Site icon Vistara News

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

Modi in Karnataka Modi roadshow in coastal area Mangalore Watch video

ಮಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯ ಭದ್ರಕೋಟೆ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೇನಿಯಾ ಕಂಡುಬಂತು. ಮೈಸೂರು ಸಮಾವೇಶ ಮುಗಿಸಿ ನೇರವಾಗಿ ಮಂಗಳೂರಿಗೆ ಬಂದಿಳಿದ ಮೋದಿಯನ್ನು (Modi in Karnataka) ನೋಡಲು ರಸ್ತೆಗಳ ಇಕ್ಕೆಲಗಳಲ್ಲೂ ಜನ ಸೇರಿದ್ದರು. ಸಾವಿರಾರು ಮಂದಿ ಮೋದಿ ರೋಡ್‌ ಶೋಗೆ ಸಾಕ್ಷಿಯಾದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಾರಾಯಣ ಗುರು ಸರ್ಕಲ್‌ನಿಂದ ನವಭಾರತ್‌ ಸರ್ಕಲ್‌ವರೆಗೆ ಮೋದಿ ರೋಡ್‌ ಶೋ ನಡೆಸಿದರು. ಈ ವೇಳೆ “ಮೋದಿ.. ಮೋದಿ.. ಜೈ ಜೈ ಮೋದಿ” ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮಧ್ಯೆ ಮಧ್ಯೆ ಜೈ ಶ್ರೀರಾಮ್‌ ಘೋಷಣೆ ಕೇಳಿಬಂತು.

ನಾರಾಯಣ ಗುರು ಸರ್ಕಲ್‌ನಿಂದ ಲಾಲ್‌ಬಾಗ್‌ನ ಮಂಗಳೂರು ಪಾಲಿಕೆ ಕಚೇರಿ, ಬಳ್ಳಾಲ್‌ಬಾಗ್ ದಾಟಿ ಎಂ.ಜಿ. ರಸ್ತೆ ಮೂಲಕ ಸಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್‌ವರೆಗೆ ಸುಮಾರು 2 ಕಿ.ಮೀ. ದೂರದವರೆಗೆ ಮೋದಿ ರೋಡ್‌ ಶೋ ನಡೆಸಿದರು. ಹೀಗಾಗಿ ರೋಡ್‌ ಶೋ ನಡೆದ ಮಾರ್ಗವೇ ಕೇಸರಿ ಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಕೇಸರಿ ಬಣ್ಣವೇ ಕಣ್ಣು ಕುಕ್ಕುತ್ತಲಿತ್ತು.

ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ್‌ ಪೂಜಾರಿ ಅಕ್ಕ ಪಕ್ಕ

ನರೇಂದ್ರ ಮೋದಿ ಅವರ ರೋಡ್‌ ಪ್ರಾರಂಭವಾಗುತ್ತಿದ್ದಂತೆ ಸೇರಿದ್ದ ನಾಗರಿಕರು ಮೋದಿ ಮೋದಿ ಘೋಷಣೆಯನ್ನು ಕೂಗಿದರು. ಈ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಕ್ಕ-ಪಕ್ಕ ನಿಂತಿದ್ದರು. ಮೋದಿ, ಚೌಟ ಹಾಗೂ ಪೂಜಾರಿ ಬಿಜೆಪಿಯ ಕಮಲ ಚಿಹ್ನೆಯ ಲೋಗೋವನ್ನು ಪ್ರದರ್ಶನ ಮಾಡಿದರು.

ಗಮನ ಸೆಳೆದ ನರೇಂದ್ರ ಮೋದಿ ರೋಡ್‌ ಶೋ

ಇದನ್ನೂ ಓದಿ: Modi In Karnataka: ಈ ಮೋದಿ ಇರೋವರೆಗೂ ಹಿಂದು ಧರ್ಮವನ್ನು ನಾಶ ಮಾಡಲು ಬಿಡಲ್ಲ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ವಾಗ್ದಾಳಿ

ಮಹಾನಗರ ಪಾಲಿಕೆ ಜಂಕ್ಷನ್ ಭರ್ತಿ!

ಪಿಎಂ ನರೇಂದ್ರ ಮೋದಿ ಅವರನ್ನು ಕಾಣಲು ಎರಡು ಕಿಲೋ ಮೀಟರ್ ರಸ್ತೆಯಲ್ಲಿ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು. ಮಹಾನಗರ ಪಾಲಿಕೆ ಜಂಕ್ಷನ್ ಭರ್ತಿಯಾಗಿ ಅಕ್ಕಪಕ್ಕದ ಕಟ್ಟಡಗಳನ್ನು ಜನರು ಏರಿ ಕುಳಿತಿದ್ದರು. ಎರಡು ಕಿಲೋ ಮೀಟರ್ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಿ ನೋಡಿದರಲ್ಲಿ ಜನರು ಸೇರಿದ್ದರು. ಅಭಿಮಾನಿಗಳಿಂದ ಮೋದಿ ಮೋದಿ.. ಜೈ ಜೈ ಮೋದಿ.. ಜೈಕಾರಗಳು ಮೊಳಗಿದವು. ಈ ವೇಳೆ ಮೋದಿ ಮುಖವಾಡ, ಫ್ಲಾಗ್ -ಕೇಸರಿ ಟೋಪಿ, ಬಾವುಟಗಳನ್ನು ಹಿಡಿದು ಕೆಲವರು ಗಮನ ಸೆಳೆದಿದ್ದಾರೆ.

ನಮೋ ಸ್ವಾಗತಕ್ಕೆ ಬಂತು ಹುಲಿಗಳ ದಂಡು!

ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಹುಲಿಗಳ ದಂಡೇ ಬಂದಿತ್ತು. ಅಂದರೆ ಹುಲಿ ವೇಷಧಾರಿಗಳು ಗಮನ ಸೆಳೆದರು. ಈ ಹುಲಿವೇಷಧಾರಿಗಳಿಗೆ ವಿಶೇಷ ಬಣ್ಣದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನು ಈ ಕಲಾವಿದರ ಎದೆ ಮೇಲೆ ಮೋದಿ ಭಾವಚಿತ್ರವನ್ನು ಬಿಡಿಸಲಾಗಿತ್ತು.

ಲಾಲ್‌ಬಾಗ್ ಸರ್ಕಲ್‌ನಲ್ಲಿ ಹುಲಿವೇಷ ಕುಣಿತಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ದಕ್ಷಿಣ ಕನ್ನಡ ಬಿಜೆಪಿ ಘಟಕದವರು ಹುಲಿ ವೇಷ ಕುಣಿತದ ವ್ಯವಸ್ಥೆಯನ್ನು ಮಾಡಿದ್ದರು. ಪ್ರತಿ ಬಾರಿ ಕೃಷ್ಣ ಜನ್ಮಾಷ್ಟಮಿ ನವರಾತ್ರಿ ಸಂದರ್ಭದಲ್ಲಿ ಮಾತ್ರ ಈ ಹುಲಿವೇಷ ಕುಣಿತವನ್ನು ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ ಮೋದಿ ಆಗಮನ ಹಿನ್ನೆಲೆಯಲ್ಲಿ ವಿಶೇಷ ವೇದಿಕೆ ನಿರ್ಮಾಣ ಮಾಡಿ ಹುಲಿವೇಷ ಕುಣಿತಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇದನ್ನೂ ಓದಿ: ದೇಶಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕರ್ನಾಟಕದಿಂದ ನೂರಾರು ಕೋಟಿ ರೂ. ಕಪ್ಪು ಹಣ ರವಾನೆ: ಮೋದಿ ಆರೋಪ

ಮೋದಿಗೆ ನೋಡಲು ಬಂದ ಪುಟಾಣಿ ಶ್ರೀರಾಮ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಮಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಮಂಗಳೂರಿನ ಪಿವಿಎಸ್ ಸರ್ಕಲ್‌ನಲ್ಲಿ ರಸ್ತೆಯುದಕ್ಕೂ ಜನ ಸಾಗರವೇ ತುಂಬಿತ್ತು. ಅಲ್ಲಿ ಶ್ರೀರಾಮನ ವೇಷ ಧರಿಸಿ ಬಂದಿದ್ದ ಪುಟಾಣಿ ಮಗುವೊಂದು ಎಲ್ಲರ ಗಮನವನ್ನು ಸೆಳೆದಿದೆ.

2 ಕಿ.ಮೀ.ವರೆಗೆ ಲೈಟಿಂಗ್‌ ವ್ಯವಸ್ಥೆ

ರೋಡ್ ಶೋ ಹಿನ್ನೆಲೆಯಲ್ಲಿ ಮೋದಿ ಸಾಗುವ 2 ಕಿ.ಮೀ. ವ್ಯಾಪ್ತಿಯುದ್ದಕ್ಕೂ ಲೈಟಿಂಗ್ಸ್ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದರು. ಪ್ರತಿ ಕಂಬಗಳಲ್ಲೂ ಐದಾರು ಎಲ್ಇಡಿ ಲೈಟ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. ಅಲ್ಲದೆ, ಭದ್ರತೆ ದೃಷ್ಟಿಯಿಂದ ಸಹ ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಪ್ರಧಾನಿ ಮೋದಿ ಭದ್ರತಾ ಪಡೆ ಸಿಬ್ಬಂದಿ ಎಲ್ಲ ಕಡೆಯೂ ಹದ್ದಿನ ಕಣ್ಣಿಟ್ಟಿದ್ದರು.

ಮೋದಿ ರೋಡ್‌ಶೋಗೆ ಬಳಸಿದ್ದು ಈ ವಾಹನ

ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ನಡೆಸಲು ವಿಶೇಷವಾಗಿ ವಾಹನವನ್ನು ಸಿದ್ಧಪಡಿಸಲಾಗಿತ್ತು. ಕೇಸರಿಮಯವಾಗಿರುವ ಕಾರನ್ನು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಅದರ ಡೋರ್‌ಗೆ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಬರೆಯಲಾಗಿದೆ. ಜತೆಗೆ ಇನ್ನೊಂದು ಡೋರ್‌ನಲ್ಲಿ ಬಿಜೆಪಿಯ ಲೋಗೊವನ್ನು ಹಾಕಲಾಗಿತ್ತು. ಜತೆಗೆ ನರೇಂದ್ರ ಮೋದಿ ಅವರ ಫೋಟೊವನ್ನು ಹಾಕಲಾಗಿತ್ತು.

ಮತ್ತೆ 1 ಕಿ. ಮೀ. ರೋಡ್‌ ಶೋ ವಿಸ್ತರಣೆ

ಎರಡು ಕಿ.ಮೀ. ವರೆಗೆ ರೋಡ್‌ ಶೋ ನಡೆಸಿ ನವಭಾರತ್ ಸರ್ಕಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ತಲುಪಿದರು. ಆದರೆ, ಅಲ್ಲಿಂದ ಇನ್ನೂ ಮುಂದೆ ಸುಮಾರು 1 ಕಿ.ಮೀ. ವರೆಗೆ ಜನರು ಸೇರಿದ್ದನ್ನು ಮೋದಿ ಕಂಡರು. ಹೀಗಾಗಿ ರೋಡ್‌ ಶೋವನ್ನು ಮುಂದುವರಿಸಲು ಮೋದಿ ಸೂಚನೆ ನೀಡಿದ್ದಾರೆ. ಹೀಗಾಗಿ ಜನರಿಗೆ ನಿರಾಶೆ ಮಾಡದೆ ಸುಮಾರು ಒಂದು ಕಿ.ಮೀ. ವರೆಗೆ ರೋಡ್‌ ಶೋವನ್ನು ಮುಂದುವರಿಸಲಾಯಿತು. ಹೀಗಾಗಿ ಹಂಪನಕಟ್ಟೆವರೆಗೆ ಮೋದಿ ಜನರತ್ತ ಕೈಬೀಸುತ್ತಾ ಸಾಗಿದರು. ಇದು ಮೋದಿ ಬರುವಿಕೆಗಾಗಿ ಕಾದು ನಿಂತಿದ್ದ ನಾಗರಿಕರಿಗೆ ಖುಷಿಯನ್ನು ತಂದಿತು. ಅಲ್ಲಿಂದ ಮೋದಿ ಮಂಗಳೂರು ಏರ್ಪೋರ್ಟ್‌ಗೆ ಹೋಗಿ ವಿಮಾನದ ಮೂಲಕ ಕೊಚ್ಚಿಗೆ ತೆರಳಿದರು.

Exit mobile version