Site icon Vistara News

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi proposing arecanut millets and fisheries

ಶಿರಸಿ (ಉತ್ತರ ಕನ್ನಡ): ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಪ್ರಚಾರ ಕಾರ್ಯವನ್ನು ಆರಂಭ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದ ಅಡಿಕೆ (Arecanut), ಸಿರಿಧಾನ್ಯ (Millet) ಹಾಗೂ ಮೀನುಗಾರಿಕೆ (Fishing) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಿಮ್ಮ ಅಡಿಕೆ ಬೆಳೆಗೆ ಜಿಐ ಟ್ಯಾಗ್‌ (GI Tag) ಅನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದು ನಮ್ಮ ಎನ್‌ಡಿಎ ಸರ್ಕಾರವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕರ್ನಾಟಕದಲ್ಲಿ ಸಿರಿ ಧಾನ್ಯಗಳಿಗೆ ಬೇಡಿಕೆ ಹಾಗೂ ಹೂಡಿಕೆ ಹೆಚ್ಚುವಂತೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪ್ರಸ್ತಾಪ ಮಾಡಿದರು.

ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೀನುಗಾರರಿಗೂ ಮೊದಲ ಬಾರಿಗೆ ಕಿಸಾನ್ ಕಾರ್ಡ್‌ ಕೊಡಿಸುದ್ದು ನಮ್ಮ ಸರ್ಕಾರವಾಗಿದೆ. 20 ಸಾವಿರ ಕೋಟಿ ರೂಪಾಯಿ ಕೊಟ್ಟು ಮತ್ಸ್ಯ ಸಂಪದ ಯೋಜನೆಯನ್ನು ರೂಪಿಸಿ ಎಲ್ಲ ರೀತಿ ಪ್ರೋತ್ಸಾಹವನ್ನು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಕಾಂಗ್ರೆಸ್‌ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಈ ರಾಮಮಂದಿರವನ್ನು ಸರ್ಕಾರದ ಖಜಾನೆಯಿಂದ ನಿರ್ಮಾಣ ಮಾಡಿದ್ದಲ್ಲ, ದೇಶದ ನಾಗರಿಕರ ತೆರಿಗೆ ಹಣದಿಂದ ಕಟ್ಟಿದ್ದಲ್ಲ. ಇದು ಹಿಂದುಸ್ತಾನದ ಪ್ರತಿಯೊಬ್ಬ ರಾಮ ಭಕ್ತ ನೀಡಿದ ದೇಣಿಗೆಯಿಂದ ಕಟ್ಟಲಾಗಿದೆ. ಇದಕ್ಕಾಗಿ ಕೆಲವರು 5 ರೂ., 100 ರೂ, ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ ಆದರೆ, ಕಾಂಗ್ರೆಸ್‌ ಪಕ್ಷ ಹಾಗೂ ಅವರ ಮಿತ್ರ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. 70 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಆದರೆ, ರಾಮಮಂದಿರ ಟ್ರಸ್ಟಿಗಳು ಅವರ ಈ ಎಲ್ಲ ಪಾಪಗಳನ್ನು ಕ್ಷಮಿಸಿ, ಅವರ ಮನೆಗಳಿಗೆ ಹೋಗಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಬನ್ನಿ ಎಂದು ಆಹ್ವಾನವನ್ನು ಕೊಟ್ಟರು. ಆದರೆ, ಅವರು ಮಾಡಿದ್ದೇನು? ಕಾರ್ಯಕ್ರಮಕ್ಕೆ ಬರಲು ನಿರಾಕರಣೆ ಮಾಡಿದರು ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಶಿರಸಿಯ ಮೋದಿ ಸಮಾವೇಶದ ಲೈವ್‌ ವಿಡಿಯೊ ಇಲ್ಲಿದೆ

ವಿಕಸಿತ ಕರ್ನಾಟಕ ಹಾಗೂ ವಿಕಸಿತ ಭಾರತಕ್ಕೋಸ್ಕರ ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಬಂದಿದ್ದೇನೆ. ನನಗೆ ಇಲ್ಲಿ ಬಂದ ಮೇಲೆ ಇಷ್ಟು ಪ್ರಮಾಣದಲ್ಲಿ ಮಾತೆಯರು ಸೇರಿರುವುದನ್ನು ನೋಡಿದರೆ ನನಗೆ ತಿಳಿಯುತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಅವಶ್ಯವಾಗಿ ಇದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ಸಂಪುಟದ ಸದಸ್ಯರಾದ ಪ್ರಲ್ಹಾದ್‌ ಜೋಶಿ ಅವರನ್ನು ಭಾರಿ ಅಂತರದಿಂದ ನೀವು ಗೆಲ್ಲಿಸಲಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮಗೆ ಮನೆ, ವಿದ್ಯುತ್‌, ನೀರಿನ ಸಂಪರ್ಕ ಕೊಡಲು ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಧಾರವಾಡದಲ್ಲಿ ಐಐಟಿ ಮಾಡಿದ್ದೇವೆ, ಬಹುದೊಡ್ಡ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ಮಾಡಲಾಗಿದೆ. ಅಮೆರಿಕದಲ್ಲಿ ಸಹ ಭಾರತಕ್ಕೆ ಜೈಕಾರ ಸಿಗುತ್ತಿದೆ. ಯುರೋಪ್‌ನಲ್ಲಿ ಸಹ ಭಾರತಕ್ಕೆ ಗೌರವ ಸಿಗುತ್ತಿದೆ. ಹಿಂದುಸ್ತಾನದ ಯಾರು ವಿದೇಶದ ಯಾವುದೇ ಮೂಲೆಗೆ ಹೋದರೂ ಭಾರತವನ್ನು ಗುರುತಿಸುತ್ತಾರೋ ಇಲ್ಲವೋ? ಇದೆಲ್ಲ ಆಗಿದ್ದು ಯಾರಿಂದ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಈ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಇದನ್ನು ನಿಮ್ಮ ಪ್ರತಿ ಮತವು ಮಾಡಿದೆ. ಕಳೆದ 10 ವರ್ಷದಲ್ಲಿ ನೀವು ನೀಡಿದ ಮತಗಳು ಇದೆಲ್ಲವನ್ನೂ ಮಾಡಿವೆ. ನಿಮ್ಮ ಏಕೈಕ ಮತಗಳ ಶಕ್ತಿಯಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಯಿತು. 140 ಕೋಟಿ ಭಾರತೀಯರು ನನ್ನ ಹಿಂದೆ ನಿಂತಿದ್ದೇ ಹೌದಾದರೆ ನಾವು ಏನನ್ನಾದರೂ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೇಹಾ ಕೊಲೆ ಪ್ರಕರಣ ಉಲ್ಲೇಖ

ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ಕೊಲೆ ಪ್ರಕರಣ ನಡೆದಿದೆ. ಹೆಣ್ಣು ಮಕ್ಕಳಿಗೆ ಈ ರಾಜ್ಯದಲ್ಲಿ ಈಗ ರಕ್ಷಣೆಯೇ ಇಲ್ಲವೇ? ಕರ್ನಾಟಕದಲ್ಲಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಹೆಣ್ಣು ಮಗಳ ರಕ್ಷಣೆಯ ಭಯ ಕಾಡುತ್ತಿದೆ. ಈ ಕಾಂಗ್ರೆಸ್‌ನಿಂದ ನಿಮ್ಮ ಮಗಳನ್ನು ರಕ್ಷಣೆ ಮಾಡಲು ಆಗುವುದಿಲ್ಲವೇ? ಕರ್ನಾಟಕದಲ್ಲಿ ಈ ಸರ್ಕಾರದಿಂದ ಮಹಿಳೆಯರ ರಕ್ಷಣೆ ಗಂಭೀರ ಸವಾಲಾಗಿದೆ. ಕೆಟ್ಟ ಸರ್ಕಾರದ ಸಲುವಾಗಿ ಈ ರೀತಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಬಾಂಬ್‌ ಸ್ಫೋಟ!

2014ರ ನಂತರ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಗಾಂಧಿನಗರದಲ್ಲಿ, ಸೂರತ್‌ನಲ್ಲಿ, ಮುಂಬೈ ರೇಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ ಆಯಿತು ಎಂಬ ಸುದ್ದಿಯನ್ನು ನೀವು ಕೇಳಿದ್ದೀರಾ? ಆದರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಯಿತು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಯಿತು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಬಾಂಬರ್‌ಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲ ಕಡೆ ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Exit mobile version