Site icon Vistara News

Modi in Karnataka: ಏಪ್ರಿಲ್‌ 28 – 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ; ಯಾವ ಯಾವ ಕ್ಷೇತ್ರದಲ್ಲಿ ಮತ ಬೇಟೆ?

Modi in Karnataka PM Narendra Modi to visit from April 28 and 29

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಒಂದು ಸುತ್ತಿನ ಮತ ಬೇಟೆ ಮುಗಿಸಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡನೇ ಹಂತದ ಚುನಾವಣೆಗೆ ರಿಎಂಟ್ರಿ ಕೊಡಲಿದ್ದಾರೆ. ಈ ವೇಳೆ ಮೋದಿ (Modi in Karnataka) ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್‌ 28 ಹಾಗೂ 29ರಂದು ಕರ್ನಾಟಕದಲ್ಲಿ ಜನರನ್ನು ಮೋಡಿ ಮಾಡಲು ಮೋದಿ ಮುಂದಾಗಿದ್ದಾರೆ.

ಏಪ್ರಿಲ್‌ 28ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಮೂರು ಕಡೆ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ದಾವಣಗೆರೆ, ಬೆಳಗಾವಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ. ಈ ಮೂಲಕ ಇವುಗಳೂ ಸೇರಿದಂತೆ ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳ ಮತದಾರರನ್ನೂ ಸೆಳೆಯಲು ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ.

ಮೂರು ಕಡೆಯೂ ಬೃಹತ್‌ ಸಮಾವೇಶ

ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಬೃಹತ್‌ ಸಮಾವೇಶ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಂದು ಬೆಳಗಾವಿಯಲ್ಲಿ 28 ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

29ರಂದು 4 ಕಡೆ ಸಮಾವೇಶ

ಏಪ್ರಿಲ್‌ 29ರಂದು ಕಲಬುರಗಿ, ಬಳ್ಳಾರಿ, ರಾಯಚೂರು ಅಥವಾ ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶವನ್ನು ನಡೆಸಲಿದ್ದಾರೆ.

ಕರ್ನಾಟಕದಲ್ಲಿ ಇಂದು ಅಮಿತ್‌ ಶಾ, ಪ್ರಿಯಾಂಕಾ ವಾದ್ರಾ ಪ್ರಚಾರ

ಮಂಗಳವಾರ (ಏಪ್ರಿಲ್‌ 23) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಅವರು ಅಬ್ಬರದ ಪ್ರಚಾರ ಮಾಡಲಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಮಂಗಳವಾರ ಅಮಿತ್‌ ಶಾ ಹಾಗೂ ಪ್ರಿಯಾಂಕಾ ವಾದ್ರಾ ಅವರು ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ. ಇಂದು ಸಂಜೆ 7.50ಕ್ಕೆ ಅಮಿತ್‌ ಶಾ ಅವರು ತೇಜಸ್ವಿ ಸೂರ್ಯ ಪರ ರೋಡ್‌ ಶೋ ನಡೆಸಲಿದ್ದಾರೆ. ಸ್ವಾಮಿ ವಿವೇಕಾನಂದ ವೃತ್ತದಿಂದ ಸೇಂಟ್‌ ಫ್ರಾನ್ಸಿಸ್‌ ಶಾಲೆವರೆಗೂ ಅಮಿತ್‌ ಶಾ ಅವರು ರೋಡ್‌ ಶೋ ನಡೆಸುವ ಮೂಲಕ ತೇಜಸ್ವಿ ಸೂರ್ಯ ಪರ ಮತಯಾಚನೆ ಮಾಡಲಿದ್ದಾರೆ. ರೋಡ್‌ ಶೋಗಾಗಿ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. 8.45ರವರೆಗೆ ರೋಡ್‌ ಶೋ ನಡೆಯಲಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಮಧ್ಯಾಹ್ನ 2 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪ್ರಿಯಾಂಕಾ ವಾದ್ರಾ ಅವರು ಭಾಷಣ ಮಾಡಲಿದ್ದಾರೆ. ಇದಾದ ನಂತರ ಸಂಜೆ ಬೆಂಗಳೂರಿಗೆ ಆಗಮಿಸುವ ಪ್ರಿಯಾಂಕಾ ವಾದ್ರಾ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಪರವಾಗಿ ಪ್ರಚಾರ ನಡೆಸುವ ಮೂಲಕ ಹೆಣ್ಣುಮಕ್ಕಳ ಮತ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.

ಅಮಿತ್‌ ಶಾ ಅವರು ಬೊಮ್ಮನಹಳ್ಳಿ ವೃತ್ತದಿಂದ ಪ್ರಚಾರ ಆರಂಭಿಸಿದರೆ, ಪ್ರಿಯಾಂಕಾ ವಾದ್ರಾ ಅವರು ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಎಚ್.ಎಸ್. ಆರ್ ಬಡಾವಣೆಯಿಂದ ಪ್ರಚಾರ ಆರಂಭಿಸಲಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಏಪ್ರಿಲ್‌ 24ರಂದೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದರಿಂದಾಗಿ ಮಂಗಳವಾರದ ಪ್ರಚಾರವು ಪ್ರಾಮುಖ್ಯತೆ ಪಡೆದಿದೆ. ಕರ್ನಾಟಕದಲ್ಲಿ ಈಗಾಗಲೇ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿದ್ದಾರೆ.

Exit mobile version