Site icon Vistara News

Akshaya Tritiya 2023 : ಹಾಲ್‌ ಮಾರ್ಕ್‌ ಇರುವ ಚಿನ್ನದ ನಾಣ್ಯ ಖರೀದಿ ಕಡ್ಡಾಯವೇ?

gold bars

ಭಾರತದಲ್ಲಿ 2023ರ ಏಪ್ರಿಲ್‌ 1ರಿಂದ ಆಯ್ದ ಚಿನ್ನದ ವಸ್ತುಗಳಿಗೆ ಹಾಲ್‌ ಮಾರ್ಕ್‌ ಕಡ್ಡಾಯವಾಗಿದೆ. ಹೀಗಿದ್ದರೂ 999/995 ಶುದ್ಧತೆಯ ಬಂಗಾರದ ನಾಣ್ಯಕ್ಕೆ ಹಾಲ್‌ ಮಾರ್ಕಿಂಗ್‌ (Hallmarking) ಕಡ್ಡಾಯವಲ್ಲ. ಚಿನ್ನದ ಜ್ಯುವೆಲ್ಲರಿ ಮತ್ತು ಕರಕುಶಲ ವಸ್ತುಗಳಿಗೆ ಮಾತ್ರ ಹಾಲ್‌ ಮಾರ್ಕ್‌ ಕಡ್ಡಾಯವಾಗಿದೆ. (Akshaya Tritiya 2023) ವೈಟ್‌ ಗೋಲ್ಡ್‌ ವಸ್ತುವಿಗೂ ಹಾಲ್‌ ಮಾರ್ಕ್‌ ಅಗತ್ಯ. ಈ ಸಲ ಏಪ್ರಿಲ್‌ 22ರಂದು ಅಕ್ಷಯ ತೃತೀಯ ದಿನವಾಗಿದ್ದು, ಬಂಗಾರದ ಆಭರಣ, ನಾಣ್ಯ ಖರೀದಿ ಹೆಚ್ಚಳ ನಿರೀಕ್ಷಿಸಲಾಗಿದೆ.

ಬ್ಯೂರೊ ಸ್ಟ್ಯಾಂಡರ್ಡ್‌ ಆಫ್‌ ಇಂಡಿಯಾ ಪ್ರಕಾರ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಮಾತ್ರ ಹಾಲ್‌ ಮಾರ್ಕ್‌ ಕಡ್ಡಾಯವಾಗಿ ಅಗತ್ಯ. 999/995 ಶುದ್ಧತೆಯ ಬಂಗಾರದ ನಾಣ್ಯಕ್ಕೆ ಬಿಐಎಸ್‌ ಅನುಮೋದಿತ ರಿಫೈನರಿಗಳಲ್ಲಿ ಹಾಲ್‌ ಮಾರ್ಕ್‌ ನೀಡಬಹುದು. ಬ್ಯೂರೊ ಸ್ಟ್ಯಾಂಡರ್ಡ್‌ ಆಫ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಮಾನ್ಯತೆ ಪಡೆದಿರುವ ರಿಫೈನರಿ ವಿವರವನ್ನು ಪಡೆಯಬಹುದು. BIS website www.bis.gov.in

ಏನಿದು ಹಾಲ್‌ ಮಾರ್ಕ್?

ಎಚ್‌ಯುಐಡಿ ಸಂಖ್ಯೆ 6 ಅಂಕಿಗಳ ಕೋಡ್.‌ (Alphnumeric code) ಹಾಲ್‌ ಮಾರ್ಕ್‌ ಅನ್ನು ಮಾಡುವ ಸಂದರ್ಭ ಪ್ರತಿ ಆಭರಣಕ್ಕೂ ಇದನ್ನು ನೀಡಲಾಗುತ್ತದೆ. ಹಾಗೂ ಇದು ಪ್ರತಿಯೊಂದು ಆಭರಣಕ್ಕೂ ಭಿನ್ನವಾಗಿರುತ್ತದೆ. ಹಾಲ್‌ ಮಾರ್ಕಿಂಗ್‌ ಸೆಂಟರ್‌ನಲ್ಲಿ (Assaying & Hallmarking centre) ಹಾಲ್‌ ಮಾರ್ಕ್‌ ಗುರುತನ್ನು ಹಾಕಲಾಗುತ್ತದೆ. ಇಲಾಖೆಯ ಪ್ರಕಾರ ಹಾಲ್‌ ಮಾರ್ಕ್‌ ಗುರುತಿನಿಂದಾಗಿ ವೈಯಕ್ತಿಕ ಚಿನ್ನಾಭರಣವನ್ನು ಸುಲಭವಾಗಿ ಗುರುತಿಸಬಹುದು. ಪರಿಶುದ್ಧತೆಯನ್ನು ಅಳೆಯಲು ಇದುವೇ ಮಾನದಂಡ. ಗುಣಮಟ್ಟಕ್ಕೆ ಇದು ಖಾತರಿ ನೀಡುತ್ತದೆ.

HUID ಆಧರಿತ ಹಾಲ್‌ ಮಾರ್ಕ್‌ ಪದ್ಧತಿಯಲ್ಲಿ ತನ್ನಿಂತಾನೆ ಜ್ಯುವೆಲ್ಲರಿಗಳ ನೋಂದಣಿಯಾಗುತ್ತದೆ. ಚಿನ್ನದ ಮಾರಾಟದಲ್ಲಿ ಅಕ್ರಮ ನಡೆಯುವುದನ್ನು, ಗುಣಮಟ್ಟ ಮತ್ತು ಪಾರದರ್ಶಕತೆಯ ಕೊರತೆಯಾಗುವುದನ್ನು ಇದರಿಂದ ನಿವಾರಿಸಬಹುದು. ಹೀಗಾಗಿ ಇದು ಉದ್ದಿಮೆ ಮತ್ತು ಗ್ರಾಹಕ ಸ್ನೇಹಿ ನಿರ್ಧಾರ ಎಂದು ಸರ್ಕಾರ ತಿಳಿಸಿದೆ.

ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಸ್ಸ್‌ (Bureau of Indian Standards -BIS) ಮಾನ್ಯತೆ ಪಡೆದಿರುವ ಸಂಸ್ಥೆಯ ಮೂಲಕ ಹಾಲ್‌ ಮಾರ್ಕ್‌ ನೀಡುವುದರಿಂದ ಆಭರಣಗಳ ಗುಣಮಟ್ಟ ಮತ್ತು ಪರಿಶುದ್ಧತೆಯ ಖಾತರಿಗೆ ಸಹಾಯಕ. ಯಾವುದೇ ವಂಚನೆ ಆಗದಂತೆ ನೋಡಿಕೊಳ್ಳಲು ಹಾಲ್‌ ಮಾರ್ಕ್‌ ಅನ್ನು ಪರಿಶೀಲಿಸಿ ಆಭರಣಗಳನ್ನು ಖರೀದಿಸುವುದು ಸೂಕ್ತ.

ಹಾಲ್‌ ಮಾರ್ಕ್‌ನಲ್ಲಿ ಏನೇನಿದೆ?

ಬಿಐಎಸ್‌ ಹಾಲ್‌ ಮಾರ್ಕ್‌ನಲ್ಲಿ 3 ಸಂಕೇತಗಳು ಇರುತ್ತವೆ. BIS ಲೋಗೊ ಆಭರಣದ ಪರಿಶುದ್ಧತೆ ಗುಣಮಟ್ಟವನ್ನು ಖಾತರಿಪಡಿಸುತ್ತದೆ. ಯಾವುದೇ ಚಿನ್ನದ ಆಭರಣವು 100% ಬಂಗಾರದಲ್ಲಿ ತಯಾರಾಗುವುದಿಲ್ಲ. ಏಕೆಂದರೆ ಸ್ವತಃ ಚಿನ್ನ ಅತ್ಯಂತ ಮೆದು. ಆದ್ದರಿಂದ ಇತರ ಲೋಹಗಳನ್ನು ಸೇರಿಸಿ ಆಭರಣಗಳ ಆಕಾರವನ್ನು ನೀಡಬೇಕಾಗುತ್ತದೆ. ಹೆಚ್ಚು ಚಿನ್ನ ಇರುವ ಆಭರಣ ಹೆಚ್ಚು ದುಬಾರಿಯಾಗಿರುತ್ತದೆ.

ಹಾಲ್‌ ಮಾರ್ಕ್‌ ಆಭರಣಗಳಲ್ಲಿ ಮೂರು ವಿಧಗಳು ಇರುತ್ತವೆ. 22K916 ಎಂದರೆ 22 ಕ್ಯಾರಟ್‌ ಚಿನ್ನ ಮತ್ತು 91.6 ಪರ್ಸೆಂಟ್‌ ಬಂಗಾರ ಇರುತ್ತದೆ. 18K750 ಎಂದರೆ 18 ಕ್ಯಾರಟ್‌ ಚಿನ್ನ ಮತ್ತು 75 ಪರ್ಸೆಂಟ್‌ ಚಿನ್ನ ಇರುತ್ತದೆ. 14K585 ಎಂದರೆ 14 ಕ್ಯಾರಟ್‌ ಬಂಗಾರ ಮತ್ತು 58.5 ಪರ್ಸೆಂಟ್‌ ಬಂಗಾರ ಇರುತ್ತದೆ.

ಹಳೆಯ ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕ್‌ ಪಡೆಯುವುದು ಹೇಗೆ?

ನಿಮ್ಮಲ್ಲಿ ಹಾಲ್‌ ಮಾರ್ಕ್‌ ಇಲ್ಲದಿರುವ ಹಳೆಯ ಆಭರಣಗಳು ಇವೆ ಎಂದಿಟ್ಟುಕೊಳ್ಳೋಣ. ಅವುಗಳಿಗೆ ಹಾಲ್‌ ಮಾರ್ಕ್‌ ಹೇಗೆ ಪಡೆಯಬಹುದು ಎನ್ನುತ್ತೀರಾ? ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಬಿಐಎಸ್‌ ನೋಂದಾಯಿತ ಜ್ಯುವೆಲ್ಲರ್‌ ಅನ್ನು (BIS registered Jeweller) ನೀವು ಇದಕ್ಕಾಗಿ ಸಂಪರ್ಕಿಸಬಹುದು. ಅವರು ನಿಮ್ಮ ಆಭರಣಗಳನ್ನು ಬಿಐಎಸ್‌ ಮಾನ್ಯತೆ ಪಡೆದ A&H ಸೆಂಟರ್‌ನಲ್ಲಿ ಪರೀಕ್ಷಿಸಬಹುದು. ಅಲ್ಲಿ ಆಭರಣದ ಪರಿಶುದ್ಧತೆಯ ಅನುಸಾರ ಹಾಲ್‌ ಮಾರ್ಕ್‌ ಗುರುತನ್ನು ಪಡೆಯಬಹುದು. ಆದರೆ ಪರಿಶುದ್ಧತೆಯ ದರ್ಜೆಯನ್ನು ಆಭರಣ ಹೊಂದಿರಬೇಕು. ಚಿನ್ನದ ಶುದ್ಧತೆ ಪರಿಶೀಲನೆಗೆ 200 ರೂ. ಶುಲ್ಕವಾಗುತ್ತದೆ. ಗ್ರಾಹಕರು ನೇರವಾಗಿ Assaying and Hallmarking Centre ಅನ್ನು ಸಂಪರ್ಕಿಸಿ ಚಿನ್ನಕ್ಕೆ ಹಾಲ್‌ ಮಾರ್ಕ್‌ ಪಡೆಯಲು ಆಗುವುದಿಲ್ಲ. ಬಿಐಎಸ್‌ ನೋಂದಾಯಿತ ಜ್ಯುವೆಲ್ಲರ್‌ ಮೂಲಕ ಇದು ನಡೆಯಬೇಕಾಗುತ್ತದೆ.

ಹಾಲ್‌ ಮಾರ್ಕ್‌ನಿಂದ ಲಾಭವೇನು?

ಗ್ರಾಹಕರಿಗೆ ಚಿನ್ನದ ಗುಣಮಟ್ಟದ ಬಗ್ಗೆ ಯಾವುದೇ ಆತಂಕ ಇರುವುದಿಲ್ಲ. ಹಾಲ್‌ ಮಾರ್ಕ್‌ ಇರುವ ಚಿನ್ನದ ಮರು ಮಾರಾಟದ ವೇಳೆ ಆಗಿನ ದರ ಸಿಗುತ್ತದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಇದರ ಆಧಾರದಲ್ಲಿ ಸುಲಭವಾಗಿ ಸಾಲ ನೀಡುತ್ತವೆ.

Exit mobile version