ಶಿವಮೊಗ್ಗ: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ದೇಶದ ಮಹಾನ್ ರೇಪಿಸ್ಟ್ ಒಬ್ಬನನ್ನು ಮೋದಿ ರಕ್ಷಣೆ ಮಾಡಿದ್ದಾರೆ. ಇದು ಮಹಾ ಅಪರಾಧ ಎಂದು ಗುಡುಗಿದ್ದಾರೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಭಾಷಣ ಮಾಡಿದ ರಾಹುಲ್ ಗಾಂಧಿ, ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ 400 ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಾರೆ. ಇದು ಕೇವಲ ಸೆಕ್ಸ್ ಕ್ಯಾಂಡಲ್ ಅಲ್ಲ, ಅತ್ಯಾಚಾರವಾಗಿದೆ. ಇದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಂತಿದ್ದಾರೆ. ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಅಂತ ಬಿಜೆಪಿ ನಾಯಕರಿಗೆ ಗೊತ್ತಿತ್ತು. ಆದರೆ, ಹಾಸನದಲ್ಲಿ ಟಿಕೆಟ್ ಕೊಟ್ಟರು. ಬಿಜೆಪಿಯವರಿಗೆ ಹಾಗೂ ಮಹಿಳೆಯರಿಗೆ ಇದು ತಿಳಿಯಬೇಕು. ಮೋದಿ ಅವರು ಹಾಸನ ಹಾಗೂ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ತಲೆಬಾಗಿ ಕ್ಷಮೆ ಕೇಳಬೇಕು. ಇಡೀ ಪ್ರಪಂಚದಲ್ಲಿ ಇಂತಹ ಘಟನೆ ನೋಡಿಲ್ಲ, ನೋಡುವುದೂ ಇಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ಸೂಕ್ತ ತನಿಖೆ
ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆಸಿ ಸೂಕ್ತ ತನಿಖೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ನಡೆಸುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಮೋದಿಗೆ ಭಯ ಶುರುವಾಗಿದೆ
ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟಿದ್ದೇವೆ. ಪ್ರತಿ ಮನೆ ಯಜಮಾನಿಗೆ ಮಾಸಿಕವಾಗಿ ತಲಾ 2000 ರೂಪಾಯಿಯಂತೆ ಒಂದು ವರ್ಷಕ್ಕೆ 24 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ಈಗ ಗ್ಯಾರಂಟಿಯ ಭಾಗವಾಗಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದೇವೆ. ಇಡೀ ದೇಶದಲ್ಲಿ ಅಧಿಕಾರ ಬಂದರೆ ಮೊದಲು ಮಹಾಲಕ್ಷ್ಮಿ ಯೋಜನೆಯನ್ನು ತರುತ್ತೇವೆ. ಮೋದಿಯವರು ಜನರನ್ನು ಬಡವರನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಕುಟುಂಬದಿಂದ ಮಹಿಳೆಯರ ಹೆಸರನ್ನು ಸಂಗ್ರಹ ಮಾಡುತ್ತಾ ಇದ್ದಾರೆ. 1 ಲಕ್ಷ ರೂಪಾಯಿಯನ್ನು ಖಾತೆಗೆ ಹಾಕಲಾಗುವುದು. ಇದರಿಂದ ಮೋದಿಗೆ ಭಯ ಶುರುವಾಗಿದೆ ಎಂದು ಹೇಳಿದರು.
ಅಧಿಕಾರಕ್ಕೆ ಬಂದರೆ ಉದ್ಯೋಗ ಭರ್ತಿ, ಸಾಲ ಮನ್ನಾ
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇವೆ. ಕೇಂದ್ರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುತ್ತೇವೆ. ಆಶಾ ಕಾರ್ಯಕರ್ತರಿಗೆ ನಾವು ಸಹಾಯ ಮಾಡುತ್ತೇವೆ. ನರೇಂದ್ರ ಮೋದಿ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ. ನಾವು ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತೇವೆ ಎಂದು ರಾಹುಲ್ ಗಾಂಧಿ ಆಶ್ವಾಸನೆ ನೀಡಿದರು.
ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?
ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವಿಡಿಯೊ
LIVE : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರ ಬಹಿರಂಗ ಪ್ರಚಾರ ಸಭೆ, ಶಿವಮೊಗ್ಗ https://t.co/EDa3UINWQM
— Karnataka Congress (@INCKarnataka) May 2, 2024
ಬಿಜೆಪಿ, ಆರ್‌ಎಸ್ಎಸ್‌ನವರಿಂದ ಸಂವಿಧಾನ ಬದಲಾವಣೆಗೆ ಮುಂದು
ವಿದ್ಯಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ನಾವು ಸಂವಿಧಾನದಲ್ಲಿ ರಕ್ಷಣೆ ಮಾಡಬೇಕಿದೆ. ಬಿಜೆಪಿಯವರು, ಆರ್‌ಎಸ್ಎಸ್‌ನವರು ಸಂವಿಧಾನ ಬದಲಾಯಿಸಲು ಮುಂದಾಗಿದ್ದಾರೆ. ಸಂವಿಧಾನದಿಂದ ದಲಿತರು ಆದಿವಾಸಿಗಳಿಗೆ ರಕ್ಷಣೆ ಸಿಗುತ್ತಿದೆ. ಇದನ್ನು ತಿರುಚಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿರುವ ಸಂಪತ್ತನ್ನು 22 ಮಂದಿಯ ಪ್ಯಾಕೆಟ್‌ಗೆ ಹಾಕಿದ್ದಾರೆ. ಅದಾನಿ, ಅಂಬಾನಿ ಕೈಯಲ್ಲಿ ದೇಶದ ಸಂಪತ್ತು ಇದೆ. ಕರ್ನಾಟಕಕ್ಕೆ ಮೋಸ ಮಾಡಿರುವ ಮೋದಿ 22 ಜನರಿಗೆ ಹಣ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಸಮಾನತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಒಬಿಸಿ ದಲಿತರು, ಆದಿವಾಸಿಗಳ ಬಗ್ಗೆ ಮಾತನಾಡಿದರೆ ನಾವು ನಕ್ಸಲರು ಅಂತಿದ್ದಾರೆ. ಆದರೆ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.