ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಶೇ.0.40 ರಷ್ಟು ರೆಪೊ ದರವನ್ನು ಕಡಿತಗೊಳಿಸಿದಾಗ ಬ್ಯಾಂಕ್‌ಗಳು ಸಾಲಗಳ ಬಡ್ಡಿ ದರಗಳನ್ನು ತಕ್ಷಣವೇ ಏರಿಸಿತು. ಆದರೆ ಜನತೆ ಬ್ಯಾಂಕಿನಲ್ಲಿ ಇಟ್ಟಿದ್ದ ಡಿಪಾಸಿಟ್ ಅಥವಾ ಉಳಿತಾಯದ ಠೇವಣಿಗಳ ಬಡ್ಡಿ ದರ ಮಾತ್ರ ಅದೇ ರೀತಿ ಏರಿಕೆಯಾಗಲಿಲ್ಲ. ಬ್ಯಾಂಕ್‌ಗಳು ಡಿಪಾಸಿಟ್ ಗೆ ನೀಡುವ ಬಡ್ಡಿ ದರದಲ್ಲಿ ಅತ್ಯಲ್ಪ ಏರಿಕೆ ಮಾತ್ರ ಮಾಡಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.
ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚು ಇರುವ ತನಕ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಪ್ರಮುಖ ಬ್ಯಾಂಕರ್‌ಗಳು ತಿಳಿಸಿದ್ದಾರೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ external benchmark-linked framework ಪರಿಣಾಮ ಹಣಕಾಸು ನೀತಿಯ ಬದಲಾವಣೆಗಳು ತಕ್ಷಣ ಸಾಲದ ಬಡ್ಡಿ ದರಗಳ ಮೇಲೆ ತನ್ನಿಂತಾನೆ ವರ್ಗಾವಣೆಯಾಗುತ್ತದೆ. ಅಂದರೆ ಬ್ಯಾಂಕ್‌ನಿಂದ ಹೊರಗಿನ ಸ್ವತಂತ್ರ ಸಂಸ್ಥೆ, ಉದಾಹರಣೆಗೆ ಆರ್‌ಬಿಐನ ರೆಪೊ ದರ ವ್ಯವಸ್ಥೆಯಲ್ಲಿ ಉಂಟಾಗುವ ಪರಿಷ್ಕರಣೆಗಳು. ಆದರೆ ಡಿಪಾಸಿಟ್ ಗೆ ಕೊಡುವ ಬಡ್ಡಿ ದರಗಳು ಸಾಲದ ಬೇಡಿಕೆ ಮತ್ತು ವ್ಯವಸ್ಥೆಯಲ್ಲಿ ನಗದು ಲಭ್ಯತೆಯನ್ನು ಅವಲಂಬಿಸಿದೆ ಎನ್ನುತ್ತಾರೆ ತಜ್ಞರು.
” ಆರ್‌ಬಿಐ ರೆಪೊ ದರದಲ್ಲಿ ಏರಿಕೆ ಮಾಡಿದಾಗ, ಇದನ್ನು ಆಧರಿಸಿದ ಬ್ಯಾಂಕ್ ಸಾಲಗಳ ಬಡ್ಡಿ ದರಗಳೂ ತನ್ನಿಂತಾನೆ ಹೆಚ್ಚಳವಾಗುತ್ತದೆʼʼ ಎನ್ನುತ್ತಾರೆ ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನವೀಸ್. ಠೇವಣಿಗಳ ಬಡ್ಡಿ ದರಗಳು ಬ್ಯಾಂಕ್‌ನ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಆಗುತ್ತವೆ ಎನ್ನುತ್ತಾರೆ ಅವರು.
ವ್ಯವಸ್ಥೆಯಲ್ಲಿ 4 ಲಕ್ಷ ಕೋಟಿ ಹೆಚ್ಚುವರಿ ನಗದು
ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹೆಚ್ಚುವರಿ 4 ರಿಂದ 4.5 ಲಕ್ಷ ಕೋಟಿ ರೂ. ಹೆಚ್ಚುವರಿ ನಗದು ಲಭ್ಯವಿದೆ. ಹೀಗಾಗಿ ಸಣ್ಣ ಉಳಿತಾಯಗಾರರಿಗೆ ಕಡಿಮೆ ಬಡ್ಡಿ ಆದಾಯದ ಸಮಸ್ಯೆ ಮುಂದುವರಿಯಲಿದೆ.
ಉಳಿತಾಯ ಮಾಡುವವರು ಬ್ಯಾಂಕ್‌ಗಳಲ್ಲಿ ಇಡುವ 1 ವರ್ಷ ಅವಧಿಯ ಡಿಪಾಸಿಟ್‌ಗಳ ಬಡ್ಡಿ ದರ ವಾರ್ಷಿಕ ಶೇ.5ರಿಂದ ಶೇ. 5.5 ತನಕ ಇದೆ. ಆದರೆ ಬೆಲೆ ಏರಿಕೆ ಅಥವಾ ಹಣದುಬ್ಬರ ಶೇ8ರ ಸಮೀಪ ಇದೆ. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.8 ಮತ್ತು ಸಗಟು ಹಣದುಬ್ಬರ ಶೇ.15.1ರ ಏರುಗತಿಯಲ್ಲಿ ಇತ್ತು. ಆದ್ದರಿಂದ ಉಳಿತಾಯ ಠೇವಣಿಗಳ ಬಡ್ಡಿ ದರ ಏರಿಕೆಗೆ ಜನತೆ ಕಾಯಲೇಬೇಕಾದ ಪರಿಸ್ಥಿತಿ ಬಂದಿದೆ. ಈಗ ಬ್ಯಾಂಕ್ ನಲ್ಲಿ ಡಿಪಾಸಿಟ್ ಇಟ್ಟರೆ ಅದರ ಬೆಲೆ ಕರಗುತ್ತದೆಯೇ ಹೊರತು ಈಗಿನ ಹಣದುಬ್ಬರದ ಎದುರು ಏರಿಕೆಯಾಗದು. ಆಗಬೇಕಿದ್ದರೆ ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಬಡ್ಡಿ ದರ ಸಿಗಬೇಕು. ಅಂದರೆ ಕನಿಷ್ಠ ಶೇ.8ಕ್ಕಿಂತ ಹೆಚ್ಚಿನ ಬಡ್ಡಿ ದರ ಸಿಕ್ಕಿದರೆ ಮಾತ್ರ ಪ್ರಯೋಜನವಾದೀತು.
ಬ್ಯಾಂಕ್ ಗಳ ನಿಶ್ಚಿತ ಠೇವಣಿ ಯೋಜನೆ, ಸರಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಿಗುವ ಬಡ್ಡಿ ದರಗಳು ಕಡಿಮೆ ಹಾಗೂ ಈಗಿನ ಹಣದುಬ್ಬರದ ಎದುರು ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ.
ರಿಸರ್ವ್ ಬ್ಯಾಂಕ್ 2020ರ ಫೆಬ್ರವರಿಯಿಂದ ಇಲ್ಲಿಯವರೆಗೆ ವ್ಯವಸ್ಥೆಗೆ 17.2 ಲಕ್ಷ ಕೋಟಿ ರೂ.ಗಳ ನಗದನ್ನು ಸೇರಿಸಿದೆ. ಇದು ಜಿಡಿಪಿಯ ಶೇ.8.7ರಷ್ಟು. ಹಾಗೂ ಇದರಲ್ಲಿ ಶೇ.70ರಷ್ಟನ್ನು 2022ರ ಮಾರ್ಚ್ ಒಳಗೆ ಹಿಂತೆಗೆದುಕೊಂಡಿದೆ. ಆರ್ ಬಿಐ ಹಂತಗಳಲ್ಲಿ ಈ ಹಿಂತೆಗೆತವನ್ನು ಮುಂದುವರಿಸಲಿದೆ.
ಇದನ್ನೂ ಓದಿ:ವಿಸ್ತಾರ Money Guide: ಜೂನ್‌ನಿಂದ ಗೃಹ ಸಾಲ, ಬಡ್ಡಿ, ವಿಮೆ, ಚಿನ್ನ, ಐಪಿಪಿಬಿ ಸೇವೆಗಳಲ್ಲಿ ಹೊಸ ಬದಲಾವಣೆ ಜಾರಿ