Site icon Vistara News

Parliament Flashback: ಭ್ರಷ್ಟಾಚಾರಕ್ಕೆ ಜನಾಕ್ರೋಶ; 1989ರ ಲೋಕಸಭೆಯಲ್ಲಿ 404ರಿಂದ 197ಕ್ಕೆ ಇಳಿದಿದ್ದ ಕಾಂಗ್ರೆಸ್‌ ಸೀಟುಗಳು!

Parliament Flashback

vp singh and rajiv gandhi

ಬೆಂಗಳೂರು: 1984ರ ಚುನಾವಣೆಯಲ್ಲಿ ಅಭೂತಪೂರ್ವ ಎಂಬಂತೆ ಕಾಂಗ್ರೆಸ್‌ (Congress) 4೦4 ಸೀಟುಗಳನ್ನು ಗೆದ್ದುಕೊಂಡಿತ್ತು. ಪ್ರಚಂಡ ಬಹುಮತದೊಂದಿಗೆ ರಾಜೀವ್‌ ಗಾಂಧಿ (Rajiv Gandhi) ಅವರು ಪ್ರಧಾನಿಯಾಗಿ ಮುಂದುವರಿದಿದ್ದರು. ಆದರೆ ರಾಜೀವ್‌ ಗಾಂಧಿ ಸರ್ಕಾರ ಬೋಫೋರ್ಸ್‌ ಕಮಿಷನ್‌ ಪ್ರಕರಣ ಸೇರಿದಂತೆ ಹಲವು ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿತು. ಇನ್ನೊಂದೆಡೆ ಶ್ರೀಲಂಕಾಕ್ಕೆ ಶಾಂತಿಪಾಲನಾ ಪಡೆ ಕಳುಹಿಸಿ ಹಿನ್ನಡೆ ಕಂಡಿದ್ದೂ ಜನಾಕ್ರೋಶಕ್ಕೆ ಕಾರಣವಾಯಿತು (Parliament Flashback).

ರಕ್ಷಣೆ, ಹಣಕಾಸಿನಂಥ ಮಹತ್ವದ ಖಾತೆಗಳನ್ನು ಹೊಂದಿದ್ದ ವಿ.ಪಿ.ಸಿಂಗ್‌ ಅವರು ರಾಜೀವ್‌ ಗಾಂಧಿ ವಿರುದ್ಧ ಬಂಡೆದ್ದರು. ಸಿಂಗ್‌ ಅವರನ್ನು ಸಂಪುಟದಿಂದ ರಾಜೀವ್‌ ಗಾಂಧಿ ವಜಾ ಮಾಡಿದರು. ಆಗ ಕಾಂಗ್ರೆಸ್‌ ಪಕ್ಷ ತೊರೆದ ವಿ.ಪಿ.ಸಿಂಗ್‌ ಜನ್‌ ಮೋರ್ಚಾ ಸ್ಥಾಪನೆ ಮಾಡಿದರು. ಅರುಣ್‌ ನೆಹರೂ, ಆರೀಫ್‌ ಮೊಹಮ್ಮದ್‌ ಖಾನ್‌ರಂಥ ಹಿರಿಯ ನಾಯಕರೂ ಕಾಂಗ್ರೆಸ್‌ ತೊರೆದು ವಿ.ಪಿ.ಸಿಂಗ್‌ ಜತೆ ಸೇರಿದರು.

1989ರ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 197 ಸ್ಥಾನಗಳಿಗೆ ಸೀಮಿತವಾಯಿತು. ಹಿಂದಿನ ಚುನಾವಣೆಗೆ ಹೋಲಿಸಿದರೆ 217 ಸೀಟುಗಳನ್ನು ಕಳೆದುಕೊಂಡಿತು. ವಿ.ಪಿ.ಸಿಂಗ್‌ ನೇತೃತ್ವದ ಜನತಾ ದಳ 143 ಸೀಟುಗಳನ್ನು ಗೆದ್ದುಕೊಂಡಿತು. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ಬಿಜೆಪಿ ಈ ಚುನಾವಣೆಯಲ್ಲಿ 85 ಕ್ಷೇತ್ರಗಳಲ್ಲಿ ಜಯ ಗಳಿಸಿ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸಿಪಿಎಂಗೆ 33, ಸಿಪಿಐಗೆ 12 ಸೀಟುಗಳು ಸಿಕ್ಕವು.

ದೇಶದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಆದರೂ ಕರ್ನಾಟಕದಲ್ಲಿ ಮಾತ್ರ 28ರಲ್ಲಿ 27 ಸೀಟುಗಳು ಕಾಂಗ್ರೆಸ್‌ ಪಾಲಾದವು. ಕೊಪ್ಪಳದಲ್ಲಿ ಮಾತ್ರ ಜನತಾ ದಳದ ಅಭ್ಯರ್ಥಿ ಜಯ ಗಳಿಸಿದರು. ವಿಶೇಷ ಏನೆಂದರೆ ಕೇಂದ್ರದ ಜನತಾ ದಳ ಸರ್ಕಾರಕ್ಕೆ ಬಲ ಪಂಥೀಯ ಬಿಜೆಪಿ ಮತ್ತು ಎಡ ಪಂಥೀಯ ಸಿಪಿಎಂ ಬಾಹ್ಯ ಬೆಂಬಲ ನೀಡಿತು! ಈ ಎರಡು ಪಕ್ಷಗಳ ಬೆಂಬಲದೊಂದಿಗೆ ವಿ.ಪಿ.ಸಿಂಗ್‌ ಪ್ರಧಾನಮಂತ್ರಿಯಾದರು. ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು.

1984ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್‌ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್‌!

Iಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು (Lok Sabha Election 2024) ಘೋಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸೀಟುಗಳನ್ನು 1984ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.

1984ರಲ್ಲಿ ಇಂದಿರಾ ಗಾಂಧಿಯವರು ಖಲಿಸ್ತಾನಿ ಉಗ್ರರ ಸಂಚಿಗೆ ಬಲಿಯಾದರು. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದ್ದರೂ ಇಂದಿರಾ ಹತ್ಯೆ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್‌ ಮೊದಲೇ ಚುನಾವಣೆಯ ಮೊರೆ ಹೋಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು 516 ಲೋಕಸಭೆ ಸ್ಥಾನಗಳಲ್ಲಿ 404 ಸೀಟುಗಳನ್ನು ಬಾಚಿಕೊಂಡಿತು!

ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಸೀಟು ಗಳಿಕೆಯ ದಾಖಲೆ. ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ ಆ ಚುನಾವಣೆಯಲ್ಲಿ ಶೇ. 49.10 ಇತ್ತು. ಪ್ರತಿಪಕ್ಷಗಳೆಲ್ಲ ಧೂಳೀಪಟವಾದವು. 30 ಸ್ಥಾನ ಗಳಿಸಿದ ತೆಲುಗು ದೇಶಂ ಪಾರ್ಟಿ ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆಯಿತು. ಸಿಪಿಐಎಂಗೆ 22 ಮತ್ತು ಎಐಎಡಿಎಂಕೆಗೆ 12 ಸೀಟುಗಳು ಲಭಿಸಿದವು.

ಇದನ್ನೂ ಓದಿ: Parliament Flashback: ಲೋಕಸಭೆಯಲ್ಲಿ ದೇಶದ ಮೊದಲ ಮೈತ್ರಿ ಕೂಟದ ಕತೆ ಏನಾಗಿತ್ತು ನೋಡಿ!

ಬಿಜೆಪಿಗೆ ಎರಡೇ ಸೀಟು

ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಮಾತ್ರ! ಗುಜರಾತ್‌ನ ಮೆಹಸಾನಾದಿಂದ ಡಾ.ಎ.ಕೆ. ಪಟೇಲ್‌ ಮತ್ತು ಆಂಧ್ರಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಜಂಗಾ ರೆಡ್ಡಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದರು. ಬಿಜೆಪಿ ಮೇರು ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರೇ ತಮ್ಮ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ಮಾಧವ್‌ ರಾವ್‌ ಸಿಂಧಿಯಾ ಎದುರು ಹೀನಾಯವಾಗಿ ಸೋತು ಹೋದರು. ಕಾಂಗ್ರೆಸ್‌ ಪಾಲಿಗೆ ಇದು ಸ್ಮರಣೀಯ ಲೋಕಸಭಾ ಚುನಾವಣೆಯಾಗಿ ದಾಖಲಾಗಿತ್ತು.

Exit mobile version