ಕೋಲಾರ: ಕೋಲಾರದಲ್ಲಿ (Kolar) ಲೋಕಸಭೆ ಚುನಾವಣೆ (Lok Sabha Election 2024) ಸ್ಪರ್ಧೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಕೂತಿರುವ ಹಿನ್ನೆಲೆಯಲ್ಲಿ, ಉಭಯ ಬಣಗಳ ತಿಕ್ಕಾಟದಿಂದ ಬೇಸತ್ತಿರುವ ಹೈಕಮಾಂಡ್ ಅಚ್ಚರಿ ಅಭ್ಯರ್ಥಿಯನ್ನು ಮುನ್ನೆಲೆಗೆ ತರಲಿದೆ ಎನ್ನಲಾಗಿದೆ.
ಟಿಕೆಟ್ ಆಯ್ಕೆ ಕಗ್ಗಂಟು ಇಂದು ಬಗೆಹರಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಠಿಣ ನಿರ್ಧಾರ ಮಾಡಿದ್ದು, ಕೆ.ವಿ ಗೌತಮ್ ಎಂಬುವವರ ಹೆಸರು ಶಿಫಾರಸು ಮಾಡಲು ಚಿಂತಿಸಿದ್ದಾರೆ. ಕೆ.ವಿ ಗೌತಮ್ ಸದ್ಯ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದಾರೆ.
ಕೋಲಾರದಲ್ಲಿ ಪ್ರಾತಿನಿಧ್ಯಕ್ಕಾಗಿ ರಮೇಶ್ ಕುಮಾರ್ (Ramesh Kumar) ಬಣ ಹಾಗೂ ಸಚಿವ ಕೆ.ಎಚ್ ಮುನಿಯಪ್ಪ (KH Muniyappa) ಟೀಮ್ ನಡುವೆ ಜಿದ್ದಾಜಿದ್ದಿ ಇದೆ. ಹೀಗಾಗಿ ಎರಡು ಬಣಗಳಿಗೂ ಒಪ್ಪಿಗೆ ಆಗುವ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತಿದೆ. ಅದರಲ್ಲಿ ಕೆ.ವಿ ಗೌತಮ್ ಹೆಸರು ಪ್ರಮುಖವಾಗಿದೆ.
ಟಿಕೆಟ್ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಕೊಡಬೇಕು ಎಂದು ಮುನಿಯ್ಪ ಪಟ್ಟು ಹಿಡಿದಿದ್ದರು. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎಂದು ರಮೇಶ್ ಕುಮಾರ್, ಎಂಸಿ ಸುಧಾಕರ್ ಟೀಮ್ ಪಟ್ಟು ಬಿಗಿಮಾಡಿದೆ. ಸಿ.ಎಂ ಮುನಿಯಪ್ಪ ಅವರನ್ನು ಅಭ್ಯರ್ಥಿ ಮಾಡಿ ಎಂದು ರಮೇಶ್ ಕುಮಾರ್ ಬಣ ಹೇಳುತ್ತಿದೆ. ಉಭಯ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲು ಅಚ್ಚರಿ ಹೆಸರು ಶಿಫಾರಸು ಮಾಡಲು ನಾಯಕರು ಮುಂದಾಗಿದ್ದಾರೆ. ಸದ್ಯ ಉಭಯ ಬಣಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿವೆ.
ತಮ್ಮ ಆಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಲಾಬಿ ಮುಂದುವರಿದಿದ್ದು, ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತನಾಡಿದ್ದಾರೆ. ಒತ್ತಡಕ್ಕೆ ಮಣಿದು ಟಿಕೆಟ್ ತಪ್ಪಿಸಿದರೆ ತಪ್ಪು ಸಂದೇಶ ಹೋಗುತ್ತದೆ ಎಂದಿದ್ದಾರೆ.
ಪ್ರಚಾರ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆ
ಕೋಲಾರ ಸಮಸ್ಯೆ ಬಗೆಹರಿದಿದ್ದರೆ ಇಂದು ಕೋಲಾರದ ಕುರುಡುಮಲೆಯಿಂದಲೇ ಕಾಂಗ್ರೆಸ್ ಪ್ರಚಾರ ಆರಂಭಿಸಬೇಕಿತ್ತು. ಕೋಲಾರ ಅಭ್ಯರ್ಥಿ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಪ್ರಚಾರ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಹೈಕಮಾಂಡ್ ಇಂದು ಬಿಡುಗಡೆ ಮಾಡಲೇಬೇಕಿದೆ.
ಸದ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಚಿಕ್ಕಬಳ್ಳಾಪುರ- ರಕ್ಷರಾಮಯ್ಯ
ಚಾಮರಾಜನಗರ – ಸುನಿಲ್ ಬೋಸ್
ಬಳ್ಳಾರಿ – ತುಕಾರಾಂ
ಕೋಲಾರ – ಚಿಕ್ಕಪೆದ್ದಣ್ಣ/ಕೆ.ವಿ ಗೌತಮ್/ ಸಿ.ಎಂ ಮುನಿಯಪ್ಪ/ಎಲ್ ಹನುಮಂತಯ್ಯ