ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಭಾಷಣದಲ್ಲಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ (BJP Karnataka) ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ರಾಹುಲ್ ಗಾಂಧಿಯಂತೆ (Rahul Gandhi) ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಮಗ ಎನ್ನುವ ಕಾರಣಕ್ಕೆ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಯಾಗುತ್ತೇನೆ, ಇದರಿಂದ ಬೆಲೆ ಬರುತ್ತದೆ ಎನ್ನುವ ಕಾರಣಕ್ಕೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಟೀಕೆ ಮಾಡಿದ್ದಾರೆ. ಹತಾಶ ಮನೋಭಾವ, ಬುದ್ಧಿಭ್ರಮಣೆ ಹಾಗೂ ಅಪ್ರಬುದ್ಧತೆಯಿಂದ ಅವರು ಮಾತನಾಡಿದ್ದಾರೆ. ಅವರ ಪ್ರಜ್ಞೆಯ ಮಟ್ಟ ಬಹಳ ಕಡಿಮೆ ಇದೆ ಎಂದರು.
ಮೈಸೂರಿನ ರಾಜಕಾರಣದ ಬಗ್ಗೆ ಮಾತನಾಡಲು ಯತೀಂದ್ರ ಅವರಿಗೆ ಯೋಗ್ಯತೆ ಇಲ್ಲ. ಅಲ್ಲಿನ ರಾಜಕಾರಣ ಬಿಟ್ಟು ಕೇಂದ್ರದ ರಾಜಕಾರಣದ ಬಗ್ಗೆ ಅವರು ಮಾತನಾಡಿದ್ದಾರೆ. ಇಂತಹ ಬಾಲಿಶ ಹಾಗೂ ಕೊಬ್ಬಿನ ಹೇಳಿಕೆ ನೀಡುವುದು ಕಾಂಗ್ರೆಸ್ಸಿನ ಡಿಎನ್‌ಎ ನಲ್ಲೇ ಇದೆ. ಈಗಾಗಲೇ ರಾಹುಲ್ ಗಾಂಧಿ ಬಾಲಿಶ ಹೇಳಿಕೆ ನೀಡಿ ಜೈಲಿಗೆ ಹೋಗುವ ಸ್ಥಿತಿ ಬಂದಿದೆ. ಯತೀಂದ್ರ ಅವರೂ ಹೀಗೆ ಮಾತನಾಡುತ್ತಿದ್ದರೆ ಕೊನೆಗೆ ಜೈಲೇ ಗತಿಯಾಗಲಿದೆ. ಅವರು ಎಚ್ಚರದಿಂದ ಮಾತನಾಡಲಿ ಎಂದರು.
ಸಿಎಂ ಸಿದ್ದರಾಮಯ್ಯ ಗೂಂಡಾ ಗುರು
ಯತೀಂದ್ರ ಅವರಿಗೆ ತಮ್ಮ ತಂದೆಯ ಗೂಂಡಾಗಿರಿ ಮಾತ್ರ ಕಣ್ಣಿಗೆ ಕಾಣುವುದಿಲ್ಲ. ರಾಜ್ಯದಲ್ಲೀಗ ಅಪ್ಪ-ಮಕ್ಕಳ ಗೂಂಡಾಗಿರಿ ಜಾರಿಯಲ್ಲಿದೆ. ಸದನದಲ್ಲಿ ಪೊಲೀಸರನ್ನು ಬೆದರಿಸುವುದು, ಸ್ಪೀಕರ್‌ಗೆ ಧಮ್ಕಿ ಹಾಕುವುದು ಮಹಿಳೆಯರ ಬಟ್ಟೆ ಎಳೆದು ದೌರ್ಜನ್ಯ ಮಾಡುವುದು, ಕಾರ್ಯಕರ್ತರ ಕಪಾಳಕ್ಕೆ ಹೊಡೆಯುವುದು-ಹೀಗೆ ಸಿಎಂ ಸಿದ್ದರಾಮಯ್ಯ ಮಾಡಿದ ರೌಡಿಸಂಗೆ ಲೆಕ್ಕವೇ ಇಲ್ಲ. ಪ್ರಧಾನಿಗೆ, ರಾಷ್ಟ್ರಪತಿಗೆ ಅವನು, ಇವಳು ಎಂದು ಕರೆಯುವವರು, ಪ್ರಧಾನಿಗೆ ಹೊಡೆಯುತ್ತೇನೆ ಎನ್ನುವವರು ನಿಜವಾದ ಗೂಂಡಾಗಳು. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದರೆ ಇವರು ನಡೆಸುವುದು ರಾವಣ ರಾಜ್ಯ. ಯತಿ ಎಂದರೆ ಸನ್ಯಾಸಿ. ಆದರೆ ಇವರ ಬಾಯಲ್ಲಿ ಬರುವ ಮಾತು ರಾಕ್ಷಸನಂತಿದೆ. ಇವರ ಹೆಸರಿಗೂ ಮಾತಿಗೂ ಸಂಬಂಧವೇ ಇಲ್ಲ ಎಂದರು.
ರಾಜ್ಯದಲ್ಲಿ ಗೂಂಡಾ ಸರ್ಕಾರವಿದ್ದು, ಸಿಎಂ ಸಿದ್ದರಾಮಯ್ಯ ಗೂಂಡಾಗುರುವಾಗಿ ವರ್ತಿಸುತ್ತಿದ್ದಾರೆ. ಕರಸೇವಕರನ್ನು ಬಂಧಿಸಿ, ಹನುಮ ಧ್ವಜ ಇಳಿಸಿ, ಮುಸ್ಲಿಂ ದಂಗೆಕೋರರಿಗೆ ಆಶ್ರಯ ನೀಡಿದ್ದು ಇದೇ ಗೂಂಡಾ ಕಾಂಗ್ರೆಸ್. ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹೊಡೆದವರು ಹಾಗೂ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರು ಗೂಂಡಾ ಕಾಂಗ್ರೆಸ್ಸಿಗರೇ ಆಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಯಾರು ಗೂಂಡಾ ಎಂದು ಪಾಠ ಕಲಿಸಲಿದ್ದಾರೆ ಎಂದರು.
ಇದನ್ನೂ ಓದಿ: Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್ ಗೆಲ್ಲಲು ಮಾಸ್ಟರ್ ಪ್ಲ್ಯಾನ್!
ಸಮನ್ವಯ ಸಭೆ
ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಕೆಲಸ ಮಾಡುತ್ತಿದೆ. ಇನ್ನಷ್ಟು ಚೆನ್ನಾಗಿ ಕಾರ್ಯನಿರ್ವಹಿಸಲು ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುವುದು. ರೈತರಿಗೆ ಪರಿಹಾರ ಕೊಡದ, ಕುಡಿಯುವ ನೀರು ಕೊಡದ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಇಂತಹ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.