ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗೇರುತ್ತಿದೆ. ಈಗೇನಿದ್ದರೂ ಬರೀ ಟಿಕೆಟ್‌ನದ್ದೇ ಚರ್ಚೆ. ಯಾವ ಪಕ್ಷದಿಂದ ಯಾರು ಸ್ಪರ್ಧೆ ಮಾಡುತ್ತಾರೆ? ಬಿಜೆಪಿ ಯಾರಿಗೆ ಟಿಕೆಟ್ ಕೊಡುತ್ತೆ? ಯಾರಿಗೆ ಮಿಸ್ ಆಗಲಿದೆ? ಕಾಂಗ್ರೆಸ್‌ನಲ್ಲೇನಾಗುತ್ತದೆ? ಜೆಡಿಎಸ್‌ಗೆ ಯಾವ ಕ್ಷೇತ್ರ ಸಿಗುತ್ತದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಕುತೂಹಲವನ್ನು ಮೂಡಿಸುತ್ತಿದೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರ (Mandya Lok Sabha constituency) ಸಹ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಇಲ್ಲೀಗ ಜೆಡಿಎಸ್‌ಗೆ ಬಹುತೇಕ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ ಸುಮಲತಾ ಅಂಬರೀಶ್‌ಗೆ (Sumalatha Ambareesh) ಮಿಸ್ ಎಂದೇ ಹೇಳಲಾಗುತ್ತಿದೆ.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬುಧವಾರ ನಡೆದಿದ್ದ ಸಭೆಯಲ್ಲಿ ಚರ್ಚೆಯಾಗಿದೆ. ರಾಜ್ಯದಲ್ಲಿ ಜೆಡಿಎಸ್‌ಗೆ 3 ಕ್ಷೇತ್ರವನ್ನು ಬಿಟ್ಟುಕೊಡಲು ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ರಾಜ್ಯ ನಾಯಕರ ಅಭಿಪ್ರಾಯ ಪಡೆದು ಮೊದಲ ಹಂತದಲ್ಲಿ ಬಿಜೆಪಿ ವರಿಷ್ಠರು ತೀರ್ಮಾನ ಮಾಡಿದ್ದಾರೆ.
ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ನೀಡಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ. ಈ ಮೂರು ಕ್ಷೇತ್ರಗಳನ್ನು ಬಿಜೆಪಿಯೇ ಇಟ್ಟುಕೊಂಡರೆ ಅಥವಾ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಏನಾಗಲಿದೆ ಎಂಬ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ. ಸಾಧಕ – ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಈ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಬಂದಿದ್ದಾರೆನ್ನಲಾಗಿದೆ.
ಮೈತ್ರಿ ಸೀಟನ್ನು ಫೈನಲ್ ಮಾಡುವೆನೆಂದ ಅಮಿತ್ ಶಾ
ಈ 3 ಕ್ಷೇತ್ರದಲ್ಲಿ ಹೇಗೂ ಜೆಡಿಎಸ್ ಪ್ರಾಬಲ್ಯವಾಗಿದೆ. ಇಲ್ಲಿ ಜೆಡಿಎಸ್ ಜತೆಗೆ ಬಿಜೆಪಿ ಮತಗಳೂ ಸೇರಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಹೀಗಾಗಿ ಬಿಜೆಪಿಗೇ ಪ್ಲಸ್ ಆಗಲಿದೆ. ಹಾಗಾಗಿ ಇದೇ ಉತ್ತಮ ನಿರ್ಧಾರ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಬಗ್ಗೆ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡ ಅವರ ಜತೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ಫೈನಲ್ ಮಾಡುವುದಾಗಿ ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸುಮಲತಾ ವಿಚಾರ ನಮಗೆ ಬಿಡಿ ಎಂದ ಶಾ!
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ತೀರ್ಮಾನವಾಗುತ್ತಿದ್ದಂತೆ ರಾಜ್ಯದ ನಾಯಕರಿಗೆ ಅಲ್ಲಿನ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರ ಬಗ್ಗೆ ಪ್ರಶ್ನೆ ಎದ್ದಿದೆ. ಸುಮಲತಾ ಅವರನ್ನು ಏನು ಮಾಡುವುದು? ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಏನು ಮಾಡಬೇಕು ಎಂಬ ಪ್ರಶ್ನೆಯನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಸುಮಲತಾ ಅಂಬರೀಶ್ ಅವರ ವಿಚಾರವನ್ನು ಹೈಕಮಾಂಡ್‌ಗೆ ಬಿಡಿ ಎಂದು ಹೇಳಿದ್ದಾರೆನ್ನಲಾಗಿದೆ. ಹೀಗಾಗಿ ಸುಮಲತಾ ಅವರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಕ್ಕೆ ಅವರಿಗೆ ಯಾವ ರೀತಿಯಲ್ಲಿ ಸ್ಥಾನಮಾನವನ್ನು ಕಲ್ಪಿಸಲಾಗುತ್ತದೆ? ಇಲ್ಲವೇ ಅವರಿಗೆ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಟಿಕೆಟ್ ಕೊಡಲಾಗುತ್ತದೆಯೇ? ಅಥವಾ ಇನ್ಯಾವುದೋ ಭರವಸೆಯನ್ನು ನೀಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನಾಳೆ ಫೈನಲ್; ಇಲ್ಲಿದೆ 28 ಕ್ಷೇತ್ರಗಳ ಫುಲ್ ಲಿಸ್ಟ್!
ಗೊಂದಲಕ್ಕೆ ಕಾರಣವಾಗಿರುವ ಸುಮಲತಾ ಹೇಳಿಕೆ
“ರಾಜ್ಯಸಭೆಗೆ ಹೋಗಲ್ಲ, ಮಂಡ್ಯವನ್ನೂ ಬಿಡಲ್ಲ” ಎಂದು ಈ ಹಿಂದೆ ಶ್ರೀರಂಗಪಟ್ಟಣದ ಕಾರ್ಯಕ್ರಮವೊಂದರಲ್ಲಿ ಸಂಸದೆ ಸುಮಲತಾ ಅಂಬರೀಶ್ ಖಡಕ್ ಆಗಿ ಹೇಳಿದ್ದರು. ನನ್ನ ಚುನಾವಣಾ ತಯಾರಿಯ ಭಾಗವಾಗಿ ಈ ಸಭೆ ನಡೆದಿದೆ. ನಾನು ರಾಜಕೀಯಕ್ಕೆ ಬಂದಿರೋದು ಮಂಡ್ಯ ಜನತೆಯ ವಿಶ್ವಾಸ ಕಳೆದುಕೊಳ್ಳಲು ಅಲ್ಲ. ನಾನು ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಬೇಕು ಅಂದರೆ ನನಗೆ ತುಂಬ ಯೋಚನೆ ಮಾಡಬೇಕಾಗಿಲ್ಲ. ನಿರ್ಧಾರ ಮಾಡಲು ಒಂದು ಕ್ಷಣ ಸಾಕು. ಆದರೆ, ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ.ʼʼ ಎಂದು ಖಡಕ್ಕಾಗಿ ಹೇಳಿದ್ದರು. ಜತೆಗ ರಾಜ್ಯಸಭೆಗೆ ಹೋಗುವ ಪ್ರಶ್ನೆಯೂ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಮಂಡ್ಯ ಟಿಕೆಟ್ ಕೈತಪ್ಪಿದರೆ ಸುಮಲತಾ ನಿರ್ಧಾರ ಏನೆಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.