ಖ್ಯಾತ ಉದ್ಯಮಿ ಗೌತಮ್ ಅದಾನಿಯವರ ಪ್ರಮುಖ ಕಂಪನಿಗಳ ಷೇರು ದರಗಳು ಈ ವರ್ಷ ೩೦೦%ಕ್ಕೂ ಹೆಚ್ಚು ಜಿಗಿಯುವುದರೊಂದಿಗೆ ಹೂಡಿಕೆದಾರರಿಗೆ ಭಾರಿ ಆದಾಯವನ್ನು ತಂದುಕೊಟ್ಟಿವೆ. ಅದರಲ್ಲೂ ೬ ಕಂಪನಿಗಳ ಷೇರುಗಳು ಮಲ್ಟಿಬ್ಯಾಗರ್ ಷೇರುಗಳಾಗಿ (Multibagger) ಸಂಚಲನ ಸೃಷ್ಟಿಸಿವೆ. ಹೂಡಿಕೆದಾರರು ಈ ಆರು ಕಂಪನಿಗಳ ಷೇರು ದರ ಜಿಗಿತದ ಪರಿಣಾಮ ಗಳಿಸಿರುವ ಆದಾಯವನ್ನು ಕಂಡು ಇತರರು ಬೆಕ್ಕಸ ಬೆರಗಾಗಿದ್ದಾರೆ. ಹಾಗಾದರೆ ಅದಾನಿ ಸಮೂಹದ ಕಂಪನಿಗಳ ಷೇರು ದರ ಈ ಪರಿಯಲ್ಲಿ ಏರಿಕೆಯಾಗಿದ್ದೇಕೆ? ಇತರ ಮಲ್ಟಿಬ್ಯಾಗರ್ ಷೇರುಗಳು ಯಾವುದು? ಏನಿದು? ಇಲ್ಲಿದೆ ವಿವರ.
ಏನಿದು ಮಲ್ಟಿ ಬ್ಯಾಗರ್ ಷೇರು?
ಹೂಡಿಕೆದಾರರಿಗೆ ಹಲವಾರು ಪಟ್ಟು ಆದಾಯವನ್ನು ಕೊಡುವ ಷೇರುಗಳನ್ನು ಮಲ್ಟಿಬ್ಯಾಗರ್ ಷೇರು ಎನ್ನುತ್ತಾರೆ. ಇಂಥ ಷೇರುಗಳ ದರ ಆರಂಭದಲ್ಲಿ ಕಡಿಮೆ ಇದ್ದರೂ, ಮೂಲಭೂತವಾಗಿ ಪ್ರಬಲ ಷೇರುಗಳಾಗಿ ಬೆಳೆಯುವ ಸಾಧ್ಯತೆಗಳನ್ನು ಒಳಗೊಂಡಿರುತ್ತವೆ. ಹಾಗೂ ಕ್ಷಿಪ್ರ ಅವಧಿಯಲ್ಲಿ ಹೂಡಿಕೆದಾರರಿಗೆ ಭಾರಿ ಆದಾಯ ಕೊಡುತ್ತವೆ. ಒಂದು ಷೇರು ತನ್ನ ದರವನ್ನು ಇಮ್ಮಡಿಗೊಳಿಸಿದರೆ ” ಟೂ-ಬ್ಯಾಗರ್ʼ (Two-bagger) ಎನ್ನುತ್ತಾರೆ. ಒಂದು ವೇಳೆ ಷೇರು ದರ ೧೦ ಪಟ್ಟು ಹೆಚ್ಚಿದರೆ ಟೆನ್-ಬ್ಯಾಗರ್ (೧೦-bagger) ಎನ್ನುತ್ತಾರೆ. ಹೀಗೆ ಮಲ್ಟಿ ಬ್ಯಾಗರ್ ಷೇರುಗಳು ಹೂಡಿಕೆಯ ಮೌಲ್ಯವನ್ನು ಹಲವಾರು ಪಟ್ಟು ವೃದ್ಧಿಸುತ್ತವೆ.
ಮಲ್ಟಿ ಬ್ಯಾಗರ್ ಷೇರುಗಳನ್ನು ಗುರುತಿಸುವುದು ಹೇಗೆ? ಮಲ್ಟಿ ಬ್ಯಾಗರ್ ಷೇರುಗಳ ಕಂಪನಿಗಳ ಕಾರ್ಪೊರೇಟ್ ಆಡಳಿತ ಪ್ರಬಲವಾಗಿರುತ್ತದೆ. ಬಿಸಿನೆಸ್ ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಸಾಲದ ಮೊತ್ತ ತಾರ್ಕಿಕ ಮಟ್ಟದಲ್ಲಿ ಇರುತ್ತದೆ. ಈಕ್ವಿಟಿ ಮೌಲ್ಯದ ೩೦%ಗಿಂತ ಹೆಚ್ಚು ಸಾಲವನ್ನು ಹೊಂದಿರುವುದಿಲ್ಲ. ಕಂಪನಿಗಳ ತ್ರೈಮಾಸಿಕ ಫಲಿತಾಂಶವನ್ನು ಗಮನಿಸಿ. ಪ್ರತಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕಂಪನಿಯ ಆದಾಯ ಚೆನ್ನಾಗಿದ್ದರೆ, ಅಂಥ ಷೇರುಗಳು ಭವಿಷ್ಯದಲ್ಲಿ ಮಲ್ಟಿ ಬ್ಯಾಗರ್ ಷೇರುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಂಪನಿಯು ಯಾವ ಮೂಲದಿಂದ ಆದಾಯ ಮಾಡುತ್ತಿದೆ? ಬಿಸಿನೆಸ್‌ನ ಮಾದರಿ ಏನು ಎಂಬುದನ್ನು ಗಮನಿಸಿ.
ಅದಾನಿ ಸಮೂಹದ ೬ ಕಂಪನಿಗಳ ಷೇರು ಮಹಾ ಜಿಗಿತ
ಅದಾನಿ ಸಮೂಹದ ಅದಾನಿ ಪವರ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಶನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್ ಕಂಪನಿಗಳ ಷೇರು ದರಗಳು ಕಳೆದ ಎರಡು ವರ್ಷದಲ್ಲಿ ಭಾರಿ ಜಿಗಿದಿದ್ದು, ಮಲ್ಟಿ ಬ್ಯಾಗರ್ ಷೇರುಗಳೆನಿಸಿವೆ. ಎರಡು ವರ್ಷಗಳ ಹಿಂದೆ ಈ ೬ ಕಂಪನಿಗಳ ಷೇರುಗಳಲ್ಲಿ ಹೂಡಿದ್ದ ತಲಾ ೧ ಲಕ್ಷ ರೂ.ಗಳ ಮೌಲ್ಯ ಈಗ ೬೬ ಲಕ್ಷ ರೂ.ಗಳಾಗಿವೆ ಎಂದು ವರದಿಯಾಗಿದೆ. ಇದು ಹೇಗೆ? ವಿವರ ಇಲ್ಲಿದೆ.
ಅದಾನಿ ಪವರ್ | ಅದಾನಿ ಪವರ್ ಷೇರು ದರ ಎನ್‌ಎಸ್‌ಇನಲ್ಲಿ 2020 ರ ಆಗಸ್ಟ್ 21ರಂದು 39.15 ರೂ. ಇತ್ತು. ಈಗ 410.65 ರೂ.ಗೆ ಏರಿದೆ. ಅಂದರೆ ಕಳೆದ ಎರಡು ವರ್ಷಗಳಲ್ಲಿ 10.50 ಪಟ್ಟು ಏರಿಕೆಯಾಗಿದೆ. ಅಂದರೆ ಎರಡು ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದವರಿಗೆ ಈಗ 10.50 ಲಕ್ಷ ರೂ. ಸಿಕ್ಕಿದೆ. |
ಅದಾನಿ ಎಂಟರ್‌ಪ್ರೈಸಸ್ | 2020ರ ಆಗಸ್ಟ್ 21ರಂದು ಎನ್‌ಎಸ್‌ಇನಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ದರ 233ರೂ. ಇತ್ತು. ಈಗ 3,127 ರೂ.ಗಳಾಗಿದೆ. ಅಂದರೆ 13.40 ಪಟ್ಟು ಹೆಚ್ಚಳವಾಗಿದೆ. ಅಂದರೆ ಆಗ 1ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ, ಈಗ 13.40 ಲಕ್ಷ ರೂ. ಆಗಿರುತ್ತಿತ್ತು. |
ಅದಾನಿ ಗ್ರೀನ್ ಎನರ್ಜಿ | ಅದಾನಿ ಗ್ರೀನ್ ಎನರ್ಜಿ ಷೇರು ದರ 2020ರ ಆಗಸ್ಟ್ 21ರಂದು 376 ರೂ. ಇತ್ತು. ಈಗ 2,422 ರೂ.ಗೆ ಏರಿದೆ. ಅಂದರೆ 6.45 ಪಟ್ಟು ಹೆಚ್ಚಳವಾಗಿದೆ. ಆದ್ದರಿಂದ ಎರಡು ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿದವರಿಗೆ ಈಗ 6.45 ಲಕ್ಷ ರೂ. ಸಿಕ್ಕಿದಂತಾಗಿದೆ. |
ಅದಾನಿ ಟ್ರಾನ್ಸ್‌ಮಿಶನ್ | 2020ರ ಆಗಸ್ಟ್ 21ರಂದು ಅದಾನಿ ಟ್ರಾನ್ಸ್‌ಮಿಶನ್ ಷೇರು ದರ 272 ರೂ. ಇತ್ತು. ಈಗ 3,612ರೂ.ಗಳಾಗಿದೆ. ಆದ್ದರಿಂದ 13.25 ಪಟ್ಟು ಏರಿಕೆಯಾಗಿದೆ. ಎರಡು ವರ್ಷಗಳ ಹಿಂದೆ ಹೂಡಿದ್ದ 1 ಲಕ್ಷ ರೂ. ಈಗ 13.25 ಲಕ್ಷ ರೂ.ಗಳಿಗೆ ವೃದ್ಧಿಸಿದೆ. |
ಅದಾನಿ ಟೋಟಲ್ ಗ್ಯಾಸ್ | ಅದಾನಿ ಟೋಟಲ್ ಗ್ಯಾಸ್‌ನ ಷೇರು ದರ ಬಿಎಸ್‌ಇನಲ್ಲಿ 2020ರ ಆಗಸ್ಟ್ 21ರಂದು 165.55 ರೂ. ಇತ್ತು. ಈಗ 3,380 ರೂ.ಗೆ ಹೆಚ್ಚಳವಾಗಿದೆ. ಅಂದರೆ 20.40 ಪಟ್ಟು ವೃದ್ಧಿಸಿದೆ. ಆದ್ದರಿಂದ 1 ಲಕ್ಷ ರೂ. ಹೂಡಿದವರಿಗೆ ಈಗ 20.40 ಲಕ್ಷ ರೂ. ಲಭಿಸಿದಂತಾಗಿದೆ. |
ಅದಾನಿ ಪೋರ್ಟ್ಸ್ | ಅದಾನಿ ಪೋರ್ಟ್ಸ್ ಷೇರು ದರ ಎರಡು ವರ್ಷಗಳ ಹಿಂದೆ 354 ರೂ. ಇತ್ತು. ಈಗ 870 ರೂ.ಗೆ ಏರಿಕೆಯಾಗಿದೆ. 2.50 ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಅಂದು 1 ಲಕ್ಷ ರೂ. ಹೂಡಿದವರಿಗೆ ಈಗ 2.50 ಲಕ್ಷ ರೂ. ಸಿಕ್ಕಿದೆ. |
ಹೀಗಾಗಿ ಒಬ್ಬ ಹೂಡಿಕೆದಾರ ಎರಡು ವರ್ಷಗಳ ಹಿಂದೆ ಅದಾನಿ ಗ್ರೂಪ್‌ನ ಈ ಆರು ಕಂಪನಿಗಳ ಷೇರುಗಳಲ್ಲಿ ತಲಾ ೧ ಲಕ್ಷ ರೂ. ಹೂಡಿದ್ದರೆ, ಈಗ ಅದರ ಮೌಲ್ಯ ೬೬.೫೦ ಲಕ್ಷ ರೂ. ಆಗುತ್ತಿತ್ತು. (೧೦.೫೦ ಲಕ್ಷ + ೧೩.೪೦ ಲಕ್ಷ ರೂ.+ ೬.೪೫ ಲಕ್ಷ ರೂ. + ೧೩.೨೫ ಲಕ್ಷ ರೂ. + ೨೦.೪೦ ಲಕ್ಷ ರೂ. +೨.೫೦ ಲಕ್ಷ ರೂ.)
ಲಕ್ಷಾಂತರ ಕೋಟಿ ರೂ. ಮಾರುಕಟ್ಟೆ ಮೌಲ್ಯ: ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಶನ್, ಅದಾನಿ ಪವರ್, ಅದಾನಿ ಪೋರ್ಟ್ಸ್ ಕಂಪನಿಗಳ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ೧ ಲಕ್ಷ ಕೋಟಿ ರೂ.ಗಳಿಂದ ೪ ಲಕ್ಷ ಕೋಟಿ ರೂ.ಗಳ ಲೆಕ್ಕದಲ್ಲಿ ಇವೆ. ಮೂರು ವರ್ಷಗಳ ಹಿಂದೆ ೭,೦೦೦ ಕೋಟಿ ರೂ.ಗಳಿಂದ ೭೪,೦೦೦ ಕೋಟಿ ರೂ. ಇತ್ತು.
ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮತ್ತಷ್ಟು: ಕೇವಲ ಅದಾನಿ ಗ್ರೂಪ್‌ನ ಷೇರುಗಳು ಮಾತ್ರವಲ್ಲದೆ, ಇನ್ನೂ ಹಲವು ಕಂಪನಿಗಳ ಷೇರುಗಳು ಕಳೆದ ಐದಾರು ವರ್ಷಗಳಲ್ಲಿ ಮಲ್ಟಿಬ್ಯಾಗರ್ ಷೇರುಗಳೆನಿಸಿವೆ. ಉದಾಹರಣೆಗೆ ಟಾಟಾ ಕನ್‌ಸ್ಯೂಮರ್ ಷೇರು ದರ ಕಳೆದ ಐದು ವರ್ಷಗಳಲ್ಲಿ ೩೦೦ ಪರ್ಸೆಂಟ್ ಏರಿಕೆಯಾಗಿದೆ.
ಕೆಲವು ಕಂಪನಿಗಳು ಹೊಸ ಹೂಡಿಕೆಯನ್ನು ಗಳಿಸಿದಾಗಲೂ ಷೇರುಗಳ ದರ ಜಿಗಿಯುತ್ತವೆ. ಮತ್ತೆ ಕೆಲವು ಕಂಪನಿಗಳ ಷೇರು ದರ ಭಾರಿ ಜಿಗಿದು, ಬಳಿಕ ಭಾರಿ ಕುಸಿತಕ್ಕೀಡಾಗುವುದೂ ಇದೆ. ಹೀಗಾಗಿ ಭವಿಷ್ಯದ ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸುವುದು ಮುಖ್ಯ.
ಅದಾನಿ ಗ್ರೂಪ್ ಕಂಪನಿಗಳ ಷೇರು ದರ ಜಿಗಿದಿದ್ದೇಕೆ?
ಈ ಸಲ ಬೇಸಿಗೆಯಲ್ಲಿ ವಿದ್ಯುತ್‌ಗೆ ಬೇಡಿಕೆ ಮತ್ತು ಖರ್ಚು ಗಣನೀಯ ಹೆಚ್ಚಳವಾಗಿತ್ತು. ಇದರ ಪರಿಣಾಮ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಟ್ರಾನ್ಸ್‌ಮಿಶನ್ ಷೇರು ದರ ಜಿಗಿಯಿತು. ಅದಾನಿ ಟೋಟಲ್ ಗ್ಯಾಸ್, ನಗರಗಳಿಗೆ ಅನಿಲ ವಿತರಣೆ ನೆಟ್ ವರ್ಕ್ ಒದಗಿಸುತ್ತಿದೆ. ಅದರ ಷೇರು ದರ ಕಳೆದ ಎರಡು ವರ್ಷ ಭಾರಿ ಹೆಚ್ಚಳವಾಗಿದೆ. ಅದಾನಿ ಗ್ರೀನ್ ಎನರ್ಜಿ ಭಾರತದ ೧೦ ಅತ್ಯಂಧಿಕ ಮೌಲ್ಯದ ಕಂಪನಿಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿದೆ. ಅದಾನಿ ಟ್ರಾನ್ಸ್‌ಮಿಶನ್ ಖಾಸಗಿ ವಲಯದ ಅತಿ ದೊಡ್ಡ ವಿದ್ಯುತ್ ಸಾಗಣೆ ಕಂಪನಿಯಾಗಿದೆ. ಅದಾನಿ ಪವರ್ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. ಅದಾನಿ ಗ್ರೂಪ್ ಭಾರತದ ಅತಿ ದೊಡ್ಡ ಬಂದರು ನಿರ್ವಾಹಕವಾಗಿದೆ. ೧೩ ಬಂದರುಗಳನ್ನು ನಡೆಸುತ್ತಿದೆ. ಬೃಹತ್ ಕಂಪನಿಗಳನ್ನು ಅದಾನಿ ಸಮೂಹ ಖರೀದಿಸುತ್ತಿದೆ. ಇತ್ತೀಚೆಗೆ ೭,೦೦೦ ಕೋಟಿ ರೂ. ನಗದು ಕೊಟ್ಟು ಡಿಬಿ ಪವರ್ ಕಂಪನಿಯನ್ನು ಅದಾನಿ ಪವರ್ ಖರೀದಿಸಿದೆ. ಹೀಗೆ ಉದ್ಯಮ ವಲಯದಲ್ಲಿ ಸಮೂಹ ದಾಪುಗಾಲಿಡುತ್ತಿದೆ. ಇದೆಲ್ಲವೂ ಷೇರು ದರವನ್ನು ಹೆಚ್ಚಿಸುತ್ತಿದೆ.
ಗೌತಮ್ ಅದಾನಿ ವಿಶ್ವದ ೫ನೇ ಶ್ರೀಮಂತ
ಕೋವಿಡ್-೧೯ ಬಿಕ್ಕಟ್ಟಿನ ಕಳೆದ ಎರಡು ವರ್ಷಗಳಲ್ಲಿ ಅದಾನಿ ಗ್ರೂಪ್‌ನ ಷೇರುಗಳ ದರ ಗಣನೀಯ ಏರಿಕೆ ದಾಖಲಿಸಿತು. ಇದರ ಪರಿಣಾಮ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಜಗತ್ತಿನ ೫ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. (ಬ್ಲೂಮ್‌ಬರ್ಗ್ ವರದಿ) ಫೋರ್ಬ್ಸ್ ಪ್ರಕಾರ ಗೌತಮ್ ಅದಾನಿ ಅವರ ಸಂಪತ್ತು ೧0.98 ಲಕ್ಷ ಕೋಟಿ ರೂ.ಗಳಾಗಿದೆ.
ಇದನ್ನೂ ಓದಿ: ಏರ್‌ಪೋರ್ಟ್‌ಗಳ ಸಮೀಪ ಏರೊ ಸಿಟಿಗಳ ಅಭಿವೃದ್ಧಿಗೆ ಅದಾನಿ ಗ್ರೂಪ್ ಪ್ಲಾನ್