Site icon Vistara News

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಇವರಿಗೆಲ್ಲ ಸಚಿವ ಸ್ಥಾನ ಫಿಕ್ಸ್?‌

Modi 3.0 Cabinet

Modi 3.0 Cabinet

ಬೆಂಗಳೂರು: ಬಹುಮತದೊಂದಿಗೆ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಇಂದು (ಜೂನ್‌ 9) ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ. ಹಾಗಾದರೆ ಸಚಿವ ಸ್ಥಾನದ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ (Modi 3.0 Cabinet).

ಮೋದಿ ಅವರ ಜತೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಿಂದ ಸಂಸದರೂ ಈ ಪಟ್ಟಿಗೆ ಸೇರುವುದು ಖಚಿತ. 4+1 ಫಾರ್ಮುಲಾದ ಪ್ರಕಾರ ಒಟ್ಟು ಐವರು ಮೋದಿ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇದೆ. ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗುವುದು ಪಕ್ಕಾ ಎನ್ನಲಾಗಿದೆ. ಇವರ ಜತೆಗೆ ಪ್ರಹ್ಲಾದ ಜೋಶಿ ಅವರಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗಲಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೂ ಸಚಿವರಾಗಿ ಮುಂದುವರಿಯಲಿದ್ದು, ಕರ್ನಾಟಕದ ಕೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಎನ್ನುವ ಮಾತು ಕೇಳಿ ಬಂದಿದೆ. ಇನ್ನೊಂದು ಒಂದು ಸ್ಥಾನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಡಾ.ಮಂಜುನಾಥ್ ಅವರಿಗೆ ಲಭಿಸುವ ಸಾಧ್ಯತೆ ಇದೆ.

ಮತ್ತೊಂದು ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದೆ. ಬಹುತೇಕ ಮಾಜಿ ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಇದು ಒಲಿಯುವ ಸಾಧ್ಯತೆ ಇದೆ. ಈ ನಡುವೆ ನಾಲ್ಕು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರಿಂದಲೂ ಸಚಿವ ಸ್ಥಾನ ಪಡೆಯುವ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಇನ್ನೂ ಒಂದು ಸ್ಥಾನ ಹೆಚ್ಚು ಸಿಕ್ಕಿದರೆ ಬಹುತೇಕ ದಲಿತ ಕೋಟಾದಲ್ಲಿ ಗೋವಿಂದ ಕಾರಜೋಳ ಇಲ್ಲವೇ ರಮೇಶ್ ಜಿಗಜಿಣಿಗೆ ಲಕ್ ಹೊಡೆಯಲಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.

ಇನ್ನು ಹಿರಿಯ ನಾಯಕರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಮತ್ತು ಡಾ.ಸುಧಾಕರ್‌ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇಲ್ಲ. ಹೀಗಾಗಿ ಸದ್ಯ ಯಾರೆಲ್ಲ ಸಚಿವರಾಗುತ್ತಾರೆ ಎನ್ನುವ ಕುತೂಹಲ ಮುಂದುವರಿದಿದೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಜೂನ್‌ 7) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬೆಂಬಲ ನೀಡಿರುವ ಪತ್ರದೊಂದಿಗೆ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದ ಅವರು ಹಕ್ಕು ಮಂಡಿಸಿದ್ದಾರೆ. ಇನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರಿಗೆ ದ್ರೌಪದಿ ಮುರ್ಮು ಅವರು ಸಕ್ಕರೆ ಮಿಶ್ರಣ ಆಗಿರುವ ಮೊಸರನ್ನು ತಿನ್ನಿಸಿ, ಶುಭ ಕೋರಿದ್ದಾರೆ.

Exit mobile version