Site icon Vistara News

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Reservation Row

Reservation Row

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ (Reservation Row). ಈ ಮಧ್ಯೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ಅವರು ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಹೊಂದಿದ್ದ ಮನೋಭಾವವನ್ನು ಎತ್ತಿ ತೋರಿಸುವ ಆರ್ಕೈವಲ್ ಪತ್ರಿಕೆಯ ಹಳೆಯ ತುಣುಕನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ʼʼಈ ವರದಿಯು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಯ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತದೆʼʼ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ದ ನೆಹರೂ, ʼʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉದ್ಯೋಗಗಳನ್ನು ಕಾಯ್ದಿರಿಸುವುದನ್ನು ವಿರೋಧಿಸುತ್ತೇನೆ. ಯಾಕೆಂದರೆ ಮೀಸಲಾತಿ ಅವರಲ್ಲಿ ಕೀಳರಿಮೆಯನ್ನು ಸೃಷ್ಟಿಸುತ್ತದೆʼʼ ಎಂದು ಹೇಳಿದ್ದರು ಎನ್ನುವುದನ್ನು ಆರ್ಕೈವಲ್ ಪತ್ರಿಕೆಯು ವರದಿ ಮಾಡಿತ್ತು. ಇದನ್ನು ಮಾಳವೀಯ ಉಲ್ಲೇಖಿಸಿದ್ದಾರೆ.

ಇದನ್ನು ಪೋಸ್ಟ್‌ ಮಾಡಿ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸಬಲೀಕರಣವನ್ನು ಕಾಂಗ್ರೆಸ್ ಐತಿಹಾಸಿಕವಾಗಿ ವಿರೋಧಿಸಿದೆ ಎಂದು ಮಾಳವೀಯ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಪಾದಿಸಿದ್ದಾರೆ. “ಕಾಂಗ್ರೆಸ್ ಯಾವಾಗಲೂ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿಗಳ ಸಬಲೀಕರಣದ ವಿರುದ್ಧವಾಗಿದೆ. ಆದರೆ ಮೀಸಲಾತಿಯ ಸಾಂವಿಧಾನಿಕ ನಿಬಂಧನೆಗಳನ್ನು ಯಾರೂ ಹಾಳು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೋಡಿಕೊಳ್ಳುತ್ತದೆʼʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಬಹುದೊಡ್ಡ ಹಿನ್ನಡೆ ಎದುರಾದಂತಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪ್ರಸ್ತುತ ಜಾರಿಯಲ್ಲಿರುವ ಶೇ. 50ರಷ್ಟು ಮೀಸಲಾತಿ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದರು. “ಇಂದು ಮೀಸಲಾತಿಗೆ ಶೇ. 50ರಷ್ಟು ಮಿತಿ ಇದೆ. ನಾವು ಈ ಮಿತಿಯನ್ನು ತೆಗೆದು ಹಾಕುತ್ತೇವೆ. ಬಡವರಿಗೆ ಮೀಸಲಾತಿ ಮಿತಿಯನ್ನು ಹೆಚ್ಚಿಸುತ್ತೇವೆ ” ಎಂದು ರಾಬರೇಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್‌ ಗಾಂಧಿ ಘೋಷಿಸಿದ್ದರು.

ಪ್ರಣಾಳಿಕೆಯಲ್ಲಿಯೂ ಘೋಷಣೆ

2024ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ಎಸ್‌ಟಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯ ಶೇ. 50ರಷ್ಟು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇತ್ತ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಇರುವವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊನೆಗೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ʼನಾರಿ ಶಕ್ತಿ ವಂದನ್ ಅಧಿನಿಯಮ್ʼ ಅನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕಲ್ಯಾಣ ಯೋಜನೆಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದೂ ಬಿಜೆಪಿ ಹೇಳಿದೆ.

ಇದನ್ನೂ ಓದಿ: ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

Exit mobile version