Site icon Vistara News

Narendra Modi: ಡಿ.ಕೆ. ಸುರೇಶ್‌ ದೇಶ ವಿಭಜನೆ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು

Narendra Modi

Narendra Modi

ಉತ್ತರಾಖಂಡ: ”ಕಾಂಗ್ರೆಸ್‌ (Congress)ಗೆ ಈಗ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಭಾರತವನ್ನು ಅರಾಜಕತೆ ಮತ್ತು ಅಸ್ಥಿರತೆಯತ್ತ ತಳ್ಳಲು ಬಯಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ದೇಶವನ್ನು ಎರಡು ಭಾಗಗಳಾಗಿ ವಿಭಜಿಸುವ ಬಗ್ಗೆ ಮಾತನಾಡಿದ್ದಾರೆ. ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುವವರಿಗೆ ಶಿಕ್ಷೆಯಾಗಬೇಕು. ಆದರೆ ಅವರನ್ನು ಶಿಕ್ಷಿಸುವ ಬದಲು ಕಾಂಗ್ರೆಸ್ ಚುನಾವಣಾ ಟಿಕೆಟ್ ನೀಡಿದೆ” ಎಂದು ಕರ್ನಾಟಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D.K. Suresh) ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಈ ರೀತಿ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಉತ್ತರಾಖಂಡದ ರುದ್ರಪುರದಲ್ಲಿ ಮಂಗಳವಾರ (ಏಪ್ರಿಲ್‌ 2) ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಈ ವರ್ಷದ ಫೆಬ್ರವರಿಯಲ್ಲಿ ಸುರೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರತ್ಯೇಕ ದೇಶದ ಹೇಳಿಕೆ ನೀಡಿದ್ದರು. ʼʼಕರ್ನಾಟಕವು ಕೇಂದ್ರದಿಂದ ಸಾಕಷ್ಟು ಅನುದಾನವನ್ನು ಪಡೆಯುತ್ತಿಲ್ಲ. ದಕ್ಷಿಣ ಭಾರತವನ್ನು ʼಪ್ರತ್ಯೇಕ ದೇಶʼವನ್ನಾಗಿಸಲು ಒತ್ತಾಯಿಸುವುದು ಬಿಟ್ಟು ಬೇರೆ ದಾರಿಯಿಲ್ಲʼʼ ಎಂದು ಹೇಳಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್, ಈ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ.

ʼʼ10 ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದ ನಂತರ ಕಾಂಗ್ರೆಸ್ ʼಭಾರತದಲ್ಲಿ ಬೆಂಕಿ ಹೊತ್ತಿಸುವʼ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ನೀವು ಅಂತಹ ಜನರನ್ನು ಶಿಕ್ಷಿಸುವುದಿಲ್ಲವೇ? ಈ ಬಾರಿ ಅವರನ್ನು ಕ್ಷೇತ್ರದಲ್ಲಿರಲು ಬಿಡಬೇಡಿ” ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ರಾಹುಲ್‌ ಹೇಳಿಕೆ ವಿರುದ್ಧವೂ ಆಕ್ರೋಶ

ಇದೇ ವೇಳೆ ಮೋದಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದರು. ʼʼಬಿಜೆಪಿ ಮೂರನೇ ಬಾರಿಗೆ ಆಯ್ಕೆಯಾದರೆ ಭಾರತಕ್ಕೆ ಬೆಂಕಿ ಹತ್ತಿಕೊಳ್ಳಲಿದೆʼʼ ಎಂಬ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಯನ್ನು ಟೀಕಿಸಿದ ಮೋದಿ, “ಇದು ಪ್ರಜಾಪ್ರಭುತ್ವದ ಭಾಷೆಯೇ?” ಎಂದು ಪ್ರಶ್ನಿಸಿದರು. “ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಮತ್ತು ಅದರ ಮನಸ್ಥಿತಿಯನ್ನು ಯಾರೂ ನಂಬುವುದಿಲ್ಲ. ಹಾಗಾಗಿ ಅವರು ಈಗ ಜನರನ್ನು ಪ್ರಚೋದಿಸುತ್ತಿದ್ದಾರೆ. ಕಾಂಗ್ರೆಸ್ ಭಾರತವನ್ನು ಅಸ್ಥಿರತೆಯತ್ತ ಕೊಂಡೊಯ್ಯಲು ಬಯಸಿದೆ” ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಡಿ.ಕೆ. ಸುರೇಶ್‌ ದೇಶ ವಿಭಜನೆ ಹೇಳಿಕೆ; ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

“ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ. ಆದರೆ ಕಾಂಗ್ರೆಸ್ ತನ್ನ ‘ರಾಜ್ ಕುಮಾರ್’ನನ್ನು ಮುಂಚೂಣಿಗೆ ತರಲು ವಿಫಲ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಮೋದಿ “ಭ್ರಷ್ಟಾಚಾರ್ ಮಿಟಾವೋ” ಎಂದು ಹೇಳಿದಾಗ, ಕಾಂಗ್ರೆಸ್ “ಮೋದಿ ಕೋ ಮಿಟಾವೋ ಔರ್ ಗಾಂಧಿ ಪರಿವಾರ್ ಕೋ ಬಚಾವೋ” ಎಂದು ಹೇಳುತ್ತದೆ. ಇದು ಸರಿಯೇ?” ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಶ್ನಿಸಿದರು. ಪ್ರಸ್ತುತ ಬಿಜೆಪಿ ಉತ್ತರಾಖಂಡದ ಎಲ್ಲ ಐದು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ನಾಳೆ (ಏಪ್ರಿಲ್ 3) ರಾಜ್ಯಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭೇಟಿ ನೀಡಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version