Site icon Vistara News

Narendra Modi: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಸ್ಪಷ್ಟ; ಪುನರುಚ್ಚರಿಸಿದ ಮೋದಿ

Narendra Modi

Narendra Modi

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ (Lok Sabha Election 2024)ಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ(Congress manifesto)ಯಲ್ಲಿ ಮುಸ್ಲಿಂ ಲೀಗ್‌ನ ಛಾಯೆ ಇದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ನ್ಯೂಸ್ 18 ನೆಟ್‌ವರ್ಕ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪುನರುಚ್ಚರಿಸಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರವಾಗಿಯೂ ವಿಪಕ್ಷ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

“ಮಾಧ್ಯಮಗಳು ಪ್ರತಿಯೊಂದು ರಾಜಕೀಯ ಪಕ್ಷದ ಪ್ರಣಾಳಿಕೆಗಳನ್ನು ಅಧ್ಯಯನ ನಡೆಸುತ್ತವೆ. ನಾನು ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯಿಸುವುದನ್ನು ಕಾಯುತ್ತಿದ್ದೆ. ನಾನು ಮೊದಲ ದಿನವೇ ಪ್ರಣಾಳಿಕೆಯ ಬಗ್ಗೆ ಮಾತನಾಡಿದ್ದೆ. ಪ್ರಣಾಳಿಕೆಯನ್ನು ಗಮನಿಸಿದ ಕೂಡಲೇ ಅದರಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ ಎಂದು ನಾನು ಕಂಡುಕೊಂಡಿದ್ದೆ. ಮಾಧ್ಯಮಗಳು ಈ ವಿಚಾರ ತಿಳಿದು ಆಘಾತಕ್ಕೊಳಗಾಗಬಹುದು ಎಂದು ಭಾವಿಸಿದ್ದೆʼʼ ಎಂದು ಮೋದಿ ಹೇಳಿದ್ದಾರೆ.

“ಇದು ವ್ಯವಸ್ಥೆಯ ದೊಡ್ಡ ಹಗರಣವೆಂದು ನನಗೆ ತಿಳಿಯಿತು. ಪ್ರಣಾಳಿಕೆಯಲ್ಲಿನ ದುಷ್ಕೃತ್ಯಗಳನ್ನು ಯಾರಾದರೂ ಹೊರತರುತ್ತಾರೆ ಎಂದು ನಾನು 10 ದಿನಗಳವರೆಗೆ ಕಾಯುತ್ತಿದ್ದೆ. ಯಾಕೆಂದರೆ ಅದನ್ನು ನಿಷ್ಪಕ್ಷಪಾತವಾಗಿ ಹೊರತಂದರೆ ಉತ್ತಮ. ಅಂತಿಮವಾಗಿ ಈ ಸತ್ಯಗಳನ್ನು ನಾನೇ ಹೊರತರಬೇಕೆಂದು ನಿರ್ಧರಿಸಿದೆʼʼ ಎಂದು ಅವರು ವಿವರಿಸಿದ್ದಾರೆ.

ಸಂಪತ್ತು ಮರುಹಂಚಿಕೆ

ಮುಸ್ಲಿಮರಿಗೆ ಸಂಪತ್ತನ್ನು ಮರುಹಂಚಿಕೆ ಮಾಡಲು ಕಾಂಗ್ರೆಸ್ ಬಯಸಿದೆ ಎನ್ನುವ ವಿಚಾರ ಅಷ್ಟೊಂದು ಅಪಾಯಕಾರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ತಮ್ಮ ಚುನಾವಣಾ ಪ್ರಚಾರವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಕರೆ ನೀಡಿದರು. “ನನ್ನ ಇಡೀ ಚುನಾವಣಾ ಪ್ರಚಾರವು ಎರಡು ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ ಎನ್ನುವುದನ್ನು ನೀವು ಗಮನಿಸಿರಬಹುದು. ನಾವು ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದೇವೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಸರ್ಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸಿದೆ. ನೋಡಿ, ಕೆಟ್ಟದ್ದನ್ನು ಮಾಡಲು ಯಾವುದೇ ಸರ್ಕಾರವನ್ನು ರಚಿಸುವುದಿಲ್ಲ. ಸರ್ಕಾರ ಜನರಿಗೆ ಒಳ್ಳೆಯದನ್ನು ಮಾಡಲು ಬಯಸುತ್ತದೆ. ಕೆಲವು ಜನರಿಗೆ ಇತರರಿಗೆ ಒಳ್ಳೆಯದನ್ನು ಹೇಗೆ ಮಾಡಬೇಕೆಂದು ತಿಳಿದಿದೆ. ಕೆಲವರು ನಮಗೂ ಒಳಿತಾಗಲಿ ಎಂದು ಕಾಯುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದನ್ನು ನಾನು ನಂಬುತ್ತೇನೆʼʼ ಎಂದು ಮೋದಿ ತಿಳಿಸಿದ್ದಾರೆ.

ಬಡವರಿಗಾಗಿ 4 ಕೋಟಿ ಮನೆ

ತಮ್ಮ ಸರ್ಕಾರ ಜನರಿಗಾಗಿ ಕೈಗೊಂಡ ಉಪಕ್ರಮಗಳನ್ನು ವಿವರಿಸಿದ ಪಿಎಂ ಮೋದಿ, “ನಾವು ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ನೀವು ಚುನಾವಣಾ ಪ್ರಚಾರಕ್ಕೆ ಹೋದಾಗ ಇನ್ನೂ ವಸತಿ ರಹಿತರಾಗಿರುವ ಜನರ ಪಟ್ಟಿಯನ್ನು ಸಿದ್ಧಪಡಿಸಿ ನನಗೆ ನೀಡಿ ಎಂದು ನಾನು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದೇನೆ. ನನ್ನ ಮೂರನೇ ಅವಧಿ ಪ್ರಾರಂಭವಾದ ಕೂಡಲೇ ಆದ್ಯತೆ ಮೇರೆಗೆ ನಾನು ಈ ಕೆಲಸ ಮುಂದುವರಿಸುತ್ತೇನೆʼʼ ಎಂದು ಅವರು ಭರವಸೆ ನೀಡಿದ್ದಾರೆ.

ಪ್ರಧಾನಿಯಾಗಿ ದಾಖಲೆಯ ಮೂರನೇ ಅವಧಿಯನ್ನು ಹೊಂದುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಭವಿಷ್ಯದ ಯೋಜನೆ ಬಗ್ಗೆ ತಮಗಿರುವ ದೃಷ್ಟಿಕೋನವನ್ನೂ ವಿವರಿಸಿದ್ದಾರೆ. ʼʼನಾನು ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇನೆ. ಈಗ ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿಕೊಂಡಿದೆ. ಇದು ಜನರಿಗೆ ಆರೋಗ್ಯದ ಭರವಸೆ ನೀಡುತ್ತದೆ. ಸುಮಾರು 55 ಕೋಟಿ ಮಂದಿಗೆ ಇದು ನೆರವಾಗುತ್ತದೆ. ಮೋದಿ ಸರ್ಕಾರ ನಿಮ್ಮೊಂದಿಗಿದೆ ಎಂಬ ಭರವಸೆ ಇದು. ಯಾವುದೇ ವರ್ಗ, ಸಮಾಜ, ಹಿನ್ನೆಲೆಗೆ ಸೇರಿದ 70 ವರ್ಷಕ್ಕಿಂತ ಮೇಲಿನ ಪುರುಷ ಅಥವಾ ಮಹಿಳೆಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ. ಜತೆಗೆ ನಾವು ಈ ಪ್ರಯೋಜನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತೇವೆ ಎಂದು ಹೇಳಿದ್ದೇವೆ. ತೃತೀಯ ಲಿಂಗಿಗಳಿಗೆ ಅವರ ವಯಸ್ಸು ಯಾವುದೇ ಇರಲಿ ನಾವು ನೆರವು ನೀಡಲು ಬದ್ಧʼʼ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: BJP Manifesto: ಬಿಜೆಪಿ ಪ್ರಣಾಳಿಕೆ; ರೈತನಿಗೆ ಮೊದಲ ಪ್ರತಿ ನೀಡಿದ ಮೋದಿ, 14 ಗ್ಯಾರಂಟಿ ಘೋಷಣೆ

ಬ್ಯಾಂಕಿಂಗ್‌ ವ್ಯವಸ್ಥೆ

“ನಮ್ಮ ದೇಶದಲ್ಲಿ ಬ್ಯಾಂಕುಗಳ ಸ್ಥಿತಿ ಕಳಪೆಯಾಗಿತ್ತು. ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹಣ ನೀಡಿದ್ದರೂ ಬ್ಯಾಂಕುಗಳಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆದಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ 52 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಅನೇಕರು ಅದರ ಲಾಭವನ್ನು ಪಡೆದುಕೊಂಡರು. ಹಲವರಿಗೆ ಜನ್ ಧನ್ ಖಾತೆ ಮತ್ತು ನೇರ ಲಾಭ ವರ್ಗಾವಣೆಯ ಮೂಲಕ ಪ್ರಯೋಜನ ಲಭಿಸಿತು. 36 ಲಕ್ಷ ಕೋಟಿ ರೂ.ಗಳಷ್ಟು ಮೊತ್ತವು ಜನರ ಖಾತೆಗಳಿಗೆ ನೇರ ವರ್ಗಾವಣೆಯಾಗಿದೆʼʼ ಎಂದು ತಿಳಿಸಿದ್ದಾರೆ.

ತಮ್ಮ ಸರ್ಕಾರದ ಕಾರ್ಯಕ್ಷಮತೆಯನ್ನು 2014ರ ಹಿಂದಿನ ಪರಿಸ್ಥಿತಿಗೆ ಹೋಲಿಸಿದ ಪ್ರಧಾನಿ ಮೋದಿ, “ನೋಡಿ 2014 ಕ್ಕಿಂತ ಮೊದಲು ದೇಶದ ಪರಿಸ್ಥಿತಿ ಹೇಗಿತ್ತು? ಆರ್ಥಿಕತೆ ದುರ್ಬಲವಾಗಿತ್ತು. ಇಂದು ನಾವು ಅದನ್ನು ಬದಲಾಯಿಸಿದ್ದೇವೆ. ಐಎಂಎಫ್‌ನಲ್ಲಿ ಈಗ ಚೀನಾ ಮತ್ತು ಭಾರತ ಸೇರಿದಂತೆ ವಿಶ್ವದ 150 ದೇಶಗಳ ಗುಂಪು ಇದೆ. ಇದನ್ನು ನಾವು ಅಭಿವೃದ್ಧಿಶೀಲ ದೇಶಗಳು ಅಥವಾ ಉದಯೋನ್ಮುಖ ಆರ್ಥಿಕತೆ ಹೊಂದಿರುವ ದೇಶಗಳು ಎಂದು ಕರೆಯಬಹುದುʼʼ ಎಂದು ಪ್ರಧಾನಿ ವಿವರಿಸಿದ್ದಾರೆ.

ಇದನ್ನೂ ಓದಿ: Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

ಪಿತ್ರಾರ್ಜಿತ ಆಸ್ತಿ ತೆರಿಗೆ

ಸಾಗರೋತ್ತರ ಕಾಂಗ್ರೆಸ್​ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಮೋದಿ ಪ್ರತಿಕ್ರಿಯಿಸಿ, “ಅಮೆರಿಕದಲ್ಲಿ ಸಂದರ್ಶನ ನೀಡಿದ ಅವರು ಪಿತ್ರಾರ್ಜಿತ ತೆರಿಗೆ ಬಗ್ಗೆ ಪ್ರಸ್ತಾವಿಸಿದರು. ನಿಮ್ಮ ಆಸ್ತಿಯ ಮೇಲೆ ಸುಮಾರು 55% ತೆರಿಗೆ ವಿಧಿಸುವ ಬಗ್ಗೆ ಹೇಳಿದರು. ಈಗ ನಾನು ಅಭಿವೃದ್ಧಿ ಮತ್ತು ಉತ್ತರಾಧಿಕಾರದ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಅವರು ಆ ಪಿತ್ರಾರ್ಜಿತ ಆಸ್ತಿಯನ್ನು ಲೂಟಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಸುವುದು ನನ್ನ ಜವಾಬ್ದಾರಿ. ಈಗ ಈ ಬಗ್ಗೆ ನಿರ್ಧರಿಸಬೇಕಾದವರು ನೀವುʼʼ ಎಂದು ಮೋದಿ ಹೇಳಿದ್ದಾರೆ.

Exit mobile version