ಕಳೆದ ೨೦೨೧-೨೨ರ ಆರ್ಥಿಕ ವರ್ಷದ (ಮೌಲ್ಯ ಮಾಪನಾ ವರ್ಷ ೨೦೨೨-೨೩) ಆದಾಯ ತೆರಿಗೆ ವಿವರ ಸಲ್ಲಿಕೆಗೆ (ITR) ೨೦೨೨ರ ಜುಲೈ ೩೧ ಕೊನೆಯ ದಿನವಾಗಿದೆ. ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಡಿಟಿ ಗಡುವು ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದಿವೆ. ಒಂದು ವೇಳೆ ಜುಲೈ ೩೧ರೊಳಗೆ ಐಟಿ ರಿಟರ್ನ್ ಸಲ್ಲಿಸದಿದ್ದರೆ ಏನಾಗುತ್ತದೆ? ಬಳಿಕ ಏನು ಮಾಡಬಹುದು? ನೋಡೋಣ.
ಆದಾಯ ತೆರಿಗೆ ಇಲಾಖೆಯು ಜುಲೈ ೩೧ರೊಳಗೆ ಐಟಿ ರಿಟರ್ನ್ ಸಲ್ಲಿಸುವಂತೆ ಆಗಾಗ್ಗೆ ನೆನಪಿಸುತ್ತಿದೆ. ಬಳಿಕ ವಿಸ್ತರಣೆ ಆಗದು ಎಂದೂ ತಿಳಿಸಿದೆ. ಎಸ್ಸೆಮ್ಮೆಸ್ ಮತ್ತು ಇ-ಮೇಲ್ ಮೂಲಕವೂ ಗಡುವಿನ ಒಳಗಾಗಿ ರಿಟರ್ನ್ ಸಲ್ಲಿಸುವಂತೆ ತಿಳಿಸಿದೆ. ೨೦೨೨ರ ಜುಲೈ ೨೬ರ ತನಕ ೩.೪ ಕೋಟಿ ಐಟಿಆರ್ ಸಲ್ಲಿಕೆಯಾಗಿದೆ. ಜುಲೈ ೨೬ರಂದು ೩೦ ಲಕ್ಷ ಐಟಿಆರ್ ಸಲ್ಲಿಕೆಯಾಗಿದೆ.
ವಿಳಂಬ ಶುಲ್ಕ: ತೆರಿಗೆದಾರರು ೨೦೨೨ರ ಜುಲೈ ೩೧ರೊಳಗೆ ತಮ್ಮ ಐಟಿ ರಿಟರ್ನ್ ಸಲ್ಲಿಸದಿದ್ದರೆ ಡಿಸೆಂಬರ್ ೩೧ರ ತನಕ ಸಲ್ಲಿಸಲು ಅವಕಾಶ ಇದೆ. ಆದರೆ ವಿಳಂಬಿತ ರಿಟರ್ನ್ ಸಲ್ಲಿಸಬೇಕಾಗುತ್ತದೆ. ಅಂದರೆ ಅದಕ್ಕಾಗಿ ವಿಳಂಬ ಶುಲ್ಕ ನೀಡಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೨೩೪ಎಫ್ ಪ್ರಕಾರ ದಂಡ ಅನ್ವಯವಾಗುತ್ತದೆ. ಇದು ಆದಾಯದ ಪ್ರಮಾಣವನ್ನು ಆಧರಿಸಿರುತ್ತದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೨೩೪ಎಫ್ ಪ್ರಕಾರ, ಜುಲೈ ೩೧ರ ಬಳಿಕ ಐಟಿಆರ್ ಸಲ್ಲಿಕೆಗೆ ೫,೦೦೦ ರೂ. ದಂಡ ಅನ್ವಯವಾಗುತ್ತದೆ. ಒಟ್ಟು ಆದಾಯ ೫ ಲಕ್ಷ ರೂ.ಗಿಂತ ಕಡಿಮೆ ಇರುವ ತೆರಿಗೆದಾರರಿಗೆ ದಂಡದ ಮೊತ್ತ ೧,೦೦೦ ರೂ.ಗಳಾಗಿದೆ. ಆದಾಯ ೫ ಲಕ್ಷ ರೂ. ಅಥವಾ ಹೆಚ್ಚು ಇದ್ದರೆ ೫,೦೦೦ ರೂ. ದಂಡ ಕಟ್ಟಬೇಕಾಗುತ್ತದೆ. ಹೀಗಿದ್ದರೂ, ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿರುವವರು ಯಾವುದೇ ದಂಡ ಕಟ್ಟಬೇಕಾಗಿಲ್ಲ.
ತೆರಿಗೆಯ ಮೇಲೆ ಬಡ್ಡಿ: ಜುಲೈ ೩೧ರ ಬಳಿಕ ಆದಾಯ ತೆರಿಗೆ ಪಾವತಿಸದಿರುವವರಿಗೆ, ಬಾಕಿ ತೆರಿಗೆ ಮೊತ್ತದ ಮೇಲೆ ೧% ಬಡ್ಡಿ ಅನ್ವಯವಾಗುತ್ತದೆ.
ಐಟಿ ರಿಟರ್ನ್ ಯಾರಿಗೆ ಕಡ್ಡಾಯ?: ವೈಯಕ್ತಿಕ ತೆರಿಗೆದಾರರಿಗೆ ವಾರ್ಷಿಕ ಆದಾಯ ೨.೫ ಲಕ್ಷ ರೂ.ಗಿಂತ ಮೇಲ್ಪಟ್ಟು ಇದ್ದರೆ ಐಟಿ ರಿಟರ್ನ್ ಸಲ್ಲಿಕೆ ಕಡ್ಡಾಯ. ೨.೫ ಲಕ್ಷ ರೂ.ಗಿಂತ ಕಡಿಮೆ ಆದಾಯ ಇದ್ದರೆ ಕಡ್ಡಾಯವಲ್ಲ.
೬೦ ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು: ಒಬ್ಬ ವ್ಯಕ್ತಿಯ ವಾರ್ಷಿಕ ವಹಿವಾಟು ೬೦ ಲಕ್ಷ ರೂ.ಗಿಂತ ಹೆಚ್ಚು ಇದ್ದರೆ ಅವರು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು.
ವೃತ್ತಿಪರ ಆದಾಯ ೧೦ ಲಕ್ಷ ರೂ. ಮೀರಿದರೆ: ಒಬ್ಬ ವ್ಯಕ್ತಿ ತನ್ನ ವೃತ್ತಿಪರ ಮೂಲದಿಂದ ವಾರ್ಷಿಕ ೧೦ ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದರೆ ಐಟಿ ರಿಟರ್ನ್ ಸಲ್ಲಿಕೆ ಮಾಡಬೇಕು.
ಟಿಡಿಎಸ್ ೨೫,೦೦೦ ರೂ. ಮೀರಿದರೆ: ಟಿಡಿಎಸ್ ಅಥವಾ ಟಿಸಿಎಸ್ ೨೫,೦೦೦ ರೂ.ಗಿಂತ ಹೆಚ್ಚು ಇದ್ದರೆ ಐಟಿಆರ್ ಸಲ್ಲಿಕೆ ಅಗತ್ಯ. ಹಿರಿಯ ನಾಗರಿಕರಿಗೆ ೫೦,೦೦೦ ರೂ. ತನಕ ವಿನಾಯಿತಿ ಇದೆ.
ಬ್ಯಾಂಕ್ ಖಾತೆಯಲ್ಲಿ ೧ ಕೋಟಿ ರೂ. ಇದ್ದರೆ: ಬ್ಯಾಂಕ್ ಅಥವಾ ಕೋಪರೇಟಿವ್ ಬ್ಯಾಂಕ್ ಖಾತೆಯಲ್ಲಿ ೧ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಜಮೆ ಮಾಡಿದ್ದರೆ ಐಟಿ ರಿಟರ್ನ್ ಸಲ್ಲಿಸಬೇಕು. ವಿದೇಶ ಪ್ರವಾಸಕ್ಕೆ ೧೨ ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ, ವಿದ್ಯುತ್ ಬಿಲ್ ೧ ಲಕ್ಷ ರೂ.ಗಿಂತ ಹೆಚ್ಚು ಬಂದರೆ, (ಒಂದೇ ಸಲಕ್ಕೆ ಅಥವಾ ವರ್ಷಕ್ಕೆ) ಐಟಿ ರಿಟರ್ನ್ ಸಲ್ಲಿಸಬೇಕು.