ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ ದೇಶದಲ್ಲಿ 4 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ”ನಾನು ಅಪ್ರಮಾಣಿಕವಾಗಿ ನಡೆದುಕೊಂಡಿದ್ದರೆ ಗಲ್ಲು ಶಿಕ್ಷೆ ಎದುರಿಸಲೂ ಸಿದ್ಧʼʼ ಎಂದು ಭಾವುಕರಾಗಿ ಹೇಳಿದ್ದಾರೆ.
ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.
“ಜವಾಹರಲಾಲ್ ನೆಹರೂ ಕೂಡ ಸಂಸತ್ತಿನಲ್ಲಿ ʼಬಿರ್ಲಾ-ಟಾಟಾ ಕಿ ಸರ್ಕಾರ್ʼನಂತಹ ನಿಂದನೆಗಳನ್ನು ಎದುರಿಸುತ್ತಿದ್ದರು. ಈ ಕುಟುಂಬದ (ನೆಹರೂ) ಸಮಸ್ಯೆಯೆಂದರೆ ಈಗಲೂ ನಾನು ಅದೇ ನಿಂದನೆಗಳನ್ನು ಎದುರಿಸಬೇಕೆಂದು ಬಯಸುತ್ತದೆʼʼ ಎಂದು ಆರೋಪಿಸಿದ್ದಾರೆ. ʼʼದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸಬೇಕು ಎಂದು ಹೇಳಲು ನನಗೆ ನಾಚಿಕೆಯಾಗುವುದಿಲ್ಲ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅತಿಥಿಗಳ ಪಟ್ಟಿ ತಯಾರಿಸುವಾಗ ನಾನು ಕ್ರೀಡಾಪಟುಗಳು ಮತ್ತು ಸಾಧಕರ ಹೆಸರನ್ನು ಸೇರಿಸುತ್ತೇನೆ. ದೇಶವು ತನ್ನ ಸಾಧಕರನ್ನು ಪೂಜಿಸದಿದ್ದರೆ ಮತ್ತು ಗೌರವಿಸದಿದ್ದರೆ, ವಿಜ್ಞಾನಿ ಮತ್ತು ಪಿಎಚ್‌ಡಿ ಮಾಡುವ ಜನರನ್ನು ನಾವು ಹೇಗೆ ಹೊಂದಲು ಸಾಧ್ಯ? ಎಲ್ಲ ವರ್ಗದ ಸಾಧಕರನ್ನು ಗೌರವಿಸಬೇಕು ಎಂಬುದು ನನ್ನ ಅಭಿಮತ” ಎಂದು ಅವರು ಹೇಳಿದ್ದಾರೆ.
“ನಾನು ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ. ನಾನು ತಪ್ಪು ರೀತಿಯಲ್ಲಿ ಯಾರಿಗಾದರೂ ಪ್ರಯೋಜನ ಉಂಟು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಬೇಕು. ಆದರೆ ನನ್ನ ದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ನಾನು ಗೌರವಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ ಅದಾನಿ-ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳಿಗೆ ನೆರವು ನೀಡಿದ್ದಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
ಸಂಪತ್ತಿನ ಸೃಷ್ಟಿಕರ್ತರು ಮತ್ತು ಕಾರ್ಮಿಕರ ಬಗ್ಗೆಯೂ ಸಮಾನವಾಗಿ ಚಿಂತಿಸುತ್ತೇನೆ ಎಂದು ಮೋದಿ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ. “ನನ್ನ ಪ್ರಕಾರ ದೇಶದ ಅಭಿವೃದ್ಧಿಗೆ ಬಂಡವಾಳಶಾಹಿಗಳ ಹಣ, ಆಡಳಿತ ಮಂಡಳಿಯವರ ಯೋಚನೆ ಮತ್ತು ಕಾರ್ಮಿಕರ ಕಠಿಣ ಪರಿಶ್ರಮ ಅಗತ್ಯ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: PM Narendra Modi:”ಅಬ್ಬಾ.. ಎಂಥಾ ಮೇಕಪ್!”- ಮತ್ತೆ ಗಮನ ಸೆಳೆದ ಮೋದಿ; ವಿಡಿಯೋ ವೈರಲ್
ಮುಸ್ಲಿಂ ವಿರೋಧಿ ಆರೋಪಕ್ಕೂ ತಿರುಗೇಟು
ಕೆಲವು ದಿನಗಳ ಹಿಂದಯಷ್ಟೇ ಮೋದಿ ಅವರು ಮುಸ್ಲಿಂ ವಿರೋಧಿ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಟಾಂಗ್ ಕೊಟ್ಟಿದ್ದರು. ʼʼಹಿಂದು ಮುಸ್ಲಿಂ ಅಂತ ತಾರತಮ್ಯ ಮಾಡಿದ ದಿನ ನಾನು ರಾಜಕೀಯ ಬದುಕಿಗೆ ಅನರ್ಹನಾಗುತ್ತೇನೆ. ನಾನು ನನ್ನ ಜೀವನದಲ್ಲಿ ಎಂದಿಗೂ ಹಿಂದು-ಮುಸ್ಲಿಂ ಎಂದು ಭೇದ ಮಾಡೋದಿಲ್ಲ ಎಂಬುದು ನನ್ನ ಬದುಕಿನ ಧ್ಯೇಯʼʼ ಎಂದು ಸ್ಪಷ್ಟವಾಗಿ ಹೇಳಿದ್ದರು. ʼʼಹಿಂದು ಮುಸ್ಲಿಂ ಅಂತ ಹೇಳಿಕೊಂಡು ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಜೀವಕ್ಕೆ ಅರ್ಹನಾದ ವ್ಯಕ್ತಿಯಾಗುವುದಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆʼʼ ಎಂದರು.