Site icon Vistara News

Lok Sabha Election 2024: ಸುಮಲತಾಗೆ ದಿಲ್ಲಿಗೆ ಬುಲಾವ್;‌ ಸ್ಪರ್ಧೆ ಮಂಡ್ಯದಿಂದಲೋ? ಚಿಕ್ಕಬಳ್ಳಾಪುರದಿಂದಲೋ?

Sumalatha Ambareesh going Delhi and Meet BJP High Command leaders

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ದಿನಾಂಕ ಫಿಕ್ಸ್‌ ಆಗಿದೆ. ಈ ನಡುವೆ ಬಿಜೆಪಿಯು (BJP Karnataka) ಈಗಾಗಲೇ ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇನ್ನು ಬಾಕಿ ಕ್ಷೇತ್ರಗಳಿಗೆ ಪಟ್ಟಿ ರಿಲೀಸ್‌ ಮಾಡಲು ಸಿದ್ಧವಾಗಿದೆ. ಈ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಬಿಜೆಪಿ ಹೈಕಮಾಂಡ್ (BJP high command) ಬುಲಾವ್ ಬಂದಿದೆ. ಹೀಗಾಗಿ ಮಂಡ್ಯದ ಆಸೆ ಬಿಡಲು ಬಿಜೆಪಿ ವರಿಷ್ಠರು ಹೇಳಲಿದ್ದಾರೆಯೇ? ಅವರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರದಲ್ಲಿ (Chikkaballapur Lok Sabha constituency) ಸ್ಪರ್ಧೆ ಮಾಡಲು ಹೇಳುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.

ಸುಮಲತಾರಿಗೆ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್‌ ಸಿಗುವುದು ಬಹುತೇಕ ಡೌಟ್‌ ಎನ್ನಲಾಗಿದೆ. ಕಾರಣ, ಈ ಕ್ಷೇತ್ರವು ಜೆಡಿಎಸ್‌ ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮಂಡ್ಯಕ್ಕೆ ಸುಮಲತಾರನ್ನು ಕಣಕ್ಕಿಳಿಸಿ, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ ಇಲ್ಲವೇ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆಯೂ ಮಾತುಕತೆಯನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಸುಮಲತಾ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಬಿಜೆಪಿ ಹೈಕಮಾಂಡ್‌ ಸೂಚಿಸಲಿದೆ ಎಂದು ಹೇಳಲಾಗುತ್ತಿದೆ.

ದೆಹಲಿಗೆ ದಿಢೀರ್‌ ಪ್ರಯಾಣ

ಈಗ ಸಂಸದೆ ಸುಮಲತಾ ಅವರು ದಿಢೀರನೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್‌ನ ಈ ನಡೆ ತೀವ್ರ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಹಾಗೂ ವಿಶ್ವನಾಥ್ ಪುತ್ರನ ನಡುವೆ ಪೈಪೋಟಿ ಏರ್ಪಟ್ಟಿದೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೂ ಅಸಮಾಧಾನ ಸ್ಫೋಟಗೊಳ್ಳುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಮೂರನೇಯವರನ್ನಾಗಿ ಸುಮಲತಾಗೆ ಟಿಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬೆಂಬಲವೂ ಕಾರಣ ಎನ್ನಲಾಗಿದೆ.

ಎಚ್‌ಡಿಕೆ ಸಂಪೂರ್ಣ ಬೆಂಬಲ

ಮಂಡ್ಯ ಕ್ಷೇತ್ರವನ್ನು ಸುಮಲತಾ ಅಂಬರೀಶ್‌ ಅವರು ಜೆಡಿಎಸ್‌ಗೆ ಬಿಟ್ಟುಕೊಡಲಿ. ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಲಿ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ಗೆ ಸಾಕಷ್ಟು ಹಿಡಿತ ಇದೆ. ಅಲ್ಲದೆ, ಇಲ್ಲಿ ಬಿಜೆಪಿ ಸಹ ಗಟ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ಹಾಗೂ ತಮ್ಮ ಕಡೆಯಿಂದ ಸಂಪೂರ್ಣ ‌ಬೆಂಬಲ ಕೊಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: PM Narendra Modi: ಮಾ. 18ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಅದ್ಧೂರಿ ಎಂಟ್ರಿಗೆ ಪ್ಲ್ಯಾನ್!

ಮಂಡ್ಯದಲ್ಲಿನ ಸುಮಲತಾ ಸ್ಪರ್ಧೆಗೆ ತೆರೆ ಬಿಳುತ್ತಾ‌‌‌?

ಸಂಸದೆ ಸುಮಾಲಾತಾ ಅವರಿಗೆ ಬಿಜೆಪಿ ಹೈಕಮಾಂಡ್‌ ಈ ಹಿಂದೆ ಬೆಂಗಳೂರು ಉತ್ತರ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಆಫರ್‌ ನೀಡಿತ್ತು. ಆದರೆ, ಇದಕ್ಕೆ ಒಪ್ಪದ ಸುಮಲತಾ ಅಂಬರೀಶ್‌, ತಾವು ಮಂಡ್ಯ ಬಿಟ್ಟು ಬೇರೆ ಕಡೆ ರಾಜಕಾರಣ ಮಾಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಆದರೆ, ಈಗ ಬಿಜೆಪಿ ಹೈಕಮಾಂಡ್‌ ಅವರನ್ನು ಯಾವ ರೀತಿಯಲ್ಲಿ ಮನವೊಲಿಸುತ್ತದೆ ಎಂಬುದು ಕುತೂಹಲವಾಗಿದೆ. ಸರಿಯಾದ ಭರವಸೆ ನೀಡಿ ಅವರನ್ನು ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒಪ್ಪಿಸುತ್ತಾರೆಯೇ ಎಂಬುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

Exit mobile version