Site icon Vistara News

Parliament Flashback: ಲೋಕಸಭೆ ತೀರ್ಪೇ ಬೇರೆ, ವಿಧಾನಸಭೆ ತೀರ್ಪೇ ಬೇರೆ! ಅಗ್ನಿಪರೀಕ್ಷೆಗೆ ಧುಮುಕಿ ಗೆದ್ದಿದ್ದ ರಾಮಕೃಷ್ಣ ಹೆಗಡೆ!

ramakrishna

ramakrishna

ಬೆಂಗಳೂರು: ಮತದಾರರು ಲೋಕಸಭೆಯಲ್ಲಿ ನೀಡುವ ತೀರ್ಪೇ ಬೇರೆ, ವಿಧಾನಸಭೆಯಲ್ಲಿ ನೀಡುವ ತೀರ್ಪೇ ಬೇರೆ ಎನ್ನುವುದಕ್ಕೆ ಕರ್ನಾಟಕವೇ ದೃಷ್ಟಾಂತ. ಹಿಂಬಾಗಿಲ ರಾಜಕಾರಣ, ರಾಜಿ ರಾಜಕಾರಣ, ಆಪರೇಷನ್‌ ರಾಜಕಾರಣಗಳ ಇತ್ಯಾದಿ ಇಂದಿನ ಅನೀತಿ ಪಾಲಿಟಿಕ್ಸ್‌ಗಳ ನಡುವೆ ನೈತಿಕತೆಯು ಮೌಲ್ಯ ಕಳೆದುಕೊಂಡಿದೆ. ಆದರೆ ರಾಜಕಾರಣದಲ್ಲಿ ʼನೈತಿಕ ಹೊಣೆʼ ಎಂದರೇನು, ಅದೇಕೆ ಮುಖ್ಯ ಎನ್ನುವುದನ್ನು 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ತೋರಿಸಿಕೊಟ್ಟಿದ್ದರು (Parliament Flashback).

ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತ್ತು

1983ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಕೇವಲ 82 ಸ್ಥಾನಗಳನ್ನು ಗಳಿಸಿ ಅಧಿಕಾರ ಕಳೆದುಕೊಂಡಿತು. 95 ಸ್ಥಾನಗಳನ್ನು ಗಳಿಸಿದ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಬಂಗಾರಪ್ಪ ಅವರ ಕ್ರಾಂತಿರಂಗ ಪಕ್ಷವು ಜನತಾ ಪಕ್ಷದ ಜತೆಗಿತ್ತು.

ಬಿಜೆಪಿಯ 18, ಸಿಪಿಐಯ 3 ಮತ್ತು 16 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಅವರು. ಮಾದರಿ ಆಡಳಿತದ ಮೂಲಕ ರಾಮಕೃಷ್ಣ ಹೆಗಡೆ ಅವರು ಅಪಾರ ಜನ ಮನ್ನಣೆ ಗಳಿಸತೊಡಗಿದರು.

ಇಂದಿರಾ ಗಾಂಧಿ ಬಲಿಯಾದಾಗ…

ಈ ಮಧ್ಯೆ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಸಿಖ್‌ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಆ ಬಳಿಕ ನಡೆದ 1984ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಅಲೆಯ ಪರಿಣಾಮವಾಗಿ ದೇಶಾದ್ಯಂತ ಕಾಂಗ್ರೆಸ್‌ ಭರ್ಜರಿ ಜಯ ಗಳಿಸಿತು. 514 ಕ್ಷೇತ್ರಗಳ ಪೈಕಿ 404 ಸ್ಥಾನಗಳು ಕಾಂಗ್ರೆಸ್‌ ಪಾಲಾದವು. ಪ್ರತಿಪಕ್ಷಗಳ ಪರಿಸ್ಥಿತಿ ಎಷ್ಟು ಹೀನಾಯವಾಗಿತ್ತೆಂದರೆ, ಆಂಧ್ರ ಪ್ರದೇಶದಲ್ಲಿ 30 ಸ್ಥಾನ ಗಳಿಸಿದ ಎನ್‌ ಟಿ ರಾಮರಾವ್‌ ಅವರ ತೆಲುಗು ದೇಶಂ ಪಾರ್ಟಿಯೇ ಎರಡನೇ ಅತಿ ದೊಡ್ಡ ಪಕ್ಷವಾಯಿತು! ಕೇರಳದಲ್ಲಿ 22 ಸ್ಥಾನ ಗಳಿಸಿದ ಇ ಎಂ ಎಸ್‌ ನಂಬೂದಿರಿಪಾಡ್‌ ನೇತೃತ್ವದ ಸಿಪಿಐ ಮೂರನೇ ಅತಿ ದೊಡ್ಡ ಪಕ್ಷವಾಯಿತು!

ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 24 ಸ್ಥಾನ ಗೆದ್ದರೆ, ಆಡಳಿತರೂಢ ಜನತಾ ಪಕ್ಷಕ್ಕೆ ಕೇವಲ 4 ಸೀಟುಗಳನ್ನು ಗೆಲ್ಲುವುದಕಷ್ಟೇ ಸಾಧ್ಯವಾಯಿತು. ಈ ಸೋಲಿಗೆ ತಾವೇ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಜನತೆಯ ತೀರ್ಪು ಪಡೆಯಲು ವಿಧಾನಸಭೆ ಚುನಾವಣೆ ಎದುರಿಸಿದರು.

ಈಗಷ್ಟೇ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಧೂಳಿಪಟವಾಗಿದೆ. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜನೆ ಮಾಡಿದ್ದು “ಆತ್ಮಹತ್ಯೆಯ ನಿರ್ಧಾರʼ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟರು. ಸಾಲದೆಂಬಂತೆ ಜನತಾ ಪಕ್ಷ ಯಾವುದೇ ಪ್ರಮುಖ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಕಣಕ್ಕಿಳಿಯಿತು. ಆದರೆ ರಿಸಲ್ಟ್‌ ಬಂದಾಗ ಅಚ್ಚರಿ ಕಾದಿತ್ತು. ಭರ್ತಿ 139 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜನತಾ ಪಕ್ಷ ಪ್ರಚಂಡ ಜಯ ಸಾಧಿಸಿತು. ಕಾಂಗ್ರೆಸ್‌ ಕೇವಲ 65 ಸ್ಥಾನಗಳಲ್ಲಿ ಗೆದ್ದು ಹೀನಾಯವಾಗಿ ಸೋತಿತು.
ಆ ಚುನಾವಣೆಯಲ್ಲಿ 116 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಎರಡು ಕಡೆ ಗೆದ್ದರೆ, ಸಿಪಿಐಗೆ 3 ಸ್ಥಾನಗಳು ಲಭಿಸಿದವು.

ರಾಮಕೃಷ್ಣ ಹೆಗಡೆ ಮತ್ತೊಮ್ಮೆ ಮುಖ್ಯಮಂತ್ರಿ

ನಾಡಿನ ಜನತೆಯ ಹೊಸ ತೀರ್ಪಿನೊಂದಿಗೆ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ದೇಶದ ರಾಜಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ಮತ್ತು ಮಹತ್ವದ ಅಧ್ಯಾಯವಾಗಿ ದಾಖಲಾಯಿತು.

ರಾಯ್‌ಬರೇಲಿಯಲ್ಲಿ ಸೋತ ಇಂದಿರಾ ಗಾಂಧಿಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮರು ಜನ್ಮ!

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿತ್ತು. ತಮ್ಮ ಭದ್ರಕೋಟೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲೇ ಇಂದಿರಾ ಗಾಂಧಿ ಹೀನಾಯವಾಗಿ ಸೋತು ಹೋದರು. ಆದರೆ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿತು. 1975ರಿಂದ 1977ರ ತನಕ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರ ಸ್ವಾತಂತ್ರ್ಯ ಹರಣ ಮಾಡಿದ್ದ ಇಂದಿರಾ ಗಾಂಧಿ ಅವರು ಆ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಭದ್ರಕೋಟೆ ಎನಿಸಿದ್ದ ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿದ್ದರು. ಪ್ರತಿಪಕ್ಷಗಳೆಲ್ಲ ಒಂದಾಗಿ ರಾಜ್‌ ನಾರಾಯಣ್‌ ಅವರನ್ನು ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಿದ್ದವು. ಆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಹೀನಾಯವಾಗಿ ಸೋತು ಹೋದರು. ರಾಜಕೀಯ ಪುನರ್ಜನ್ಮಕ್ಕಾಗಿ ಇಂದಿರಾ ಗಾಂಧಿ ತವಕಿಸುತ್ತಿದ್ದರು. ಆಗ ಇಡೀ ದೇಶದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ ಇದ್ದರೂ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಸರ್ಕಾರ ಇತ್ತು. ಆಗ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ದೇವರಾಜ ಅರಸ್‌.

ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಲು ತೀರ್ಮಾನ

ಇಂದಿರಾ ಗಾಂಧಿ ಅವರನ್ನು ಕರ್ನಾಟಕದ ಚಿಕ್ಕಮಗಳೂರಿನಿಂದ ನಿಲ್ಲಿಸಿ ಗೆಲ್ಲಿಸೋಣ ಎಂದು ಕಾಂಗ್ರೆಸ್‌ ವರಿಷ್ಠರು ತೀರ್ಮಾನಿಸಿದರು. ಆಗ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದ ಡಿ ಬಿ ಚಂದ್ರೇಗೌಡ ಅವರು ಇಂದಿರಾಗಾಗಿ ಅವರಿಗಾಗಿ ರಾಜೀನಾಮೆ ನೀಡಿದರು. ಮರು ಚುನಾವಣೆ ಘೋಷಣೆಯಾಯಿತು. ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾ ಗಾಂಧಿ ನಾಮಪತ್ರ ಸಲ್ಲಿಸಿದರು. ವಿಶೇಷವೆಂದರೆ ಪ್ರತಿಪಕ್ಷ ಜನತಾ ಪರಿವಾರದ ಅಭ್ಯರ್ಥಿಯಾಗಿ ಕಣಕ್ಕಿಳಿದವರು ವೀರೇಂದ್ರ ಪಾಟೀಲ್‌!

ದೇಶದ ಗಮನ ಸೆಳೆದ ಚುನಾವಣೆ

1978ರ ಅಕ್ಟೋಬರ್‌ನಲ್ಲಿ ನಡೆದ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆಯಿತು. ಜಾರ್ಜ್‌ ಫರ್ನಾಂಡಿಸ್‌ ಸೇರಿದಂತೆ ಪ್ರತಿಪಕ್ಷಗಳ ಘಟಾನುಘಟಿ ನಾಯಕರು ಚಿಕ್ಕಮಗಳೂರಿಗೆ ಬಂದು ಬೀಡು ಬಿಟ್ಟರು. ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ಕಾರ್ಯಕರ್ತರ ನಡುವೆ ಭಾರಿ ಸಂಘರ್ಷ ನಡೆಯಿತು. ನಾನು ನಿಮ್ಮ ಕಿರಿಯ ಮಗಳು, ನನ್ನನ್ನು ಗೆಲ್ಲಿಸಿ ಎಂದು ಇಂದಿರಾ ಗಾಂಧಿ ತೆರೆದ ವಾಹನದಲ್ಲಿ ಸಂಚರಿಸಿ ಪ್ರಚಾರ ಮಾಡಿದರು.
ಪ್ರಚಾರ ಸಂದರ್ಭದಲ್ಲಿ ಕಲ್ಲೆಸೆತ, ಪೊಲೀಸ್‌ ಲಾಠಿ ಚಾರ್ಜ್‌ ಇತ್ಯಾದಿ ಘಟನೆಗಳು ಅವ್ಯಾಹತವಾಗಿ ನಡೆದವು. ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ಆಪಾದನೆ ಕೇಳಿ ಬಂತು.

ಶಕ್ತಿ ಮೀರಿ ಹೋರಾಡಿದ ಪ್ರತಿಪಕ್ಷ

ಈ ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ಪ್ರತಿಪಕ್ಷಗಳು ಶಕ್ತಿ ಮೀರಿ ಹೋರಾಡಿದವು. ಆದರೆ ಇಂದಿರಾ ಗಾಂಧಿ ಅವರು 77,333 ಮತಗಳ ಭಾರಿ ಅಂತರದಿಂದ ಜಯ ಗಳಿಸಿದರು. ಇಂದಿರಾ ಗಾಂಧಿ ಅವರಿಗೆ 2,49,376 ಮತಗಳು ಬಿದ್ದರೆ, ವೀರೇಂದ್ರ ಪಾಟೀಲ್‌ 1,72,043 ಮತಗಳನ್ನು ಗಳಿಸಿದರು.

ಕನ್ನಡದಲ್ಲಿ ಪ್ರಮಾಣವಚನ

ಮತ್ತೊಂದು ವಿಶೇಷ ಏನೆಂದರೆ, ಸಂಸತ್‌ ಸದಸ್ಯೆಯಾಗಿ 1978ರ ನ.21ರಂದು ಇಂದಿರಾ ಗಾಂಧಿ ಅವರು ಪ್ರಮಾಣವಚನ ಸ್ವೀಕರಿಸಿದ್ದು ಕನ್ನಡದಲ್ಲಿ! ಮತ್ತೊಂದು ವಿಶೇಷ ಏನೆಂದರೆ, ಇಂದಿರಾ ವಿರುದ್ಧ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲ್‌ ಅವರು ಮುಂದೆ ಕಾಂಗ್ರೆಸ್‌ ಸೇರಿ ಮುಖ್ಯಮಂತ್ರಿಯಾದರು!

ಜನತಾ ಪರಿವಾರದ ಸರ್ಕಾರ ಪತನ

ಆಂತರಿಕ ಕಚ್ಚಾಟದ ಫಲವಾಗಿ ಕೇಂದ್ರದಲ್ಲಿ ಜನತಾ ಪರಿವಾರದ ಸರ್ಕಾರ ಅಧಿಕಾರ ಕಳೆದುಕೊಂಡಿತು. 1980ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಿ, ಇಂದಿರಾ ಗಾಂಧಿ ಮತ್ತೆ ಪ್ರಧಾನಿಯಾದರು. ಹೀಗೆ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರ ಇಂದಿರಾ ಗಾಂಧಿ ಅವರಿಗೆ ರಾಜಕೀಯವಾಗಿ ಮರು ಹುಟ್ಟು ನೀಡಿತು.

ಲೋಕಸಭೆಯಲ್ಲಿ ನಿರಂತರ 7 ಬಾರಿ ಗೆದ್ದಿದ್ದ ಬಿ. ಶಂಕರಾನಂದ

ಬಿ ಶಂಕರಾನಂದ ಅವರು ಚಿಕ್ಕೋಡಿ ಮೀಸಲು ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇವರ ಪೂರ್ಣ ಹೆಸರು ಬಾಬುರಾವ್‌ ಶಂಕರಾನಂದ. ಕರ್ನಾಟಕದಲ್ಲಿ ಅತಿ ಹೆಚ್ಚು, 7 ಬಾರಿ ನಿರಂತರವಾಗಿ ಲೋಕಸಭೆಯಲ್ಲಿ ಗೆದ್ದ ದಾಖಲೆ ಬಿ ಶಂಕರಾನಂದ ಅವರ ಹೆಸರಿನಲ್ಲಿದೆ.

ಶಂಕರಾನಂದ ಅವರು ಚಿಕ್ಕೋಡಿ ಮೀಸಲು ಲೋಕಸಭೆ ಕ್ಷೇತ್ರದಿಂದ 1967ರಿಂದ 1996ರವರೆಗೆ ನಿರಂತರವಾಗಿ 7 ಬಾರಿ ಆಯ್ಕೆಯಾಗಿದ್ದರು. 35 ವರ್ಷ ನಿರಂತರವಾಗಿ ಇವರು ಸಂಸದರಾಗಿ ಕಾರ್ಯಭಾರ ಮಾಡಿದ್ದರು. ಮೂರೂವರೆ ದಶಕಗಳ ಕಾಲ ಇವರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸವಾಲೊಡ್ಡುವವರೇ ಇರಲಿಲ್ಲ.
ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮತ್ತು ಪಿ ವಿ ನರಸಿಂಹ ರಾವ್‌ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಬಿ ಶಂಕರಾನಂದ ಅವರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಮೊಟ್ಟ ಮೊದಲ ಜಂಟಿ ಸಂಸದೀಯ ಮಂಡಳಿ ಮುಖ್ಯಸ್ಥರಾಗಿ ನೇಮಕವಾಗಿದ್ದು ಇವರ ಮತ್ತೊಂದು ಹೆಗ್ಗಳಿಕೆ. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬೋಫೋರ್ಸ್‌ ಹಗರಣ ಭಾರಿ ಸುದ್ದಿ ಮಾಡಿತ್ತು. ಈ ಹಗರಣದ ಆಪಾದನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ತನಿಖೆಗಾಗಿ ಜಂಟಿ ಸಂಸದೀಯ ಮಂಡಳಿಯನ್ನು ರಚಿಸಿತ್ತು.

ಯಾವ ಯಾವ ಖಾತೆ ನಿರ್ವಹಿಸಿದ್ದರು?

ಸಂಸದೀಯ ವ್ಯವಹಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ನೀರಾವರಿ ಮತ್ತು ವಿದ್ಯುತ್‌, ಜಲ ಸಂಪನ್ಮೂಲ, ಕಾನೂನು ಮತ್ತು ನ್ಯಾಯ, ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಗಳನ್ನು ಬಿ. ಶಂಕರಾನಂದ ಅವರು ನಿಭಾಯಿಸಿದ್ದರು. 19 ಅಕ್ಟೋಬರ್‌ 1925ರಂದು ಜನಿಸಿದ್ದ ಬಿ ಶಂಕರಾನಂದ ಅವರು, 2009ರ ನವೆಂಬರ್‌ 20ರಂದು ನಿಧನ ಹೊಂದಿದರು. ಕಮಲಾದೇವಿ ಇವರ ಪತ್ನಿ. ಇವರಿಗೆ ಒಬ್ಬ ಪುತ್ರ ಮತ್ತು ಆರು ಮಂದಿ ಪುತ್ರಿಯರು. ಇವರ ಪುತ್ರ ಓಂ ಪ್ರಕಾಶ್‌ ಕಣಗಲಿ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದರು.

1966ರ ಚುನಾವಣೆಯಲ್ಲಿ ಬಿ ಶಂಕರಾನಂದ ಅವರು ಜನತಾ ದಳ ಅಭ್ಯರ್ಥಿ ರತ್ನಮಾಲಾ ಸವಣೂರು ಅವರ ಎದುರು ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡರು. ಆ ಬಳಿಕ ರಾಜಕೀಯದಿಂದ ತೆರೆಮರೆಗೆ ಸರಿದರು. ಲೋಕಸಭೆ ಚುನಾವಣೆಯಲ್ಲಿ ನಿರಂತರವಾಗಿ 7 ಬಾರಿ ಗೆದ್ದಿರುವುದು ನಮ್ಮ ರಾಜ್ಯದ ಮಟ್ಟಿಗೆ ಇಂದಿಗೂ ದಾಖಲೆಯಾಗಿ ಉಳಿದಿದೆ. ಈ ಕ್ಷೇತ್ರ 2009ರ ಚುನಾವಣೆವರೆಗೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರಿಸಿರುವ ಕ್ಷೇತ್ರವಾಗಿತ್ತು. ಆ ಬಳಿಕ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು.

ಇದನ್ನೂ ಓದಿ: Parliament Flashback: ಬಿ.ಶಂಕರಾನಂದ; ಲೋಕಸಭೆಯಲ್ಲಿ ನಿರಂತರ 7 ಬಾರಿ ಗೆದ್ದ ದಾಖಲೆ!

Exit mobile version