ಪ್ರತಿಯೊಬ್ಬರೂ ಯಾವುದಾದರೂ ಮೂಲದಲ್ಲಿ ಹಣವನ್ನು ಉಳಿತಾಯ ಮಾಡಲು ಯತ್ನಿಸುತ್ತಾರೆ. ಆದರೆ ನಿಮಗೆ ಆಶ್ಚರ್ಯವಾಗಬಹುದು. ದೇಶದ ಬ್ಯಾಂಕ್‌ಗಳಲ್ಲಿ ೨೦೨೧-೨೨ರಲ್ಲಿ ಹೇಳುವವರು-ಕೇಳುವವರಿಲ್ಲದ ಅಥವಾ ವಾರಸುದಾರರಿಲ್ಲದ ಹಣದ ಮೊತ್ತ ೪೮,೦೦೦ ಕೋಟಿ ರೂ.ಗೆ ಏರಿಕೆಯಾಗಿದೆ. (೪೮,೨೬೨ ಕೋಟಿ ರೂ.) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿಯೇ ಈ ವಿಷಯವನ್ನು ತಿಳಿಸಿದೆ. ಹಾಗಾದರೆ ಬ್ಯಾಂಕ್ ಖಾತೆಗಳಲ್ಲಿ ಈ ರೀತಿ ಅನ್ ಕ್ಲೇಮ್ಡ್ ಮೊತ್ತ ಹೇಗೆ ಉಂಟಾಗುತ್ತದೆ? ನಿಜವಾದ ವಾರಸುದಾರರು ಹೇಗೆ ಇದನ್ನು ಪಡೆಯಬಹುದು? (ವಿಸ್ತಾರ Money Guide) ಇಲ್ಲಿದೆ ವಿವರ.
ಎಂಟು ರಾಜ್ಯಗಳ ಬಜೆಟ್ ಗಾತ್ರಕ್ಕಿಂತ ದೊಡ್ಡ ಮೊತ್ತ! ಆರ್‌ಬಿಐ ಪ್ರಕಾರ ಬ್ಯಾಂಕ್ ಖಾತೆಗಳಲ್ಲಿ ಇರುವ ವಾರಸುದಾರರಿಲ್ಲದ ಹಣದ ಮೊತ್ತ ೪೮,೨೬೨ ಕೋಟಿ ರೂ.ಗಳಾಗಿದೆ. ಅಂದರೆ ತ್ರಿಪುರಾ, ಅಸ್ಸಾಂ, ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲಪ್ರದೇಶ, ಗೋವಾ ರಾಜ್ಯಗಳ ಬಜೆಟ್ ಗಾತ್ರಕ್ಕಿಂತಲೂ ಹೆಚ್ಚು. ವರ್ಷದಿಂದ ವರ್ಷ ಹೆಚ್ಚುತ್ತಿದೆ!
ಆರ್‌ಬಿಐ ಪ್ರಕಾರ ಬ್ಯಾಂಕ್‌ಗಳಲ್ಲಿರುವ ವಾರಸುದಾರರಿಲ್ಲದ ಹಣ (Unclaimed money)
2020-21 | 39,264 ಕೋಟಿ ರೂ. |
2019-20 | 24,356 ಕೋಟಿ ರೂ. |
2018-19 | 18,380 ಕೋಟಿ ರೂ. |
2017-18 | 14,307 ಕೋಟಿ ರೂ. |
2016-17 | 11,320 ಕೋಟಿ ರೂ. |
ಆರ್‌ಬಿಐ ಅಂಕಿ ಅಂಶಗಳ ಪ್ರಕಾರ ೨೦೧೬-೧೭ರಿಂದ ೨೦೨೧-೨೨ರ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣ ನಾಲ್ಕು ಪಟ್ಟಿಗೂ ಹೆಚ್ಚು ಏರಿಕೆಯಾಗಿದೆ. ಸಾವಜನಿಕ ವಲಯದ ಬ್ಯಾಂಕ್‌ಗಳಲ್ಲಿಯೇ ಇಂಥ ಹಣ ಹೆಚ್ಚು ಜಮೆಯಾಗಿದೆ. ಉದಾಹರಣೆಗೆ ೨೦೦೫ರಲ್ಲಿ ೮೩೫ ಕೋಟಿ ರೂ.ನಷ್ಟಿದ್ದ ಅನ್‌ಕ್ಲೇಮ್ಡ್ ಹಣ ೨೦೧೯-೨೦ರ ವೇಳೆಗೆ ೧೪,೯೭೦ ಕೋಟಿ ರೂ.ಗೆ ಹೆಚ್ಚಳವಾಗಿದೆ. ಅದರಲ್ಲೂ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾದಲ್ಲಿ ಇದು ಹೆಚ್ಚು. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ೨೦೦೫ರಲ್ಲಿ ೫೨.೭೩ ಕೋಟಿ ರೂ. ಇದ್ದ ಅನ್‌ಕ್ಲೇಮ್ಡ್ ಹಣದ ಮೊತ್ತ ೨೦೧೯-೨೦ರ ವೇಳೆಗೆ ೨,೪೭೦ ಕೋಟಿ ರೂ.ಗೆ ಏರಿಕೆಯಾಗಿದೆ.
ಯಾವುದು ಅನ್ ಕ್ಲೇಮ್ಡ್ ಹಣ? ಆರ್‌ಬಿಐ ಪ್ರಕಾರ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ೧೦ ವರ್ಷದ ತನಕ ಯಾವುದೇ ಹಣಕಾಸು ವರ್ಗಾವಣೆ ನಡೆಯದಿದ್ದರೆ ಅದನ್ನು ಅನ್ ಕ್ಲೇಮ್ಡ್ ಖಾತೆ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ನಿಷ್ಕ್ರಿಯ ಖಾತೆಗಳು ಎನ್ನಲಾಗುತ್ತದೆ. ಈ ರೀತಿ ೧೦ ವರ್ಷ ಕಳೆದರೂ ನಿಷ್ಕ್ರಿಯ ಖಾತೆಗಳಲ್ಲಿ ಉಳಿಯುವ ಹಣವನ್ನು ಬ್ಯಾಂಕ್‌ಗಳು ಆರ್‌ಬಿಐನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (Depositor education and awareness fund) ವರ್ಗಾವಣೆಯಾಗುತ್ತದೆ.
ನಿಷ್ಕ್ರಿಯ ಖಾತೆಗಳಿಂದ ಹಣವನ್ನು ಹಿಂಪಡೆಯುವುದು ಹೇಗೆ?: ಯಾವುದಾದರೂ ಬ್ಯಾಂಕ್‌ನಲ್ಲಿ ನಿಮಗೆ ಸಂಬಂಧಿಸಿದ ನಿಷ್ಕ್ರಿಯ ಖಾತೆಯಲ್ಲಿ ಹಣ ಇದ್ದರೆ ಅದನ್ನು ಸೂಕ್ತ ದಾಖಲಾತಿಗಳನ್ನು ಮುಂದಿಟ್ಟು ಹಣವನ್ನು ಹಿಂಪಡೆಯಬಹುದು. ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸಬಹುದು ಅಥವಾ ಮುಚ್ಚಬಹುದು. ಇದಕ್ಕಾಗಿ ನೀವು ಕೆಲ ದಾಖಲೆಗಳೊಂದಿಗೆ ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಹೋಗಬೇಕು. ಅರ್ಜಿಸಲ್ಲಿಸಬೇಕು. ಗುರುತಿನ ದಾಖಲಾತಿ ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕು.
ಪತ್ತೆ ಹಚ್ಚುವುದು ಹೇಗೆ? ಆರ್‌ಬಿಐ ನಿಯಮಾವಳಿಗಳ ಪ್ರಕಾರ, ಬ್ಯಾಂಕ್‌ಗಳು ಅನ್‌ಕ್ಲೇಮ್ಡ್ ಹಣದ ಬಗ್ಗೆ ತಮ್ಮ ವೆಬ್‌ಸೈಟ್‌ಗಳಲ್ಲಿ ವಿವರ ನೀಡಬೇಕು. ಅವುಗಳನ್ನು ಪರಿಶೀಲಿಸಿದ ಬಳಿಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಒಂದು ವೇಳೆ ಖಾತೆದಾರ ಮೃತಪಟ್ಟಿದ್ದರೆ, ಅವರ ಅಧಿಕೃತ ವಾರಸುದಾರರು ಬ್ಯಾಂಕಿಗೆ ತೆರಳಿ ಖಾತೆದಾರರ ಡೆತ್ ಸರ್ಟಿಫಿಕೇಟ್, ಠೇವಣಿಯ ರಿಸಿಪ್ಟ್, ಗುರುತಿನ ಚೀಟಿ ಸಲ್ಲಿಸಿ ಹಣ ಹಿಂಪಡೆಯಬಹುದು.