ಬಾಗಲಕೋಟೆ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಮಾವೇಶ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಡೀಪ್ ಫೇಕ್ (Deep Fake) ಬಗ್ಗೆ ಮಾತನಾಡಿದ್ದಾರೆ. ತಮ್ಮ ಭಾಷಣದ ರೀತಿ ಮಾರ್ಫ್ ಮಾಡಿ ವಿಡಿಯೊವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಿರುವ ಗ್ಯಾಂಗ್ ಸಕ್ರಿಯವಾಗಿದೆ. ಇಂಥ ವಿಡಿಯೊ ನಿಮಗೆ ಕಂಡುಬಂದಲ್ಲಿ ಆ ವಿಡಿಯೊ ಸಹಿತ ಪೊಲೀಸರಿಗೆ ದೂರು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದರು.
ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಯಲ್ಲಿ ಸೋತು ಮೈದಾನ ಬಿಟ್ಟು ಹೋದವರಿಂದ ಫೇಕ್ ವಿಡಿಯೊ ಮಾಡಲಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಫೇಕ್ ವಿಡಿಯೋ ಬಿಡುವ ಕಾರ್ಯದಲ್ಲಿದ್ದಾರೆ ಅವರೆಲ್ಲರೂ ನಿರತರಾಗಿದ್ದಾರೆ. ಆ ರೀತಿ ಫೇಕ್ ವಿಡಿಯೊಗಳು ನಿಮ್ಮ ಗಮನಕ್ಕೆ ಬಂದರೆ ಪೊಲೀಸರಿಗೆ ಕೊಡಿ. ನಮ್ಮ ದೇಶದ ಕಾನೂನಿನಲ್ಲಿ ಫೇಕ್ ವಿಡಿಯೊ ಗ್ಯಾಂಗ್‌ಗೆ ಶಿಕ್ಷೆ ಮಾಡುತ್ತೇವೆ ಎಂದು ಹೇಳಿದರು.
ನನ್ನ ವಿರುದ್ಧವಾಗಿ ಫೇಕ್ ವಿಡಿಯೊ ಸಿದ್ಧಪಡಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುತ್ತಾರೆ. ಮಾರ್ಫ್ ಮಾಡಿ ವಿಡಿಯೊ ಬಿಡುಗಡೆ ಮಾಡುತ್ತಾರೆ ಎಂದು ಡೀಪ್ ಫೇಕ್ ವಿಡಿಯೊ ಪ್ರಕರಣಗಳು ಹರಿದಾಡುತ್ತಿರುವ ಬಗ್ಗೆ ಗರಂ ಆದ ಪ್ರಧಾನಿ ನರೇಂದ್ರ ಮೋದಿ, ಅಮಿತಾಬ್ ಬಚ್ಚನ್ ಸೇರಿ ಹಲವು ಸ್ಟಾರ್‌ಗಳ ಡೀಪ್ ಫೇಕ್ ವಿಡಿಯೊ ಮಾಡಲಾಗಿದೆ. ನನ್ನ ಧ್ವನಿ ಹೋಲುವಂತೆ ನಕಲು ಮಾಡಿ ಸಾಮಾಜಿಕ ತಾಣದಲ್ಲಿ ಬಿಡುತ್ತಾರೆ. ಈ ರೀತಿಯ ಫೇಕ್ ವಿಡಿಯೊ ಬಿಡುವ ಸಂಚುಕೋರರ ಬಗ್ಗೆ ಜಾಗ್ರತೆ ಇರಲಿ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್ ಷಡ್ಯಂತ್ರ
ಒಬಿಸಿ ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ರೂಪಿಸಿದೆ. ಹಿಂದುಳಿದ ವರ್ಗಗಳು ಹಾಗೂ ಎಸ್‌ಸಿ, ಎಸ್‌ಟಿ ಮೀಸಲಾತಿಗೂ ಕುತ್ತು ತರಲು ಕಾಂಗ್ರೆಸ್ ಹೊರಟಿದೆ. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ಹಂಚಿಕೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಧರ್ಮದ ರಾಜಕಾರಣ ಮಾಡಲು ಕಾಂಗ್ರೆಸ್‌ನಿಂದ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಎಸ್‌ಸಿ – ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡಲು ಸಂಚು ರೂಪಿಸಲಾಗಿದೆ. ಆದರೆ, ನಾನು ಕಾಂಗ್ರೆಸ್ ನಾಯಕರ ರಾಜಕಾರಣದ ಸಂಚು ಫಲಿಸಲು ನಾನು ಬಿಡುವುದಿಲ್ಲ. ಮುಸ್ಲಿಮರನ್ನು ಓಲೈಸುತ್ತಾ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ವಿರುದ್ಧ ಸಂಚು ಮಾಡುತ್ತಿದ್ದಾರೆ. ಮೀಸಲಾತಿ, ನಿಮ್ಮ ಹಕ್ಕು, ನಿಮ್ಮ ಅಧಿಕಾರವನ್ನು ಕಿತ್ತುಕೊಳ್ಳಲು ಈ ನಿಮ್ಮ ನರೇಂದ್ರ ಮೋದಿ ಬಿಡುವುದಿಲ್ಲ. ನಿಮ್ಮ ರಕ್ಷಣೆಗೋಸ್ಕರ ಮೋದಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಈ ವೇಳೆ ನಾನು ನಿಮಗೆ ಮಾತು ಕೊಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಾಗಲಕೋಟೆ ಕಾರ್ಯಕ್ರಮ
ಈ ಚುನಾವಣೆಯು ವಿಕಸಿತ ಭಾರತಕ್ಕೆ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶ ಆಗುತ್ತದೆ. ನಿಮ್ಮ ಒಂದು ವೋಟು ನಮಗೆ ಈ ಶಕ್ತಿಯನ್ನು ತಂದು ಕೊಡಲಿದೆ.
ಮೋಜು ಮಸ್ತಿ ಮಾಡುವವರಿಂದ, ರಜೆ ಹಾಕುವವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ದೇಶದ ಪ್ರಗತಿಗಾಗಿ ಗುರಿ ಬೇಕು. ಅದಕ್ಕಾಗಿ ಕಷ್ಟಪಟ್ಟು ದುಡಿಯಬೇಕು. ನಿಮ್ಮ ಮೋದಿ ಈ ಕೆಲಸವನ್ನು ಮಾಡಲಿದ್ದಾರೆ. 24/7 ಮಾದರಿಯಲ್ಲಿ ನಿಮ್ಮ ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾಂಗ್ರೆಸ್ ಈಗ ಏನು ಮಾಡುತ್ತಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವುದು ಮಾತ್ರವಲ್ಲದೆ, ದೇಶವನ್ನು ಲೂಟಿ ಹೊಡೆಯುವ ಕೆಲಸಕ್ಕೆ ಕೈಹಾಕಿದೆ. ಇಂಥ ಕಾಂಗ್ರೆಸ್ ಸರ್ಕಾರ ನಿಮಗೆ ಬೇಕಾ? ಇದಲ್ಲದೆ ಕಾಂಗ್ರೆಸ್ ಹೈಕಮಾಂಡ್‌ನವರು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ ನಾಯಕರು ಲೂಟಿ ಗ್ಯಾಂಗ್ ಅನ್ನು ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕರೇ ಮೂಲ ಕಾರಣರಾಗಿದ್ದಾರೆ. ಇಂಥವರಿಗೆ ದೇಶದ ಜವಾಬ್ದಾರಿಯನ್ನು ಕೊಡುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ಕಟ್ಟಕಡೆಯ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯವನ್ನು ಒದಗಿಸಿಲ್ಲ. ಕೋಟ್ಯಂತರ ಜನ ಮೂಲ ಸೌಕರ್ಯದಿಂದ ವಂಚಿತರಾಗಿದ್ದರು. ಆದರೆ, ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದು, ನಮ್ಮ ಸರ್ಕಾರದಿಂದ ಎಂಬುದು ಮುಖ್ಯ. ಇನ್ನು ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಜೀವನ್ ಮಿಷನ್ ಅನ್ನು ಪ್ರಾರಂಭ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶೇ. 17ರಷ್ಟು ಮಂದಿಗೆ ಮಾತ್ರ ನೀರಿನ ಸಂಪರ್ಕ ಇತ್ತು. ಇಂದು ನಮ್ಮ ಆಡಳಿತದಲ್ಲಿ ಶೇ. 75ರಷ್ಟು ನೀರಿನ ಸಂಪರ್ಕ ಇದೆ. ಇನ್ನು ಕರ್ನಾಟಕದಲ್ಲಿ ಕುಡಿಯುವ ನೀರಿಲ್ಲದೆ ಜನರು ಕಷ್ಟಪಡುತ್ತಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ಪಾಪಕ್ಕೆ ಶಿಕ್ಷೆ ಕೊಡಬೇಕೇ? ಬೇಡವೇ? ಹೀಗಾಗಿ ನೀವು ಈ ಮೇ 7ರಂದು ಮತ ಚಲಾವಣೆ ಮಾಡಿ ಬಿಜೆಪಿ ಜಯಕ್ಕೆ ಕಾರಣರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಾದಾಮಿ, ಐಹೊಳೆ, ಪಟ್ಟದಕಲ್ಲು ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ವಿಜಯಪುರದಲ್ಲೂ ಏರ್ಪೋರ್ಟ್ ನಿರ್ಮಾಣ ಮಾಡಲು ನಮ್ಮ ಸರ್ಕಾರ ಸಿದ್ಧವಾಗಿದೆ. ಇಳಕಲ್ ಸೀರೆಗಾಗಿ ಒಂದು ಗ್ರಾಮ ಒಂದು ಉತ್ಪನ್ನ ಎಂದು ಮಾಡಿದೆವು. ತಳವಾರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು ನಮ್ಮ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳಿಗೆ ಏನಾಯಿತು? ನೇಹಾ ಮೇಲೆ ಒಂದಾದ ಮೇಲೆ ಒಂದರಂತೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಆದರೆ, ಕಾಂಗ್ರೆಸ್ ಏನು ಕ್ರಮ ಕೈಗೊಂಡಿದೆ. ತುಷ್ಟೀಕರಣಕ್ಕಾಗಿ ಇದು ಯಾವ ಹಂತಕ್ಕೆ ಬೇಕಾದರೂ ಹೋಗಲಿದೆ. ಇನ್ನು ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾವನ್ನು ಪಠಣ ಮಾಡಿದರೆ ಗಲಾಟೆ ಮಾಡುತ್ತಾರೆ, ಹಲ್ಲೆ ನಡೆಸುತ್ತಾರೆ. ಇದರ ಬಗ್ಗೆ ಏನು ಕ್ರಮ ಕೈಗೊಂಡರು? ಅಲ್ಲದೆ, ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ಕಾಂಗ್ರೆಸ್ ಸರ್ಕಾರ ಹೇಳಿದ್ದು ಏನು? ಸಿಲಿಂಡರ್ ಬ್ಲಾಸ್ಟ್ ಎಂದು ಹೇಳಿಬಿಟ್ಟರು. ಕೊನೆಗೆ ಬ್ಯುಸಿನೆಸ್ ಶತ್ರುಗಳು ಮಾಡಿದ್ದು ಎಂದು ಹೇಳಿದರು. ಇದು ಕಾಂಗ್ರೆಸ್‌ನ ಆಡಳಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಕಂಬನಿ
ಇಂದು ಬೆಳಗ್ಗೆ ಬಿಜೆಪಿ ನಾಯಕ ಹಾಗೂ ಸಾಮಾಜಿಕ ನ್ಯಾಯದ ಸಿಪಾಯಿ ವಿ. ಶ್ರೀನಿವಾಸ್ ಪ್ರಸಾದ್ ನಿಧನ ಸುದ್ದಿ ಕೇಳಿ ನನಗೆ ನೋವಾಯಿತು. ಚಾಮರಾಜನಗರದ ಸಂಸದರಾಗಿದ್ದ ಶ್ರೀನಿವಾಸ್ ಪ್ರಸಾದ್ ಜನರ ನಾಯಕನಾಗಿ ರಾಜಕೀಯದಲ್ಲಿ ಬೆಳೆದು ಹಲವು ದಶಕಗಳಿಂದ ಸಾಮಾಜಿಕ ಜೀವನದಲ್ಲಿದ್ದರು. ಬಡವರು, ಶೋಷಿತರು ಹಾಗೂ ವಂಚಿತರ ಸೇವೆಯಲ್ಲಿ ತೊಡಗಿಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯೂ ಆಗಿ ಜನಸೇವೆ ಮಾಡಿದ್ದನ್ನು ಯಾವಾಗಲೂ ಮರೆಯಲ್ಲ. ಶ್ರೀನಿವಾಸ್ ಪ್ರಸಾದ್ ಆತ್ಮಕ್ಕೆ ಸದ್ಗತಿ ಸಿಗಬೇಕು, ಪ್ರಸಾದ್ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದರು.
ಇದನ್ನೂ ಓದಿ: Viral Video: ನಮಗೆ ಹಿಂದೂ ಮತಗಳ ಅಗತ್ಯವಿಲ್ಲ: ಕಾಂಗ್ರೆಸ್ ನಾಯಕನ ವಿಡಿಯೋ ವೈರಲ್
ಬಾಲಕಿಯ ಫೋಟೊ ತೆಗೆಯಲು ಹೇಳಿದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಫೋಟೊವನ್ನು ಬಾಲಕಿಯೊಬ್ಬಳು ಪ್ರದರ್ಶನ ಮಾಡುತ್ತಿದ್ದಳು. ಇದನ್ನು ಭಾಷಣದ ಮಧ್ಯೆಯೇ ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಸ್‌ಪಿಜಿ ಕಮಾಂಡೋಗಳಿಗೆ ಸೂಚಿಸಿ, ಆ ದೃಶ್ಯದ ಒಂದು ಫೋಟೊವನ್ನು ತೆಗೆದಿಟ್ಟುಕೊಳ್ಳಲು ಹೇಳಿದರು.