ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Parliament Flashback) ಬಿಜೆಪಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು (Lok Sabha Election 2024) ಘೋಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸೀಟುಗಳನ್ನು 1984ರಲ್ಲಿ ಕಾಂಗ್ರೆಸ್ ಗೆದ್ದಿತ್ತು.
1984ರಲ್ಲಿ ಇಂದಿರಾ ಗಾಂಧಿ ಅವರು ಖಲಿಸ್ತಾನಿ ಉಗ್ರರ ಸಂಚಿಗೆ ಬಲಿಯಾದರು. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದ್ದರೂ ಇಂದಿರಾ ಹತ್ಯೆ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ಮೊದಲೇ ಚುನಾವಣೆಯ ಮೊರೆ ಹೋಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 516 ಲೋಕಸಭೆ ಸ್ಥಾನಗಳಲ್ಲಿ 404 ಸೀಟುಗಳನ್ನು ಬಾಚಿಕೊಂಡಿತು!
ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಸೀಟು ಗಳಿಕೆಯ ದಾಖಲೆ. ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಆ ಚುನಾವಣೆಯಲ್ಲಿ ಶೇ. 49.10 ಇತ್ತು. ಪ್ರತಿಪಕ್ಷಗಳೆಲ್ಲ ಧೂಳೀಪಟವಾದವು. 30 ಸ್ಥಾನ ಗಳಿಸಿದ ತೆಲುಗು ದೇಶಂ ಪಾರ್ಟಿ ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆಯಿತು. ಸಿಪಿಐಎಂಗೆ 22 ಮತ್ತು ಎಐಎಡಿಎಂಕೆಗೆ 12 ಸೀಟುಗಳು ಲಭಿಸಿದವು.
ಬಿಜೆಪಿಗೆ ಎರಡೇ ಸೀಟು
ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಮಾತ್ರ! ಗುಜರಾತ್‌ನ ಮೆಹಸಾನಾದಿಂದ ಡಾ. ಎ.ಕೆ. ಪಟೇಲ್ ಮತ್ತು ಆಂಧ್ರಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಜಂಗಾ ರೆಡ್ಡಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದರು. ಬಿಜೆಪಿ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ತಮ್ಮ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ಮಾಧವ್ ರಾವ್ ಸಿಂಧಿಯಾ ಎದುರು ಹೀನಾಯವಾಗಿ ಸೋತು ಹೋದರು. ಕಾಂಗ್ರೆಸ್ ಪಾಲಿಗೆ ಇದು ಸ್ಮರಣೀಯ ಲೋಕಸಭಾ ಚುನಾವಣೆಯಾಗಿ ದಾಖಲಾಯಿತು.
ಲೋಕಸಭೆಯಲ್ಲಿ ಜನರ ತೀರ್ಪೇ ಬೇರೆ, ವಿಧಾನಸಭೆಯಲ್ಲಿನ ತೀರ್ಪೇ ಬೇರೆ!
ಮತದಾರರು ಲೋಕಸಭೆಯಲ್ಲಿ ನೀಡುವ ತೀರ್ಪೇ ಬೇರೆ, ವಿಧಾನಸಭೆಯಲ್ಲಿ ನೀಡುವ ತೀರ್ಪೇ ಬೇರೆ ಎನ್ನುವುದಕ್ಕೆ ಕರ್ನಾಟಕವೇ ದೃಷ್ಟಾಂತ. ಹಿಂಬಾಗಿಲ ರಾಜಕಾರಣ, ರಾಜಿ ರಾಜಕಾರಣ, ಆಪರೇಷನ್ ರಾಜಕಾರಣಗಳ ಇತ್ಯಾದಿ ಇಂದಿನ ಅನೀತಿ ಪಾಲಿಟಿಕ್ಸ್‌ಗಳ ನಡುವೆ ನೈತಿಕತೆಯು ಮೌಲ್ಯ ಕಳೆದುಕೊಂಡಿದೆ. ಆದರೆ ರಾಜಕಾರಣದಲ್ಲಿ ʼನೈತಿಕ ಹೊಣೆʼ ಎಂದರೇನು, ಅದೇಕೆ ಮುಖ್ಯ ಎನ್ನುವುದನ್ನು 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ತೋರಿಸಿಕೊಟ್ಟಿದ್ದರು.
1983ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ 82 ಸ್ಥಾನಗಳನ್ನು ಗಳಿಸಿ ಅಧಿಕಾರ ಕಳೆದುಕೊಂಡಿತು. 95 ಸ್ಥಾನಗಳನ್ನು ಗಳಿಸಿದ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಬಂಗಾರಪ್ಪ ಅವರ ಕ್ರಾಂತಿರಂಗ ಪಕ್ಷವು ಜನತಾ ಪಕ್ಷದ ಜತೆಗಿತ್ತು. ಬಿಜೆಪಿಯ 18, ಸಿಪಿಐಯ 3 ಮತ್ತು 16 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಅವರು. ಮಾದರಿ ಆಡಳಿತದ ಮೂಲಕ ರಾಮಕೃಷ್ಣ ಹೆಗಡೆ ಅವರು ಅಪಾರ ಜನ ಮನ್ನಣೆ ಗಳಿಸತೊಡಗಿದರು. ಈ ಮಧ್ಯೆ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಸಿಖ್ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಆ ಬಳಿಕ ನಡೆದ 1984ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಅಲೆಯ ಪರಿಣಾಮವಾಗಿ ದೇಶಾದ್ಯಂತ ಕಾಂಗ್ರೆಸ್ ಭರ್ಜರಿ ಜಯ ಗಳಿಸಿತು. 514 ಕ್ಷೇತ್ರಗಳ ಪೈಕಿ 404 ಸ್ಥಾನಗಳು ಕಾಂಗ್ರೆಸ್ ಪಾಲಾದವು.
ಪ್ರತಿಪಕ್ಷಗಳ ಪರಿಸ್ಥಿತಿ ಎಷ್ಟು ಹೀನಾಯವಾಗಿತ್ತೆಂದರೆ, ಆಂಧ್ರ ಪ್ರದೇಶದಲ್ಲಿ 30 ಸ್ಥಾನ ಗಳಿಸಿದ ಎನ್ ಟಿ ರಾಮರಾವ್ ಅವರ ತೆಲುಗು ದೇಶಂ ಪಾರ್ಟಿಯೇ ಎರಡನೇ ಅತಿ ದೊಡ್ಡ ಪಕ್ಷವಾಯಿತು! ಕೇರಳದಲ್ಲಿ 22 ಸ್ಥಾನ ಗಳಿಸಿದ ಇ ಎಂ ಎಸ್ ನಂಬೂದಿರಿಪಾಡ್ ನೇತೃತ್ವದ ಸಿಪಿಐ ಮೂರನೇ ಅತಿ ದೊಡ್ಡ ಪಕ್ಷವಾಯಿತು! ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 24 ಸ್ಥಾನ ಗೆದ್ದರೆ, ಆಡಳಿತರೂಢ ಜನತಾ ಪಕ್ಷಕ್ಕೆ ಕೇವಲ 4 ಸೀಟುಗಳನ್ನು ಗೆಲ್ಲುವುದಕಷ್ಟೇ ಸಾಧ್ಯವಾಯಿತು.
ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆ
ಈ ಸೋಲಿಗೆ ತಾವೇ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಜನತೆಯ ತೀರ್ಪು ಪಡೆಯಲು ವಿಧಾನಸಭೆ ಚುನಾವಣೆ ಎದುರಿಸಿದರು. ಈಗಷ್ಟೇ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಧೂಳಿಪಟವಾಗಿದೆ. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜನೆ ಮಾಡಿದ್ದು ʼಆತ್ಮಹತ್ಯೆಯ ನಿರ್ಧಾರʼ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟರು. ಸಾಲದೆಂಬಂತೆ ಜನತಾ ಪಕ್ಷ ಯಾವುದೇ ಪ್ರಮುಖ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಕಣಕ್ಕಿಳಿಯಿತು.
ರಿಸಲ್ಟ್ ಬಂದಾಗ ಅಚ್ಚರಿ ಕಾದಿತ್ತು. ಭರ್ತಿ 139 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜನತಾ ಪಕ್ಷ ಪ್ರಚಂಡ ಜಯ ಸಾಧಿಸಿತು. ಕಾಂಗ್ರೆಸ್ ಕೇವಲ 65 ಸ್ಥಾನಗಳಲ್ಲಿ ಗೆದ್ದು ಹೀನಾಯವಾಗಿ ಸೋತಿತು. ಆ ಚುನಾವಣೆಯಲ್ಲಿ 116 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಎರಡು ಕಡೆ ಗೆದ್ದರೆ, ಸಿಪಿಐಗೆ 3 ಸ್ಥಾನಗಳು ಲಭಿಸಿದವು. ನಾಡಿನ ಜನತೆಯ ಹೊಸ ತೀರ್ಪಿನೊಂದಿಗೆ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ದೇಶದ ರಾಜಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ಮತ್ತು ಮಹತ್ವದ ಅಧ್ಯಾಯವಾಗಿ ದಾಖಲಾಯಿತು.
ಇದನ್ನೂ ಓದಿ: Parliament Flashback: ಸೋನಿಯಾ ಗಾಂಧಿ-ಸುಷ್ಮಾ ಸ್ವರಾಜ್ ಕದನಕ್ಕೆ ಅಖಾಡವಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರ