Site icon Vistara News

Lok Sabha Election 2024: ಲೋಕಸಭಾ ಚುನಾವಣೆಯನ್ನು ಗಮನಿಸಲು ವಿದೇಶಗಳ 25 ಪಕ್ಷಗಳನ್ನು ಆಹ್ವಾನಿಸಿದ ಬಿಜೆಪಿ

Lok Sabha Election 2024

Lok Sabha Election 2024

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಏರತೊಡಗಿದೆ. ದೇಶ್ಯಾದ್ಯಂತ ಏಳು ಹಂತದಲ್ಲಿ ನಡೆಯುವ ಮತದಾನಕ್ಕೆ ಏಪ್ರಿಲ್‌ 19ರಂದು ಚಾಲನೆ ದೊರೆಯಲಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಈ ಮಧ್ಯೆ ಬಿಜೆಪಿ (BJP) ಲೋಕಸಭಾ ಚುನಾವಣೆಯನ್ನು ವೀಕ್ಷಿಸಲು ವಿದೇಶಿ ರಾಷ್ಟ್ರಗಳ 25ಕ್ಕೂ ಅಧಿಕ ಪಕ್ಷಗಳಿಗೆ ಆಹ್ವಾನ ನೀಡಿದೆ.

ಈ ಕ್ರಮವು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಬಿಜೆಪಿಯ ಪ್ರಚಾರ ತಂತ್ರಗಳ ಬಗ್ಗೆ ಅಂತಾರಾಷ್ಟ್ರೀಯ ನಾಯಕರಿಗೆ ನೇರ ಒಳನೋಟವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಚುನಾವಣೆಯ ಪಾರದರ್ಶಕತೆಯ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಆರೋಪ ಹೊರಿಸುತ್ತಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಚುನಾವಣೆ: ಮುಂಬರುವ ಲೋಕಸಭಾ ಚುನಾವಣೆಯು ಜಗತ್ತಿನ ಗಮನ ಸೆಳೆದಿದೆ. ಮುಂದೆ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವ ಬಗ್ಗೆ ವಿಶ್ವ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿಯೇ ಚುನಾವಣೆಯ ಕಾರ್ಯ ವೈಖರಿಯನ್ನು ಗಮನಿಸಲು ಮತ್ತು ಪಕ್ಷದ ಪ್ರಚಾರ ತಂತ್ರಗಳನ್ನು ಅರ್ಥ ಮಾಡಿಕೊಳ್ಳಲು ಬಿಜೆಪಿ ವಿವಿಧ ದೇಶಗಳ ನಾಯಕರನ್ನು ಆಹ್ವಾನಿಸಿದೆ.

ಆಹ್ವಾನದ ವಿವರಗಳು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆ ಎಂದು ಕರೆಯಲ್ಪಡುವ ಭಾರತದ ಲೋಕಸಭಾ ಚುನಾವಣೆಯನ್ನು ವೀಕ್ಷಿಸಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸುವಂತೆ ಬಿಜೆಪಿ ವಿದೇಶಗಳ ಸುಮಾರು 25ಕ್ಕೂ ಹೆಚ್ಚು ಪಕ್ಷಗಳಿಗೆ ಆಹ್ವಾನ ನೀಡಿದೆ. ಹದಿಮೂರು ಪಕ್ಷಗಳು ಇಲ್ಲಿಯವರೆಗೆ ತಮ್ಮ ಭೇಟಿಗಳನ್ನು ದೃಢಪಡಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಮೆರಿಕ ಪಕ್ಷಗಳಿಗೆ ಆಹ್ವಾನವಿಲ್ಲ: ವಿಶೇಷ ಎಂದರೆ ಅಮೆರಿಕದ ಎರಡು ಪ್ರಮುಖ ಪಕ್ಷಗಳಾದ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಅನ್ನು ಆಹ್ವಾನಿಸಲಾಗಿಲ್ಲ. ಅಮೆರಿಕದ ಈ ಪಕ್ಷಗಳು ಅಧ್ಯಕ್ಷೀಯ ಚುನಾವಣೆಗೆ ತಮ್ಮದೇ ಆದ ಪ್ರತ್ಯೇಕ ನಿಯಮಗಳನ್ನು ಹೊಂದಿವೆ. ಅವುಗಳ ಸಾಂಸ್ಥಿಕ ರಚನೆಯು ಭಾರತೀಯ ಅಥವಾ ಯುರೋಪಿಯನ್ ಪಕ್ಷಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಕಾರಣ ವಿವರಿಸಿದ್ದಾರೆ.

ಇಂಗ್ಲೆಂಡ್‌ ಮತ್ತು ಜರ್ಮನಿಗೆ ಆಹ್ವಾನ: ಇಂಗ್ಲೆಂಡ್‌ನ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷ ಮತ್ತು ಜರ್ಮನಿಯ ಕ್ರಿಶ್ಚಿಯನ್ ಡೆಮಾಕ್ರಟ್ಸ್ ಮತ್ತು ಸೋಷಿಯಲ್ ಡೆಮಾಕ್ರಟಿಕ್‌ ಅನ್ನು ಬಿಜೆಪಿ ಆಹ್ವಾನಿಸಿದೆ.

ಪಾಕಿಸ್ತಾನ ಮತ್ತು ಚೀನಾಕ್ಕಿಲ್ಲ ಆಮಂತ್ರಣ: ಪಾಕಿಸ್ತಾನದೊಂದಿಗಿನ ಸಂಬಂಧಗಳು ಹದಗೆಟ್ಟಿರುವುದರಿಂದ ಮತ್ತು ಚೀನಾದೊಂದಿಗೆ ಬಾಂಧವ್ಯ ಅಷ್ಟೇನೂ ಉತ್ತಮವಾಗಿಲ್ಲ ಕಾರಣ ಈ ಎರಡೂ ದೇಶಗಳ ನಾಯಕರಿಗೆ ಆಹ್ವಾನ ನೀಡಲಾಗಿಲ್ಲ.

ನೆರೆಹೊರೆಯ ರಾಷ್ಟ್ರಗಳತ್ತ ಗಮನ: ಬಾಂಗ್ಲಾದೇಶದಿಂದ ಆಡಳಿತಾರೂಢ ಅವಾಮಿ ಲೀಗ್ ಅನ್ನು ಮಾತ್ರ ಆಹ್ವಾನಿಸಲಾಗಿದೆ. ಆದರೆ ಪ್ರತಿಪಕ್ಷ ಬಿಎನ್‌ಪಿಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಬಿಎನ್‌ಪಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ‘ಇಂಡಿಯಾ ಔಟ್’ ಅಭಿಯಾನ ನಡೆಸುತ್ತಿದೆ.

ನೇಪಾಳ ಮತ್ತು ಶ್ರೀಲಂಕಾ ಸೇರ್ಪಡೆ: ಗಮನಾರ್ಹ ಅಂಶ ಎಂದರೆ ನೇಪಾಳ ಮತ್ತು ಶ್ರೀಲಂಕಾದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ ನೀಡಿದೆ.

ಇದನ್ನೂ ಓದಿ: Exams Postponed: ಲೋಕಸಭಾ ಚುನಾವಣೆ ಹಿನ್ನೆಲೆ: ಪ್ರಮುಖ ಪರೀಕ್ಷೆಗಳ ದಿನಾಂಕ ಬದಲು; ಹೊಸ ವೇಳಾಪಟ್ಟಿ ಇಲ್ಲಿದೆ

ವೇಳಾಪಟ್ಟಿ ಮತ್ತು ಪ್ರವಾಸ: ಮೇ ಎರಡನೇ ವಾರದಲ್ಲಿ ನಡೆಯಲಿರುವ ಮೂರನೇ ಅಥವಾ ನಾಲ್ಕನೇ ಹಂತದ ಚುನಾವಣೆಯ ಸಂದರ್ಭದಲ್ಲಿ ಆಹ್ವಾನಿತ ನಾಯಕರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅನೇಕ ಕ್ಷೇತ್ರಗಳಿಗೆ ಭೇಟಿ ನೀಡುವ ಮೊದಲು ವಿದೇಶಿ ವೀಕ್ಷಕರಿಗೆ ದೆಹಲಿಯಲ್ಲಿ ಮತದಾನದ ಮಾಹಿತಿಯನ್ನು ವಿವರಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version