ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕೊಡಗು – ಮೈಸೂರು ಕ್ಷೇತ್ರದ (Kodagu Mysore Lok Sabha constituency) ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ (Yaduveer Krishnadatta Chamaraja Wadiyar) ಅವರನ್ನು ಟಾರ್ಗೆಟ್ ಮಾಡುವುದು ಬೇಡ. ಬಿಜೆಪಿ ಅಷ್ಟೇ ನಮ್ಮ ಟಾರ್ಗೆಟ್ ಎಂದು ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಸ್ಪಷ್ಟ ಮಾತುಗಳ ಮೂಲಕ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭಾಷಣ ಮಾಡುವಾಗ ಎಚ್ಚರ ಇರಲಿ. ಯದುವೀರ್ ಒಡೆಯರ್ ವಿರುದ್ಧ ಸಿಕ್ಕ ಸಿಕ್ಕಂತೆ ಹೇಳಿಕೆ ಕೊಡಬೇಡಿ. ಎಮೋಷನಲ್ ವಿಚಾರವನ್ನು ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಬಿಜೆಪಿಯವರಿಗೆ ನಿಮ್ಮ ಹೇಳಿಕೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಪ್ರತಿ ಕ್ಷೇತ್ರದ ಮಾಹಿತಿ ಪಡೆದ ಸಿಎಂ
2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಲೀಡ್ ಏನು ಎಂಬ ಬಗ್ಗೆ ಆಯಾ ಕ್ಷೇತ್ರದ ಮುಖಂಡರಿಂದ ತಿಳಿದುಕೊಂಡರು.
ಶಾಸಕರಿಗೆ ಟಾರ್ಗೆಟ್ ನೀಡಿದ ಸಿಎಂ
ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಹುಣಸೂರು, ನರಸಿಂಹರಾಜದಲ್ಲಿ ಮಾತ್ರ ಕಾಂಗ್ರೆಸ್‌ಗೆ ಲೀಡ್ ಬಂದಿದೆ. ಕೊಡಗಿನಲ್ಲಿ ಈಗ ಎರಡು ಕ್ಷೇತ್ರದಲ್ಲಿ ನಮ್ಮ ಶಾಸಕರೇ ಇದ್ದಾರೆ. ಈ ಎರಡು ಕ್ಷೇತ್ರ ಸೇರಿ ನನಗೆ ಒಂದು ಲಕ್ಷ ಲೀಡ್ ಬೇಕು. ಪಿರಿಯಾಪಟ್ಟಣದಲ್ಲಿ ಸಚಿವರೇ ಇದ್ದಾರೆ. ನಮಗೆ ಅಲ್ಲಿ 50 ಸಾವಿರ ಲೀಡ್ ಬೇಕು. ಹುಣಸೂರು ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರ ಸೇರಿ 60 ಸಾವಿರ ಲೀಡ್ ಬೇಕು. ಚಾಮರಾಜ ಮತ್ತು ಎನ್.ಆರ್. ಕ್ಷೇತ್ರ ಸೇರಿ ಒಂದು ಲಕ್ಷ ಲೀಡ್ ಕೊಡಿ. ಕೃಷ್ಣರಾಜ ಕ್ಷೇತ್ರದ ಪರಿಸ್ಥಿತಿ ಕಷ್ಟ ಇದೆ. ಅಲ್ಲಿ ಕೂಡ ಪ್ರಯತ್ನ ಮಾಡಬೇಕು. ನಮ್ಮ ಶಾಸಕರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಬರಲೇಬೇಕು ಎಂದು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಅವರು ಟಾರ್ಗೆಟ್ ಫಿಕ್ಸ್ ಮಾಡಿದರು.
ಗೆಲುವು ಖಚಿತ ಎಂದ ಸಿಎಂ
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ. ಇವೆರಡನ್ನೂ ಸೇರಿಸಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ ‘ಕೈ’ಗೆ ಬರಲೇಬೇಕು. ಬರುತ್ತವೆ. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಪರವಾದ ಯಾವ ಕಾರಣಗಳೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ವಿರೋಧಿಯಾದ ಅಲೆ ಜೋರಾಗಿದೆ. ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದ ಎಲ್ಲ ಕುಟುಂಬಗಳಿಗೆ ಕಾಂಗ್ರೆಸ್ ಗ್ಯಾರಂಟಿಗಳು ನೆಮ್ಮದಿ ತರಿಸಿರುವುದನ್ನು ನಾಡಿನ ಜನತೆ ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: HD Kumaraswamy: ಹಾರ್ಟ್ ಆಪರೇಷನ್ ಬಳಿಕ ಎಚ್‌ಡಿಕೆ ಮೊದಲ ಮಾತು; ಮಂಡ್ಯ, ಸಿಎಂ ಬಗ್ಗೆ ಹೇಳಿದ್ದೇನು?
ನಾವು ನಡೆಸಿರುವ ಹಲವು ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲುವುದೂ ಸೇರಿ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ ಎನ್ನುವ ವರದಿಗಳು ಬಂದಿವೆ. ಹೀಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪರವಾದ ಅಭೂತಪೂರ್ವ ಫಲಿತಾಂಶ ಹೊರಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹತ್ತು ವರ್ಷ ಅಧಿಕಾರ ಮಾಡಿದ ಮೋದಿ ಸರ್ಕಾರಕ್ಕೆ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ. ರಾಮ ಸರ್ವರಿಗೂ ಸೇರಿದವನು. ನನ್ನ ಹೆಸರಲ್ಲೇ ರಾಮ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶ್ರೀರಾಮಚಂದ್ರ, ಸೀತಾ , ಲಕ್ಷ್ಮಣ ಎಲ್ಲರೂ ನಮಗೆ ಪೂಜ್ಯರು. ಈಗ ಬಿಜೆಪಿ ಕೇವಲ ಜೈ ಶ್ರೀರಾಮ್ ಕೂಗುತ್ತದೆ. ನಾವು ಜೈ ಸೀತಾರಾಮ್ ಎಂದು ನಿರಂತರವಾಗಿ ಕೂಗುತ್ತೇವೆ. ನನ್ನ ಹೆಸರಿನಲ್ಲೇ ರಾಮ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸೆಕ್ಯುಲರ್ ಏನಾಯ್ತು?
ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅಂದಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಈಗ ದೇವೇಗೌಡರು ಬಿಜೆಪಿ ಜತೆ ಸೇರಿದ್ದಾರೆ. ತಮ್ಮ ಅಳಿಯ ಮಂಜುನಾಥ್ ಅವರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ. ಅದಕ್ಕೇ ತಮ್ಮ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ನಮ್ಮ ಪಾಲು ಕೇಳೋಕೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಯ್ತು
ರಾಜ್ಯಕ್ಕೆ ಬರಗಾಲ ಬಂದು ಐದು ತಿಂಗಳಾದರೂ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರ ಒಂದೇ ಒಂದು ರೂಪಾಯಿ ಬಂದಿಲ್ಲ. ಮೊದಲು ರಾಜ್ಯದ ಜನರಿಗೆ ಅಕ್ಕಿ ಕೊಡ್ತೀವಿ. ದುಡ್ಡು ತಗೊಂಡು ಅಕ್ಕಿ ಕೊಡಿ ಅಂದರೂ ಕೊಡಲಿಲ್ಲ. ಈಗ ರಾಜ್ಯದ ಪಾಲಿನ ಬರ ಪರಿಹಾರ ನಮಗೆ ಕೊಡಿ ಎಂದರೂ ಕೊಡುತ್ತಿಲ್ಲ. ನಮ್ಮ ತೆರಿಗೆ ಹಣಕ್ಕೆ ಬೆಲೆ ಇಲ್ಲವಾ? ನಮ್ಮ ರಾಜ್ಯದ ಜನರ ಬೇಡಿಕೆಗೆ ಬೆಲೆ ಇಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: Lok Sabha Election 2024: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ? ಇಂದು ಅಥವಾ ನಾಳೆ ಘೋಷಣೆ!
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಆಶ್ರಯ ಯೋಜನೆ ಅಧ್ಯಕ್ಷ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಸೇರಿ ಮೂರು ಜಿಲ್ಲೆಗಳ ಎಲ್ಲ ಶಾಸಕರುಸಭೆಯಲ್ಲಿ ಉಪಸ್ಥಿತರಿದ್ದರು.