ಹೊಸದಿಲ್ಲಿ: ನಿಮ್ಮ ಖಾತೆಗೆ 1 ಲಕ್ಷ ರೂ. ಹಾಕ್ತೇವೆ, ನಮಗೆ ಮತ ಹಾಕಿ ಎಂದು ಕಾಂಗ್ರೆಸ್ ಪಕ್ಷ ದೇಶಾದ್ಯಂತ ಭಾರಿ ಪ್ರಚಾರ ನಡೆಸಿತು. ಕೊಡುಗೆಗಳ ಕಾರ್ಡ್‌ಗಳನ್ನು ಮನೆಮನೆಗೆ ವಿತರಿಸಿತು. ಆದರೂ ಜನ ಆ ಪಕ್ಷವನ್ನು ಧಿಕ್ಕರಿಸಿದ್ದಾರೆ. 1 ಲಕ್ಷ ಕೊಡಿ ಎಂದು ಕೆಲವೆಡೆ ಜನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದಾರೆ ಎಂದು ನರೇಂದ್ರ ಮೋದಿ (Narendra Modi) ಅವರು ವ್ಯಂಗ್ಯವಾಡಿದರು.
ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಈಗ ಅಧಿಕಾರ ಕಳೆದುಕೊಂಡ ಮೇಲೆ ಜನರಿಗೆ ನಾನಾ ಕೊಡುಗೆಗಳ ಆಮಿಷ ಒಡ್ಡುತ್ತ ಜನರನ್ನು ಮರಳು ಮಾಡುವ ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದು ಮೋದಿ ಹೇಳಿದರು.
Addressing the NDA Parliamentary Party meeting.https://t.co/DLZlCgVKem
— Narendra Modi (@narendramodi) June 7, 2024
ದೇಶಾದ್ಯಂತ ಕಾಂಗ್ರೆಸ್ ಕಚೇರಿಗಳ ಎದುರು ಜನ ಗುಂಪುಗುಂಪಾಗಿ ಸೇರಿ, ನೀವು ಕೊಡುತ್ತೇವೆ ಎಂದಿದ್ದ 1 ಲಕ್ಷ ರೂ. ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಅವರನನ್ನು ಹೊಡೆದು ಬಡಿದು ಓಡಿಸುತ್ತಿದ್ದಾರೆ. ಇದು ಬಡವರಿಗೆ ಮಾಡುವ ಅವಮಾನ ಎಂದು ಮೋದಿ ಅಭಿಪ್ರಾಯಪಟ್ಟರು.
ನೂರು ದಾಟದ ಕಾಂಗ್ರೆಸ್
ಹತ್ತು ವರ್ಷಗಳ ಬಳಿಕವೂ ಕಾಂಗ್ರೆಸ್‌ಗೆ 100 ಸೀಟುಗಳನ್ನು ದಾಟಲೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಜನ ವಿರೋಧಿ ನೀತಿಯನ್ನು ಮತದಾರರು ಮರೆತಿಲ್ಲ. ಯುಪಿಎ ಹೆಸರನ್ನು ಇಂಡಿ ಒಕ್ಕೂಟ ಎಂದು ಬದಲಾಯಿಸಿಕೊಂಡರೂ ಜನ ಇವರ ಹಗರಣಗಳನ್ನು ಮರೆತಿಲ್ಲ. ಹಾಗಾಗಿ ಮೂರನೇ ಬಾರಿ ದೇಶದ ಜನ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದರು.
ಪ್ರತಿಪಕ್ಷಗಳು ಅಭಿವೃದ್ಧಿಯ ವಿರೋಧಿ
ಚುನಾವಣೆಯುದ್ದಕ್ಕೂ ಪ್ರತಿಪಕ್ಷಗಳು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ದೂಷಿಸುತ್ತ ಬಂದವು. ಆದರೆ ಮತ ಎಣಿಕೆ ಮುಗಿದ ಬಳಿಕ ಮೌನವಾಗಿವೆ. ಕಾಂಗ್ರೆಸ್ ಮತ್ತಿತರ ಪಕ್ಷಗಳು ಮತಯಂತ್ರಗಳಿಗೆ ಕಳಂಕ ಹೊರಿಸುವ ಮೂಲಕ ಪ್ರಜಾಪ್ರಭುತ್ವವನ್ನೂ ಅವಮಾನಿಸಿದವು. ಈ ಪಕ್ಷಗಳಿಗೆ ಹಳೆಯ ಪಾಳೇಗಾರಿಕೆಯಲ್ಲೇ ನಂಬಿಕೆ ಇದೆ. ಇವರು ಆಧುನಿಕತೆಯನ್ನು ಬೆಂಬಲಿಸುವುದಿಲ್ಲ. ಇವರು ಡಿಜಿಟಲ್ ಪಾವತಿಯನ್ನು ವಿರೋಧಿಸುತ್ತಾರೆ. ಇವರು ಆಧಾರ್ ವ್ಯವಸ್ಥೆಗೆ ಅಡ್ಡಿಪಡಿಸುತ್ತಾರೆ. ದೇಶಕ್ಕೆ ಉತ್ತಮ ಕೊಡುಗೆಯಾದ ಆಧಾರ್ ವ್ಯವಸ್ಥೆಯನ್ನು ಹಾಳುಗೆಡವಲು ಇವರು ಎಷ್ಟೆಲ್ಲ ಪ್ರಯತ್ನಪಟ್ಟರು. ಇವರು ಅಭಿವೃದ್ಧಿ ವಿರೋಧಿಗಳು ಎಂದು ಟೀಕಿಸಿದರು.
ಮುಂದಿನ ಹತ್ತು ವರ್ಷ ನಮ್ಮದೇ ಆಡಳಿತ
ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದಕ್ಷಿಣದಲ್ಲೂ ಬಿಜೆಪಿಯ ದಾಪುಗಾಲು
ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ. ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಮೋದಿ ಹೇಳಿದರು.
ತಮಿಳುನಾಡು ಮತ್ತು ಕೇರಳದ ಜನರು ಸೋಲಿನ ಛಾಯೆಯ ನಡುವೆಯೂ ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ. ಅಲ್ಲಿ ನಾಳೆ ಭವಿಷ್ಯದಲ್ಲಿ ಏನು ಬರೆದಿದೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ಕೇರಳದಲ್ಲಿ ನಮ್ಮ ನೂರಾರು ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಅಲ್ಲಿಂದ ಮೊದಲ ಬಾರಿಗೆ ಒಬ್ಬ ನಮ್ಮ ಸಂಸದರು ಆರಿಸಿ ಬಂದಿದ್ದಾರೆ. ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ನಾವು ಸರಕಾರ ರಚಿಸಿದ್ದೇವೆ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.
ಇದನ್ನೂ ಓದಿ: Lok Sabha Election 2024: ನೂತನ ಸಂಸದರಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧೀಶರು, ಶೇ.46ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಕೇಸ್!