ಬೆಂಗಳೂರು: ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಹೇರಿದ್ದ ತುರ್ತು ಪರಿಸ್ಥಿತಿ (Emergency) ದೇಶಾದ್ಯಂತ ಜನ (Parliament Flashback) ಕಾಂಗ್ರೆಸ್ (Congress) ವಿರುದ್ಧ ತಿರುಗಿ ಬೀಳುವಂತೆ ಮಾಡಿತ್ತು. 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ 21 ತಿಂಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್, ಕಮ್ಯುನಿಸ್ಟ್ ನಾಯಕರಾದ ಜೋತಿ ಬಸು, ಪಿನರಾಯಿ ವಿಜಯನ್ ಮುಂತಾದ ಪ್ರತಿಪಕ್ಷ ನಾಯಕರನ್ನೆಲ್ಲ ಇಂದಿರಾ ಗಾಂಧಿ ಅವರು ಜೈಲಿಗಟ್ಟಿದ್ದರು (Parliament Flashback).
ಇಂದಿರಾ ಗಾಂಧಿ ಅವರ ಕಿರಿಯ ಮಗ ಸಂಜಯ್ ಗಾಂಧಿ ಅವರಂತೂ ತುರ್ತು ಪರಿಸ್ಥಿತಿ ಅವಧಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದರು. ತುರ್ತು ಪರಿಸ್ಥಿತಿಯ ಆದೇಶ ಹಿಂತೆಗೆದುಕೊಂಡ ಬಳಿಕ 1977ರಲ್ಲಿ ದೇಶದ ಆರನೇ ಲೋಕಸಭೆ ಚುನಾವಣೆ ನಡೆಯಿತು.
ಕಾಂಗ್ರೆಸ್‌ಗೆ ಕೇವಲ 154 ಸೀಟು!
544 ಲೋಕಸಭೆ ಸ್ಥಾನಗಳ ಪೈಕಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಕೇವಲ 154 ಸೀಟುಗಳೊಂದಿಗೆ ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡಿತು. ಹಿಂದಿನ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ 198 ಸೀಟುಗಳನ್ನು ಕಳೆದುಕೊಂಡಿತು.
ಜನ ಸಂಘ ಮತ್ತಿತರ ಪಕ್ಷಗಳ ಮೈತ್ರಿಕೂಟವಾದ ಜನತಾ ಪಾರ್ಟಿ 295 ಸೀಟುಗಳನ್ನು ಗೆದ್ದುಕೊಂಡಿತು. ಆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಎಐಎಡಿಎಂಕೆ 18, ಸಿಪಿಐಎಂ 22 ಮತ್ತು ಸಿಪಿಐ 7 ಸ್ಥಾನಗಳನ್ನು ಗೆದ್ದುಕೊಂಡಿತು.
ರಾಯ್‌ಬರೇಲಿಯಲ್ಲಿ ಇಂದಿರಾ ಗಾಂಧಿ ಅವರು ಜನತಾ ಪಕ್ಷದ ಅಭ್ಯರ್ಥಿ ರಾಜ್ ನಾರಾಯಣ್ ಎದುರು 55,202 ಮತಗಳ ಅಂತರದಿಂದ ಸೋತು ಹೋದರು.
ಅಮೇಥಿಯಲ್ಲಿ ಸಂಜಯ್ ಗಾಂಧಿ ಅವರು ಜನತಾ ಪಕ್ಷದ ಅಭ್ಯರ್ಥಿ ರವೀಂದ್ರ ಪ್ರತಾಪ್ ಸಿಂಗ್ ಎದುರು 75,844 ಮತಗಳ ಅಂತರದಿಂದ ಪರಾಭವಗೊಂಡರು. ಇಡೀ ದೇಶದಲ್ಲಿ ಹಿನ್ನಡೆ ಆದರೂ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ 28ರಲ್ಲಿ 26 ಸೀಟುಗಳನ್ನು ಬಾಚಿಕೊಂಡಿತು!
ದೇಶದ ಮೊದಲ ಮೈತ್ರಿ ಕೂಟ ಹೀನಾಯ ಹಿನ್ನಡೆ ಕಂಡಿತ್ತು
ಬಿಜೆಪಿ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಐಎನ್‌ಡಿಐಎ ಮೈತ್ರಿಕೂಟ (Parliament Flashback) ರೂಪುಗೊಂಡಿದೆ. ಮೈತ್ರಿಕೂಟ ಕಲ್ಪನೆ ಭಾರತದ ರಾಜಕೀಯ ವ್ಯವಸ್ಥೆಗೆ ಹೊಸದಲ್ಲ. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಇಂದಿರಾ ಗಾಂಧಿ ಬೆಂಬಲಿಗರದು ಕಾಂಗ್ರೆಸ್ ಆರ್ ಮತ್ತು ಅವರ ವಿರೋಧಿ ನಾಯಕರದು ಕಾಂಗ್ರೆಸ್ ಓ ಪಕ್ಷವಾಯಿತು. ಮೊರಾರ್ಜಿ ದೇಸಾಯಿ, ಕೆ ಕಾಮರಾಜ್, ಕರ್ನಾಟಕದ ಎಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ರಂಥ ಘಟಾನುಘಟಿ ನಾಯಕರು ಇಂದಿರಾ ಗಾಂಧಿ ಅವರನ್ನು ಸೋಲಿಸಲು ಪಣತೊಟ್ಟರು.
ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಸ್ವತಂತ್ರ ಪಾರ್ಟಿ, ಭಾರತೀಯ ಜನ ಸಂಘ ಮುಂತಾದ ಪ್ರತಿಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಓ ಜತೆ ಸೇರಿಕೊಂಡು ಇಂದಿರಾ ವಿರೋಧಿ ಮೈತ್ರಿಕೂಟ ರಚಿಸಿಕೊಂಡವು. ಈ ಮೈತ್ರಿಕೂಟ ದೇಶಾದ್ಯಂತ ಸೀಟು ಹೊಂದಾಣಿಕೆ ಮಾಡಿಕೊಂಡು ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಆರ್ ಪಕ್ಷದ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು.
ಮೈತ್ರಿಕೂಟ ನಾಯಕರಿಗೆ ಅಪಾರ ನಿರೀಕ್ಷೆ ಇತ್ತು
ಕಳೆದ ಚುನಾವಣೆಯಲ್ಲೇ ಕಾಂಗ್ರೆಸ್ 78 ಸ್ಥಾನಗಳನ್ನು ಕಳೆದುಕೊಂಡಿತ್ತು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋಲು ಖಚಿತ ಎಂದು ಪ್ರತಿಪಕ್ಷಗಳ ನಾಯಕರು ಲೆಕ್ಕಾಚಾರ ಹಾಕಿದ್ದರು. ಆದರೆ 1971ರ ಚುನಾವಣೆಯಲ್ಲಿ ಅಚ್ಚರಿದಾಯಕ ಫಲಿತಾಂಶ ಪ್ರಕಟವಾಯಿತು. 521 ಕ್ಷೇತ್ರಗಳಲ್ಲಿ ಇಂದಿರಾ ಕಾಂಗ್ರೆಸ್ 352 ಸೀಟುಗಳನ್ನು ಗೆದ್ದಿತು! ಇಂದಿರಾ ವಿರೋಧಿಗಳ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 16 ಸೀಟುಗಳು!
ಹಿಂದಿನ ಚುನಾವಣೆಯಲ್ಲಿ ಗಣನೀಯವಾಗಿ ಸೀಟುಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದ ಪ್ರಮುಖ ಪ್ರತಿಪಕ್ಷಗಳು ಭಾರಿ ಹಿನ್ನಡೆ ಕಾಣಬೇಕಾಯಿತು. ಸ್ವತಂತ್ರ ಪಾರ್ಟಿ 36 ಸ್ಥಾನಗಳನ್ನು ಕಳೆದುಕೊಂಡು ಕೇವಲ 8 ಸೀಟುಗಳಿಗೆ ಸೀಮಿತವಾಯಿತು. ಸಂಯುಕ್ತ ಸೋಷಿಯಲ್ ಪಾರ್ಟಿ 20 ಸ್ಥಾನ ಕಳೆದುಕೊಂಡು ಕೇವಲ 3 ಸೀಟುಗಳನ್ನು ಗೆದ್ದಿತು. ಭಾರತೀಯ ಜನ ಸಂಘ ಕೂಡ ಹಿಂದಿನ ಬಾರಿಗಿಂತ 13 ಸ್ಥಾನಗಳನ್ನು ಕಳೆದುಕೊಂಡು 22 ಸೀಟುಗಳಿಗೆ ತೃಪ್ತಿಪಡಬೇಕಾಯಿತು. ಹೀಗೆ ದೇಶದ ಮೊದಲ ಪ್ರತಿಪಕ್ಷಗಳ ಮೈತ್ರಿಕೂಟ ಹೀನಾಯ ಹಿನ್ನಡೆ ಕಂಡಿತು. ಭಿನ್ನಮತೀಯರ ತೀವ್ರ ಪ್ರತಿರೋಧದ ನಡುವೆಯೂ ಇಂದಿರಾ ಗಾಂಧಿ ಅವರು ಭರ್ಜರಿ ಬಹುಮತದೊಂದಿಗೆ ಪ್ರಧಾನಿಯಾಗಿ ಅಧಿಕಾರ ಮುಂದುವರಿಸಿದರು.
ಇದನ್ನೂ ಓದಿ: Parliament Flashback: 1984ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್!