಯಿಸಿದರು.
ಇನ್‌ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಮುಂಜಾನೆ ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು. ನಾರಾಯಣ ಮೂರ್ತಿಯವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿಸಿಕೊಂಡು ನೇರವಾಗಿ ಮತಗಟ್ಟೆಗೇ ಬಂದು ಮತ ಹಾಕಿ ತೆರಳಿದರು. ಕ್ರಿಕೆಟಿಗ ರಾಹುಲ್ ದ್ರಾವಿಡ್, ನಟ ನಟಿಯರಾದ ಸಪ್ತಮಿ ಗೌಡ, ಪ್ರಕಾಶ್ ರೈ, ಗೋಲ್ಡನ್ ಸ್ಟಾರ್ ಗಣೇಶ್, ಶರಣ್, ಧ್ರುವ ಸರ್ಜಾ, ಅಮೂಲ್ಯ ಮುಂತಾದವರು ಮತ ಹಾಕಿದರು. ಧಾರ್ಮಿಕ ಗಣ್ಯರಾದ ಉಡುಪಿಯ ಅಷ್ಟ ಮಠಾಧೀಶರು, ಸಿದ್ದಲಿಂಗ ಸ್ವಾಮಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ ಹಾಕಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಾಜಕೀಯ ನಾಯಕರು ಹಾಗೂ ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಕೆಜೆ ಜಾರ್ಜ್, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ, ಸೋಮಣ್ಣ, ಪಿಸಿ ಮೋಹನ್ ಮೊದಲಾದವರು ಹಕ್ಕು ಚಲಾಯಿಸಿದರು. ಮತದಾನಕ್ಕೆ ಆಗಮಿಸುವ ಮುನ್ನ ಎಚ್‌ಡಿ ದೇವೇಗೌಡ, ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಮೊದಲಾದ ನಾಯಕರು ಟೆಂಪಲ್ ರನ್ ಮಾಡಿದರು.
ಇದನ್ನೂ ಓದಿ: Lok Sabha Election 2024: ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಗಣೇಶ್ ದಂಪತಿ: ಪ್ರಕಾಶ್ ರಾಜ್ ಮನವಿ ಏನು?
ಕೆಲವೆಡೆ ಸಣ್ಣ ಪ್ರಮಾಣದ ಚಕಮಕಿ ಕಂಡುಬಂತು. ಉಡುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮತ ಹಾಕಲು ಸಂದರ್ಭ ಪ್ರಚಾರ ನಡೆಸಿದರು ಎಂದು ಬಿಜೆಪಿ ಕಾರ್ಯಕರ್ತರು ತಗಾದೆ ತೆಗೆದು ರಂಪಾಟ ನಡೆಸಿದರು. ಆನೇಕಲ್‌ನಲ್ಲಿ ಬಿಜೆಪಿ ಪೆಂಡಾಲ್‌ಗಳನ್ನು ತೆಗೆಸಿ ಕಾಂಗ್ರೆಸ್ ಪೆಂಡಾಲ್ ಹಾಕಿಸಿದ ಕುರಿತು ವಾಗ್ಯುದ್ಧ ನಡೆಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಕೆಲವೆಡೆ ಮತಯಂತ್ರ ಕೈಕೊಟ್ಟು ಮತದಾರರು ಗಂಟೆಗಟ್ಟಲೆ ಕಾಯುವಂತಾಯಿತು. ತಂತ್ರಜ್ಞರು ಆಗಮಿಸಿ ಸರಿಪಡಿಸಿದ ಬಳಿಕ ಮತ ಹಾಕಲಾಯಿತು. ಮಹಿಳೆಯರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಪಿಂಕ್ ಬೂತ್‌ಗಳಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕೆಲವೆಡೆ ಬಿಸಿಲಿನ ಝಳಕ್ಕೆ ಸರತಿಯಲ್ಲಿ ನಿಂತ ಮತದಾರರು ಅಸ್ವಸ್ಥಗೊಂಡರು. ಇವರಿಗೆ ಪ್ರಥಮ ಚಿಕಿತ್ಸೆ ಒದಗಿಸಲಾಯಿತು.