Site icon Vistara News

Parliament Flashback: ಲೋಕಸಭೆಯಲ್ಲಿ ದೇಶದ ಮೊದಲ ಮೈತ್ರಿ ಕೂಟದ ಕತೆ ಏನಾಗಿತ್ತು ನೋಡಿ!

Parliament Flashback

Morarji Desai

ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್‌ ನೇತೃತ್ವದಲ್ಲಿ ಐಎನ್‌ಡಿಐಎ ಮೈತ್ರಿಕೂಟ (Parliament Flashback) ರೂಪುಗೊಂಡಿದೆ. ಮೈತ್ರಿಕೂಟ ಕಲ್ಪನೆ ಭಾರತದ ರಾಜಕೀಯ ವ್ಯವಸ್ಥೆಗೆ ಹೊಸದಲ್ಲ. 1969ರಲ್ಲಿ ಕಾಂಗ್ರೆಸ್‌ ಇಬ್ಭಾಗವಾಯಿತು. ಇಂದಿರಾ ಗಾಂಧಿ ಬೆಂಬಲಿಗರದು ಕಾಂಗ್ರೆಸ್‌ ಆರ್‌ ಮತ್ತು ಅವರ ವಿರೋಧಿ ನಾಯಕರದು ಕಾಂಗ್ರೆಸ್‌ ಓ ಪಕ್ಷವಾಯಿತು. ಮೊರಾರ್ಜಿ ದೇಸಾಯಿ, ಕೆ.ಕಾಮರಾಜ್‌, ಕರ್ನಾಟಕದ ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ರಂಥ ಘಟಾನುಘಟಿ ನಾಯಕರು ಇಂದಿರಾ ಗಾಂಧಿ ಅವರನ್ನು ಸೋಲಿಸಲು ಪಣತೊಟ್ಟರು.

ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ, ಸ್ವತಂತ್ರ ಪಾರ್ಟಿ, ಭಾರತೀಯ ಜನ ಸಂಘ ಮುಂತಾದ ಪ್ರತಿಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಓ ಜತೆ ಸೇರಿಕೊಂಡು ಇಂದಿರಾ ವಿರೋಧಿ ಮೈತ್ರಿಕೂಟ ರಚಿಸಿಕೊಂಡವು. ಈ ಮೈತ್ರಿಕೂಟ ದೇಶಾದ್ಯಂತ ಸೀಟು ಹೊಂದಾಣಿಕೆ ಮಾಡಿಕೊಂಡು ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ ಆರ್‌ ಪಕ್ಷದ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು.

ಮೈತ್ರಿಕೂಟ ನಾಯಕರಿಗೆ ಅಪಾರ ನಿರೀಕ್ಷೆ ಇತ್ತು

ಕಳೆದ ಚುನಾವಣೆಯಲ್ಲೇ ಕಾಂಗ್ರೆಸ್‌ 78 ಸ್ಥಾನಗಳನ್ನು ಕಳೆದುಕೊಂಡಿತ್ತು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋಲು ಖಚಿತ ಎಂದು ಪ್ರತಿಪಕ್ಷಗಳ ನಾಯಕರು ಲೆಕ್ಕಾಚಾರ ಹಾಕಿದ್ದರು. ಆದರೆ 1971ರ ಚುನಾವಣೆಯಲ್ಲಿ ಅಚ್ಚರಿದಾಯಕ ಫಲಿತಾಂಶ ಪ್ರಕಟವಾಯಿತು. 521 ಕ್ಷೇತ್ರಗಳಲ್ಲಿ ಇಂದಿರಾ ಕಾಂಗ್ರೆಸ್‌ 352 ಸೀಟುಗಳನ್ನು ಗೆದ್ದಿತು! ಇಂದಿರಾ ವಿರೋಧಿಗಳ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 16 ಸೀಟುಗಳು!

ಹಿಂದಿನ ಚುನಾವಣೆಯಲ್ಲಿ ಗಣನೀಯವಾಗಿ ಸೀಟುಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದ ಪ್ರಮುಖ ಪ್ರತಿಪಕ್ಷಗಳು ಭಾರಿ ಹಿನ್ನಡೆ ಕಾಣಬೇಕಾಯಿತು. ಸ್ವತಂತ್ರ ಪಾರ್ಟಿ 36 ಸ್ಥಾನಗಳನ್ನು ಕಳೆದುಕೊಂಡು ಕೇವಲ 8 ಸೀಟುಗಳಿಗೆ ಸೀಮಿತವಾಯಿತು. ಸಂಯುಕ್ತ ಸೋಷಿಯಲ್‌ ಪಾರ್ಟಿ 20 ಸ್ಥಾನ ಕಳೆದುಕೊಂಡು ಕೇವಲ 3 ಸೀಟುಗಳನ್ನು ಗೆದ್ದಿತು. ಭಾರತೀಯ ಜನ ಸಂಘ ಕೂಡ ಹಿಂದಿನ ಬಾರಿಗಿಂತ 13 ಸ್ಥಾನಗಳನ್ನು ಕಳೆದುಕೊಂಡು 22 ಸೀಟುಗಳಿಗೆ ತೃಪ್ತಿಪಡಬೇಕಾಯಿತು. ಹೀಗೆ ದೇಶದ ಮೊದಲ ಪ್ರತಿಪಕ್ಷಗಳ ಮೈತ್ರಿಕೂಟ ಹೀನಾಯ ಹಿನ್ನಡೆ ಕಂಡಿತು. ಭಿನ್ನಮತೀಯರ ತೀವ್ರ ಪ್ರತಿರೋಧದ ನಡುವೆಯೂ ಇಂದಿರಾ ಗಾಂಧಿ ಅವರು ಭರ್ಜರಿ ಬಹುಮತದೊಂದಿಗೆ ಪ್ರಧಾನಿಯಾಗಿ ಅಧಿಕಾರ ಮುಂದುವರಿಸಿದರು.

1984ರಲ್ಲಿ 400 ಪ್ಲಸ್‌ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್‌!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು (Lok Sabha Election 2024) ಘೋಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸೀಟುಗಳನ್ನು 1984ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.

1984ರಲ್ಲಿ ಇಂದಿರಾ ಗಾಂಧಿಯವರು ಖಲಿಸ್ತಾನಿ ಉಗ್ರರ ಸಂಚಿಗೆ ಬಲಿಯಾದರು. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದ್ದರೂ ಇಂದಿರಾ ಹತ್ಯೆ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್‌ ಮೊದಲೇ ಚುನಾವಣೆಯ ಮೊರೆ ಹೋಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು 516 ಲೋಕಸಭೆ ಸ್ಥಾನಗಳಲ್ಲಿ 404 ಸೀಟುಗಳನ್ನು ಬಾಚಿಕೊಂಡಿತು!

ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಸೀಟು ಗಳಿಕೆಯ ದಾಖಲೆ. ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ ಆ ಚುನಾವಣೆಯಲ್ಲಿ ಶೇ. 49.10 ಇತ್ತು. ಪ್ರತಿಪಕ್ಷಗಳೆಲ್ಲ ಧೂಳೀಪಟವಾದವು. 30 ಸ್ಥಾನ ಗಳಿಸಿದ ತೆಲುಗು ದೇಶಂ ಪಾರ್ಟಿ ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆಯಿತು. ಸಿಪಿಐಎಂಗೆ 22 ಮತ್ತು ಎಐಎಡಿಎಂಕೆಗೆ 12 ಸೀಟುಗಳು ಲಭಿಸಿದವು.

ಬಿಜೆಪಿಗೆ ಎರಡೇ ಸೀಟು

ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಮಾತ್ರ! ಗುಜರಾತ್‌ನ ಮೆಹಸಾನಾದಿಂದ ಡಾ. ಎ ಕೆ ಪಟೇಲ್‌ ಮತ್ತು ಆಂಧ್ರಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಜಂಗಾ ರೆಡ್ಡಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದರು. ಬಿಜೆಪಿ ಮೇರು ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರೇ ತಮ್ಮ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ಮಾಧವ್‌ ರಾವ್‌ ಸಿಂಧಿಯಾ ಎದುರು ಹೀನಾಯವಾಗಿ ಸೋತು ಹೋದರು. ಕಾಂಗ್ರೆಸ್‌ ಪಾಲಿಗೆ ಇದು ಸ್ಮರಣೀಯ ಲೋಕಸಭಾ ಚುನಾವಣೆಯಾಗಿ ದಾಖಲಾಯಿತು.

ಇದನ್ನೂ ಓದಿ: Parliament Flashback: ಉಡುಪಿಯಲ್ಲಿ ಗುರುವಿಗೇ ಸೋಲಿನ ರುಚಿ ತೋರಿಸಿದ್ದ ಆಸ್ಕರ್‌ ಫೆರ್ನಾಂಡಿಸ್‌!

Exit mobile version