Site icon Vistara News

Modi 3.0 Cabinet: ಮೂರನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ; ಅಭಿನಂದನೆ ತಿಳಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

Modi 3.0 Cabinet

Modi 3.0 Cabinet

ಬೆಂಗಳೂರು: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ಬಿಜೆಪಿಗೆ ಜೆಡಿಎಸ್‌ ಕೂಡ ಬೆಂಬಲ ಸೂಚಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಅನಾರೋಗ್ಯ ಕಾರಣದಿಂದ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ (HD Deve Gowda) ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ ಅವರು ಅದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಅವರು ಬರೆದುಕೊಂಡಿದ್ದಾರೆ.

ಮೋದಿ ಪ್ರಮಾಣವಚನಕ್ಕೆ ಸಿದ್ಧತೆ

ಜವಾಹರ ಲಾಲ್‌ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾದ ಖ್ಯಾತಿಗೆ ನರೇಂದ್ರ ಮೋದಿ ಭಾಜನರಾಗಲಿದ್ದಾರೆ. ಇಂದು ಸಂಜೆ 7.15ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಜತೆಗೆ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಬಿಗಿ ಬಂದೋಬಸ್ತ್‌

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ದೆಹಲಿಯ ಎಲ್ಲೆಡೆ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಸುಮಾರು 500 ಸಿಸಿಟಿವಿಗಳ ಕಣ್ಗಾವಲು ಇದೆ. ನೋ ಫ್ಲೈಯಿಂಗ್‌ ಜೋನ್‌ ಎಂದು ಘೋಷಿಸಿದ ಕಾರಣ ಯಾವುದೇ ಡ್ರೋನ್‌ಗಳ ಹಾರಾಟ ನಡೆಸುವಂತಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ಭವನಕ್ಕೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Modi 3.0 Cabinet: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿ?

ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ

ಭಾನುವಾರ ರಾಜಘಾಟ್‌ಗೆ ತೆರಳಿ, ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದ ಮೋದಿ, ತದನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ತೆರಳಿ ಗೌರವ ವಂದನೆ ಸಲ್ಲಿಸಿದರು. ರಾಷ್ಯ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಮೂರು ಸೇನಾಪಡೆಗಳು ಮುಖ್ಯಸ್ಥರು ಮೋದಿ ಅವರಿಗೆ ಸಾಥ್ ನೀಡಿದರು.

Exit mobile version