Site icon Vistara News

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ

NDA Meeting

NDA Meeting

ನವದೆಹಲಿ: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಜೂನ್‌ 9ರ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶುಕ್ರವಾರ (ಜೂನ್‌ 7) ನಡೆದ ಎನ್‌ಡಿಎ ಒಕ್ಕೂಟದ ಸಂಸದೀಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು (NDA Meeting).

ಹಳೆ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಎನ್‌ಡಿಎ ನಾಯಕರು ಮೋದಿ ಅವರ ಆಯ್ಕೆಗೆ ಅನುಮೋದನೆ ನೀಡಿದರು. ಸಭೆಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರು ಎದ್ದು ನಿಂತು, ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಬಿಜೆಪಿ ನಾಯಕರಾದ ಜೆ.ಪಿ.ನಡ್ಡಾ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಪ್ರಲ್ಹಾದ್‌ ಜೋಷಿ, ನಿರ್ಮಲಾ ಸೀತಾರಾಮನ್‌, ಯೋಗಿ ಆದಿತ್ಯನಾಥ್‌, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜನಸೇನಾ ಪಾರ್ಟಿಯ ಪವನ್‌ ಕಲ್ಯಾಣ್‌, ಏಕನಾಥ್‌ ಶಿಂದೆ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ʼʼಎನ್‌ಡಿಎ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಇದು ವಿಕಸಿತ ಯಾತ್ರೆ. ಮೋದಿ ಅವರ ಕಾರ್ಯ ವೈಖರಿಯಿಂದ ಇದು ಸಾಧ್ಯವಾಗಿದೆ. ಆಂಧ್ರ ಪ್ರದೇಶ, ಸಿಕ್ಕಿಂನಲ್ಲಿಯೂ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆʼʼ ಎಂದು ಜೆ.ಪಿ.ನಡ್ಡಾ ಹೇಳಿದರು. ʼʼಮೋದಿ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಮೋದಿ ಪ್ರಧಾನಿ ಆಗಬೇಕು ಎನ್ನುವುದು ಎಲ್ಲರ ಆಶಯ. ಅವರು ದೇಶಕ್ಕಾಗಿ ಅವಿರತವಾಗಿ ದುಡಿಯುತ್ತಾರೆ. ಮೋದಿ ಅವರಿಂದ ಮಾತ್ರ ಬಡತನ ನಿವಾರಣೆ ಸಾಧ್ಯʼʼ ಎಂದು ಚಂದ್ರಬಾಬು ನಾಯ್ಡು ಬಣ್ಣಿಸಿದರು.

ನಾವು ಮೋದಿ ಜತೆಗೆ ಇರುತ್ತೇವೆ ಎಂದು ನಿತೀಶ್‌ ಕುಮಾರ್‌ ಭರವಸೆ ನೀಡಿದರು. ʼʼದೇಶ ಸಮರ್ಥವಾಗಿ ಮುನ್ನಡೆಯಲು ಮೋದಿ ಬೇಕು. ನನ್ನ ಬದುಕಿನ ಅದ್ಭುತ ಕ್ಷಣ ಇದುʼʼ ಎಂದು ಹೇಳಿದರು.

ಎನ್‌ಡಿಎ ನಾಯಕರನ್ನಾಗಿ ಮೋದಿ ಅವರ ಹೆಸರನ್ನು ರಾಜನಾಥ್‌ ಸಿಂಗ್‌ ಪ್ರಸ್ತಾವಿಸಿದರು. ಮೋದಿ ಹೆಸರು ಹೇಳುತ್ತಿದ್ದಂತೆ ಸಂಸದರೆಲ್ಲ ಜೈಕಾರ ಮೊಳಗಿಸಿದರು. ಪ್ರಸ್ತಾವನೆಯನ್ನು ಅಮಿತ್‌ ಶಾ, ನಿತಿನ್‌ ಗಡ್ಕರಿ, ಎಚ್‌.ಡಿ.ಕುಮಾರಸ್ವಾಮಿ, ನಿತೀಶ್‌ ಕುಮಾರ್‌ ಮತ್ತಿತರ ನಾಯಕರು ಅನುಮೋದಿಸಿದರು.

ಇಂದು ಎನ್‌ಡಿಎ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮತ್ತು ಆಂಧ್ರ ಪ್ರದೇಶದ ತೆಲುಗು ದೇಶಮ್‌ ಪಾರ್ಟಿ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಆದಷ್ಟು ಬೇಗ ಸರ್ಕಾರ ರಚಿಸುವಂತೆ ಆಗ್ರಹಿಸಿದ್ದರು. ಜೂನ್‌ 6ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದ ನಿತೀಶ್‌ ಕುಮಾರ್‌, ʼʼಸರ್ಕಾರ ರಚನೆಯಲ್ಲಿ ಯಾವುದೇ ವಿಳಂಬವಾಗಬಾರದು. ನಾವು ಅದನ್ನು ಆದಷ್ಟು ಬೇಗ ಕಾರ್ಯ ಪ್ರವೃತ್ತರಾಗಬೇಕು” ಎಂದು ಸೂಚಿಸಿದ್ದರು. 

ಇದನ್ನೂ ಓದಿ: Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Exit mobile version