ಬೆಂಗಳೂರು: ಆಸ್ಕರ್ ಫರ್ನಾಂಡಿಸ್ (Oscar Fernandes) ಅವರು ಉಡುಪಿ ಪುರಸಭೆ ಸದಸ್ಯರಾಗಿದ್ದರು. ಆದರೆ ಆಕಸ್ಮಿಕವಾಗಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿತು. ಅತಿರಥ ಮಹಾರಥರನ್ನೇ ಸೋಲಿಸಿ ಆಸ್ಕರ್ ಫರ್ನಾಂಡಿಸ್ ದಶಕಗಳ ಕಾಲ ಸಂಸದರಾಗಿ, ಕೇಂದ್ರ ಸಚಿವರಾಗಿ ಮೆರೆದರು! (Parliament Flashback).
ಡಾ. ಟಿ.ಎ. ಪೈ ಅವರು ಖ್ಯಾತ ವೈದ್ಯ, ಶಿಕ್ಷಣ ತಜ್ಞ ಮತ್ತು ಅರ್ಥ ಶಾಸ್ತ್ರಜ್ಞರೆಂದು ಖ್ಯಾತಿ ಪಡೆದವರು. ಆಧುನಿಕ ಮಣಿಪಾಲದ ನಿರ್ಮಾತೃರು. ಇಂದು ಮಣಿಪಾಲ ಆರೋಗ್ಯ ಮತ್ತು ಶಿಕ್ಷಣದಲ್ಲಿ ವಿಶ್ವ ಪ್ರಸಿದ್ಧಿ ಪಡೆಯಲು ಡಾ. ಟಿ.ಎ. ಪೈ ಅವರೇ ಕಾರಣರು. ಇಂಥ ಶ್ರೇಯಸ್ಸಿನ ಪೈ ಅವರು 1977ರಲ್ಲಿ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಚಂಡ ಜಯ ದಾಖಲಿಸಿದರು. ಆದರೆ ಇವರ ಬಗ್ಗೆ ವೈಯಕ್ತಿಕ ಕಾರಣಕ್ಕೆ ಮುನಿಸು ಹೊಂದಿದ್ದ ಇಂದಿರಾ ಗಾಂಧಿ ಅವರು 1980ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದರು. ಅಷ್ಟೇ ಅಲ್ಲ ಇವರ ಶಿಷ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದರು.
ಪುರಸಭೆ ಸದಸ್ಯರಾಗಿದ್ದ ಆಸ್ಕರ್
ಪುರಸಭೆ ಸದಸ್ಯರಾಗಿ ಉಡುಪಿಗೆ ಸೀಮಿತರಾಗಿ ಓಡಾಡಿಕೊಂಡಿದ್ದ, ಲೋಕಸಭೆಯ ಕನಸೂ ಕಾಣದಿದ್ದ ಯುವಕ ಆಸ್ಕರ್ ಫೆರ್ನಾಂಡಿಸ್ ರಾತ್ರಿಬೆಳಗಾಗುವಷ್ಟರಲ್ಲಿ ಫೇಮಸ್ ಆಗಿ ಬಿಟ್ಟರು. ಟಿ.ಎ. ಪೈ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಯು) ಪಕ್ಷದಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಅಂದ ಹಾಗೆ ಈ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಯು) ಎನ್ನುವುದು ಇಂದಿರಾ ಗಾಂಧಿ ಅವರ ವಿರುದ್ಧ ಬಂಡೆದ್ದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸ್ಥಾಪಿಸಿದ ಪಕ್ಷವಾಗಿತ್ತು.
ಅಂದಿನ ಚುನಾವಣೆಯಲ್ಲಿ ಟಿ.ಎ. ಪೈ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು! ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಎಸ್. ಆಚಾರ್ಯ ಎರಡನೇ ಸ್ಥಾನ ಪಡೆದರು. ಆಸ್ಕರ್ ಫೆರ್ನಾಂಡಿಸ್ ಸಂಸದರಾಗಿ ಆಯ್ಕೆಯಾದರು.
ನ್ಯಾ. ಕೆ.ಎಸ್. ಹೆಗ್ಡೆ ಅವರನ್ನೇ ಸೋಲಿಸಿದರು!
ಮುಂದಿನ 1984ರ ಚುನಾವಣೆಯಲ್ಲಿ ಆಸ್ಕರ್ ಫರ್ನಾಂಡಿಸ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನ್ಯಾ. ಕೆ.ಎಸ್. ಹೆಗ್ಡೆ ಅವರನ್ನೇ ಸೋಲಿಸಿದರು. ನ್ಯಾ. ಹೆಗ್ಡೆ ಅವರು 1977ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜನತಾ ಪರಿವಾರದ ಅಭ್ಯರ್ಥಿಯಾಗಿ ಗೆದ್ದಿದ್ದರು. ಹೀಗೆ ಆಸ್ಕರ್ ಫರ್ನಾಂಡಿಸ್ ನಿರಂತರ ನಾಲ್ಕು ಬಾರಿ ಉಡುಪಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಆದರೆ 1998ರಲ್ಲಿ ಬಿಜೆಪಿಯ ಐ.ಎಂ. ಜಯರಾಂ ಶೆಟ್ಟಿ ಅವರೆದುರು ಆಸ್ಕರ್ ಫೆರ್ನಾಂಡಿಸ್ ಸೋತು ಹೋದರು. ಮತ್ತೆಂದೂ ಅವರು ಲೋಕಸಭೆಗೆ ಸ್ಪರ್ಧಿಸಲು ಹೋಗಲಿಲ್ಲ. ಬದಲಿಗೆ ನಾಲ್ಕು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಆಸ್ಕರ್, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಯನ್ನು ನಿರ್ವಹಿಸಿದ್ದರು. 2021ರಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಧಾರವಾಡದಲ್ಲಿ ಸತತ 4 ಬಾರಿ ಗೆಲುವು ಸಾಧಿಸಿರುವ ಪ್ರಹ್ಲಾದ್ ಜೋಶಿ!
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಸತತವಾಗಿ ಒಟ್ಟು ನಾಲ್ಕು ಬಾರಿ ಗೆದ್ದ ದಾಖಲೆ ಜೋಶಿಯವರದು. 2004ರಲ್ಲಿ ಪ್ರಹ್ಲಾದ ಜೋಶಿ ಅವರು ಮೊದಲ ಬಾರಿ ಧಾರವಾಡ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಎಸ್.ಪಾಟೀಲ್ ಅವರನ್ನು 83,078 ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಮೊದಲು ಧಾರವಾಡ ಉತ್ತರ ಮತ್ತು ಧಾರವಾಡ ದಕ್ಷಿಣ ಎಂಬ ಎರಡು ಪ್ರತ್ಯೇಕ ಲೋಕಸಭೆ ಕ್ಷೇತ್ರಗಳಿದ್ದವು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಇದು ಧಾರವಾಡ ಕ್ಷೇತ್ರ ಎಂದಾಯಿತು. 2009ರಲ್ಲಿ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಅವರನ್ನು 1,37,663 ಮತಗಳ ಅಂತರದಿಂದ ಸೋಲಿಸಿದರು.
2014ರಲ್ಲಿ ಜೋಶಿ ಅವರು ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರನ್ನು 1,13,657 ಮತಗಳ ಅಂತರದಿಂದ ಮತ್ತೊಮ್ಮೆ ಪರಾಭವಗೊಳಿಸಿದರು. 2019ರಲ್ಲಿ ಅವರು 2,05,072 ಮತಗಳಿಂದ ಗೆದ್ದು ಕಾಂಗ್ರೆಸ್ ವಿನಯ್ ಕುಲಕರ್ಣಿ ಅವರಿಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಿದರು!
ಈದ್ಗಾ ಹೋರಾಟದಲ್ಲಿ ಮುಂಚೂಣಿ
90ರ ದಶಕದ ಆರಂಭದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹೋರಾಟದಲ್ಲಿ ಪ್ರಹ್ಲಾದ್ ಜೋಶಿ ಅವರು ಮುಂಚೂಣಿಯಲ್ಲಿದ್ದರು. ಕಾಶ್ಮೀರ ಉಳಿಸಿ ಆಂದೋಲನದಲ್ಲೂ ಅವರು ಸಕ್ರಿಯರಾಗಿದ್ದರು. 2014ರಿಂದ 2016ರ ಅವಧಿಯಲ್ಲಿ ಜೋಶಿ ಅವರು ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿದ್ದರು. ಜೋಶಿ ಅವರು ಈಗ ಕೇಂದ್ರದ ನರೇಂದ್ರ ಮೋದಿ ಸಂಪುಟದಲ್ಲಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳಂಥ ಮಹತ್ವದ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೋರ್ ಟೀಮ್‌ನಲ್ಲಿ ಪ್ರಹ್ಲಾದ್ ಜೋಶಿ ಅವರೂ ಪ್ರಮುಖರಾಗಿದ್ದಾರೆ.
ಇದನ್ನೂ ಓದಿ: Parliament Flashback: ಧಾರವಾಡದಲ್ಲಿ ಸತತ 4 ಬಾರಿ ಗೆಲುವು ಸಾಧಿಸಿರುವ ಪ್ರಲ್ಹಾದ್ ಜೋಶಿ!