ಬೆಂಗಳೂರು: 1991ರ ಚುನಾವಣೆಯಲ್ಲಿ (Parliament Flashback) ಬಹುಮತ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್, ಪಿ.ವಿ.ನರಸಿಂಹ ರಾವ್ ನೇತೃತ್ವದಲ್ಲಿ ಹಾಗೂ ಹೀಗೂ ಐದು ವರ್ಷ ಆಡಳಿತ ನಡೆಸಿತು. ಆದರೆ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪಗಳು ನರಸಿಂಹ ರಾವ್ ಸರ್ಕಾರದ ಅವಧಿಯಲ್ಲಿ ಇನ್ನೂ ಜೋರಾಗಿ ಕೇಳಿ ಬಂದವು. ನರಸಿಂಹ ರಾವ್ ಸಂಪುಟದ ಏಳು ಸಚಿವರು ನಾನಾ ಹಗರಣಗಳಲ್ಲಿ ಸಿಲುಕಿ ರಾಜೀನಾಮೆ ನೀಡಬೇಕಾಯಿತು. ಸ್ವತಃ ಪ್ರಧಾನಿ ನರಸಿಂಹ ರಾವ್ ವಿರುದ್ಧವೂ ಭ್ರಷ್ಟಾಚಾರ ಆರೋಪ ಕೇಳಿ ಬಂತು.
ಇದರ ಜತೆಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ಭುಗಿಲೆದ್ದಿತು. ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣದ ವಿರುದ್ಧ ಬಹುಸಂಖ್ಯಾತ ಹಿಂದೂಗಳು ದನಿ ಎತ್ತಲಾರಂಭಿಸಿದರು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದೊಳಗೆ ಬಂಡಾಯ ತೀವ್ರವಾಯಿತು. ಎನ್.ಡಿ.ತಿವಾರಿ, ಅರ್ಜುನ್ ಸಿಂಗ್‌ರಂಥ ಹಿರಿಯ ನಾಯಕರು ಕಾಂಗ್ರೆಸ್‌ನಿಂದ ಸಿಡಿದು ಆಲ್ ಇಂಡಿಯಾ ಇಂದಿರಾ ಕಾಂಗ್ರೆಸ್(ತಿವಾರಿ ಬಣ) ಸ್ಥಾಪಿಸಿದರು. ತಮಿಳುನಾಡಿನ ಜಿ.ಕೆ.ಮೂಪನಾರ್ ತಮಿಳ್ ಮಾನಿಲ ಕಾಂಗ್ರೆಸ್ ಕಟ್ಟಿದರು.
ದೊಡ್ಡ ಪಕ್ಷವಾದ ಬಿಜೆಪಿ
1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 545ರಲ್ಲಿ 161 ಸ್ಥಾನ ಗೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 15 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಕೇವಲ 140 ಸೀಟುಗಳಿಗೆ ಸೀಮಿತವಾಯಿತು. ಕಾಂಗ್ರೆಸ್ ಬಂಡಾಯ ಪಕ್ಷವಾದ ತಮಿಳ್ ಮಾನಿಲ ಕಾಂಗ್ರೆಸ್ 20 ಮತ್ತು ಎನ್ ಡಿ ತಿವಾರಿ ಬಣ 4 ಸೀಟುಗಳನ್ನು ಗೆದ್ದುಕೊಂಡಿತು. ಜನತಾ ದಳ 46 ಸ್ಥಾನಗಳಲ್ಲಿ ಜಯ ಗಳಿಸಿತು. ಸಿಪಿಎಂ 32 ಸ್ಥಾನಗಳಲ್ಲಿ ಗೆದ್ದಿತು.
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರಿಂದ ರಾಷ್ಟ್ರಪತಿಯವರು ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ- ಸುಷ್ಮಾ ಸ್ವರಾಜ್ ಮಧ್ಯೆ ಐತಿಹಾಸಿಕ ಕದನ!
1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ, ದಿಲ್ಲಿಯ ಮುಖ್ಯಮಂತ್ರಿಯೂ ಆಗಿದ್ದ ಸುಷ್ಮಾ ಸ್ವರಾಜ್ ನಡುವಿನ ಮುಖಾಮುಖಿ.
ಆಗಷ್ಟೇ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಏರಿಸಲಾಗಿತ್ತು. ಅವರನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನವಾಗಿತ್ತು. ತಮ್ಮ ಪತಿ ರಾಜೀವ್ ಗಾಂಧಿ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಅಮೇಠಿ ಲೋಕಸಭೆ ಕ್ಷೇತ್ರ ಸೋನಿಯಾ ಅವರ ಮೊದಲ ಆಯ್ಕೆಯಾಗಿತ್ತು. ಅಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಆದರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ 1998ರ ಲೋಕಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿ ಕಾಂಗ್ರೆಸ್‌ಗೆ ಸೋಲಾಗಿತ್ತು. ರಾಜೀವ್ ಗಾಂಧಿ ಅವರ ಪರಮಾಪ್ತರಾಗಿದ್ದ ಕ್ಯಾಪ್ಟನ್ ಸತೀಶ್ ಶರ್ಮಾ ಅವರನ್ನು ಬಿಜೆಪಿ ಅಭ್ಯರ್ಥಿ ಡಾ. ಸಂಜಯ್ ಸಿಂಗ್ ಸೋಲಿಸಿದ್ದರು. ಹಾಗಾಗಿ ಅಲ್ಲಿ ಸುಲಭವಾಗಿ ಗೆಲ್ಲುವ ವಿಶ್ವಾಸ ಸೋನಿಯಾಗಿರಲಿಲ್ಲ. ಹಾಗಾಗಿ ಸೋನಿಯಾ ಗಾಂಧಿ ಹಿತೈಷಿಗಳೆಲ್ಲ ಸೇರಿ ಲೆಕ್ಕಾಚಾರ ಹಾಕಿ ಆರಿಸಿದ ಮತ್ತೊಂದು ಕ್ಷೇತ್ರವೇ ಬಳ್ಳಾರಿ. ಏಕೆಂದರೆ 1952ರಿಂದ 1999ರವರೆಗೆ ನಡೆದ 12 ಚುನಾವಣೆಗಳಲ್ಲೂ ಕಾಂಗ್ರೆಸ್ ಬಳ್ಳಾರಿಯಲ್ಲಿ ಜಯ ಸಾಧಿಸಿತ್ತು.
ಹೈದರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿಗೆ ಬಂದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು.
ಸೋನಿಯಾ ನಾಮಪತ್ರದ ಬೆನ್ನಿಗೇ ಸುಷ್ಮಾ ಸ್ವರಾಜ್ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಬಿಜೆಪಿ ನಡುಕ ಹುಟ್ಟಿಸಿತು. ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಅವರ ಚುನಾವಣಾ ಪ್ರಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ವಿದೇಶಿ ಸೊಸೆ ಮತ್ತು ಸ್ವದೇಶಿ ಮಗಳ ನಡುವಿನ ಸ್ಪರ್ಧೆ ಎಂದೇ ಮಾಧ್ಯಮಗಳು ಬಣ್ಣಿಸಿದವು. ಸುಷ್ಮಾ ಸ್ವರಾಜ್ ಅವರು ಕನ್ನಡದಲ್ಲೇ ಭಾಷಣ ಮಾಡಿ ಅಚ್ಚರಿ ಮೂಡಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ಇಲ್ಲಿಗೆ ಬಂದು ಪ್ರಚಾರ ಮಾಡಿದರು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿ ಅವರು 56,100 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಇದನ್ನೂ ಓದಿ: Parliament Flashback: ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಎಫೆಕ್ಟ್; 1977ರಲ್ಲಿ ಧೂಳಿಪಟವಾಗಿದ್ದ ಕಾಂಗ್ರೆಸ್!
ಅತ್ತ ಅಮೇಠಿಯಲ್ಲಿ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರ ತೊರೆದರು. ಸುಷ್ಮಾ ಸ್ವರಾಜ್ ಇಲ್ಲಿ ಸೋತರು. ಆದರೆ ಪ್ರತಿವರ್ಷ ವರ ಮಹಾಲಕ್ಷ್ಮಿ ದಿನ ಬಳ್ಳಾರಿಗೆ ಬಂದು ಪೂಜೆಯಲ್ಲಿ ಭಾಗಿಯಾಗುತ್ತಿದ್ದರು. ಅವರ ಸ್ಪರ್ಧೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಿತು. ಮುಂದೆ 2004, 2009, 20014 ಮತ್ತು 20019ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಜಯ ದಾಖಲಿಸಿದ್ದೇ ಇದಕ್ಕೆ ಸಾಕ್ಷಿ.