ಬೆಂಗಳೂರು: ಕೇಂದ್ರ ಸರಕಾರ 2021-22ರ ಸಾಲಿಗೆ ಉದ್ಯೋಗಿಗಳ ಭವಿಷ್ಯನಿಧಿಯ (EPF) ಬಡ್ಡಿದರವನ್ನು 8.5%ರಿಂದ 8.1%ಕ್ಕೆ ಕಡಿತಗೊಳಿಸಲು ಅನುಮೋದಿಸಿದೆ. ಇದು ಕಳೆದ 40 ವರ್ಷಗಳಲ್ಲಿಯೇ ಇಪಿಎಫ್ ಠೇವಣಿಗೆ ಅತ್ಯಂತ ಕಡಿಮೆ ಬಡ್ಡಿ ದರ ಎಂದೇ ಭಾರಿ ಸುದ್ದಿ ಆಯಿತು. ಹಾಗಾದರೆ ಇದರಷ್ಟೇ ಸುರಕ್ಷಿತ ಮತ್ತು ಹೋಲಿಸಬಹುದಾದ ಇತರ ಹೂಡಿಕೆಗಳಿಗೆ ಇದಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆಯೇ ಎಂದು ಪರಿಶೀಲಿಸಿದರೆ, ನಿಮಗೆ ಸಿಗುವ ಉತ್ತರ ʼಇಲ್ಲʼ ಎಂಬುದೇ ಆಗಿದೆ.
ಹೌದು! ಸಾರ್ವಜನಿಕ ಭವಿಷ್ಯನಿಧಿ (PPF), NSC, RBI ಬಾಂಡ್‌ಗಳಿಗೆ ಹೋಲಿಸಿದರೆ, ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಸಿಗುವ ಬಡ್ಡಿ ದರಗಳನ್ನು ಹೋಲಿಸಿದರೆ, ಈಗಲೂ ಅತಿ ಹೆಚ್ಚು ಬಡ್ಡಿ ಆದಾಯವನ್ನು ಪಿಪಿಎಫ್, ವಿಪಿಎಫ್ ಕೊಡುತ್ತದೆ. ಎಷ್ಟೇ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಇದ್ದರೂ, ಅದು ನಿಶ್ಚಿತ ಠೇವಣಿಗೆ (Fixed deposit) ಕೊಡುವ ಬಡ್ಡಿ ದರ 6% ಆಜುಬಾಜಿನಲ್ಲಿ ಇರುತ್ತದೆಯಷ್ಟೇ. ಹಿರಿಯ ನಾಗರಿಕರಿಗೆ 6.5% ಸಿಗಬಹುದು.
ಇಪಿಎಫ್ ಜತೆಗೆ ವಿಪಿಎಫ್ ಹೂಡಿಕೆ ಸೂಕ್ತ
ಉದ್ಯೋಗಿಗಳಿಗೆ ಅವರ ಮೂಲ ವೇತನದ 12% ಇಪಿಎಫ್ ಖಾತೆಗೆ ಜಮೆಯಾಗುತ್ತದೆ. ಉದ್ಯೋಗದಾತ ಅಥವಾ ಕಂಪನಿಯೂ ಅಷ್ಟೇ ಮೊತ್ತವನ್ನು ಸೇರಿಸುತ್ತದೆ. ಹೀಗಿದ್ದರೂ ಉದ್ಯೋಗಿಗಳು ವಿಪಿಎಫ್ ಯೋಜನೆಯ ಮೂಲಕ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬಹುದು. ಈ ವಿಪಿಎಫ್‌ಗೂ ಇಪಿಎಫ್‌ನಷ್ಟೇ ಬಡ್ಡಿ ಸಿಗುತ್ತದೆ. ಅಂದರೆ ಅದೂ 8.1% ಆದಾಯ ನೀಡಲಿದೆ. ಇಪಿಎಫ್ ಮತ್ತು ವಿಪಿಎಫ್‌ನ ಹೂಡಿಕೆಯಲ್ಲಿ ಒಟ್ಟಾರೆ ವಾರ್ಷಿಕ 2.5 ಲಕ್ಷ ರೂ. ತನಕದ ಹೂಡಿಕೆಗೆ ಆದಾಯ ತೆರಿಗೆಯ ವಿನಾಯಿತಿ ಪಡೆಯಬಹುದು.
ನೀವು ನಿಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಸಾರ್ವಜನಿಕ ಭವಿಷ್ಯನಿಧಿಯಲ್ಲಿ (PPF) ಹೂಡಿಕೆ ಮಾಡಿದರೆ ಕೇವಲ 7.1% ಬಡ್ಡಿ ಪಡೆಯಬಹುದು. ಮಾತ್ರವಲ್ಲದೆ ವರ್ಷಕ್ಕೆ 1.5 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಅದರಲ್ಲಿ ಇಡಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚನ್ನು ವಿಪಿಎಫ್‌ನಲ್ಲಿ ಹೂಡಿಕೆ ಮಾಡುವುದು ಲಾಭದಾಯಕ.
ವಿಪಿಎಫ್ ಹೂಡಿಕೆ ಲೆಕ್ಕಾಚಾರ ಹೀಗಿದ್ದರೆ ಲಾಭ
ನಿಮ್ಮ ಮೂಲವೇತನ ಮಾಸಿಕ 50,000 ರೂ. ಇದ್ದರೆ ವಾರ್ಷಿಕ 6 ಲಕ್ಷ ರೂ.ಗಳಾಗುತ್ತದೆ. ಇದರ 12% ಎಂದರೆ 72,000 ರೂ. ಇಪಿಎಫ್‌ಗೆ ಹೋಗುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಾದ್ದರಿಂದ ನೀವು 1.78 ಲಕ್ಷ ರೂ. ಅಥವಾ ಮಾಸಿಕ 14,833 ರೂ.ಗಳನ್ನು ವಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಈ ಮೊತ್ತಕ್ಕೆ ಯಾವುದೇ ತೆರಿಗೆಯೂ ಇರುವುದಿಲ್ಲ. ಜತೆಗೆ 8.1% ಬಡ್ಡಿ ಆದಾಯವೂ ನಿಮ್ಮದಾಗುತ್ತದೆ.
ಬಡ್ಡಿ ದರ ಏರಿಕೆ ಸಂಭವ
ಕಳೆದ ಎರಡು ವರ್ಷಗಳಿಂದ ಇಪಿಎಫ್ ಬಡ್ಡಿ ದರ ಇಳಿಕೆಯಾಗಿದೆ. ಹೀಗಾಗಿ ಕಳೆದ ಹಲವು ದಶಕಗಳಿಂದ ಕಡಿಮೆ ಎನ್ನಿಸುತ್ತಿದೆ. ಆದರೆ ಜಾಗತಿಕ ಹಣದುಬ್ಬರ ದಾಖಲೆಯ ಮಟ್ಟದಲ್ಲಿದೆ. ಭಾರತ ಕೂಡ ಇದರಿಂದ ಹೊರತಾಗಿಲ್ಲ. ಹಣದುಬ್ಬರ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಆದ್ದರಿಂದ ಆರ್‌ಬಿಐ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಈ ವರ್ಷದಂತೆ 2022-23ರಲ್ಲೂ ಇತರ ಸುರಕ್ಷಿತ ಹೂಡಿಕೆಗೆ ಹೋಲಿಸಿದರೆ ಇಪಿಎಫ್/ವಿಪಿಎಫ್‌ನಲ್ಲಿ ಸಿಗುವ ಬಡ್ಡಿ ಸ್ವಲ್ಪ ಹೆಚ್ಚೇ ಇರುವ ಸಾಧ್ಯತೆ ಇದೆ. ಈ ಅಂಶವನ್ನು ಹೂಡಿಕೆದಾರರು ಗಮನಿಸಬಹುದು.
2021-22ರಲ್ಲಿ ಯಾವುದಕ್ಕೆ ಎಷ್ಟು ಬಡ್ಡಿ?
ಇಪಿಎಫ್ | 8.1% |
ವಿಪಿಎಫ್ | 8.1% |
ಪಿಪಿಎಫ್ | 7.1% |
ಸುಕನ್ಯಾ ಸಮೃದ್ಧಿ | 7.6% |
ಕಿಸಾನ್ ವಿಕಾಸಪತ್ರ | 6.9% |
ಎನ್‌ಎಸ್‌ಸಿ | 6.8% |
ಹಿರಿಯ ನಾಗರಿಕರ ಉಳಿತಾಯ ಠೇವಣಿ | 7.4% |
5 ವರ್ಷಗಳ ರಿಕರಿಂಗ್ ಡಿಪಾಸಿಟ್ | 5.8% |
ಮಾಸಿಕ ಆದಾಯ ಖಾತೆ | 6.6% |
ಇದನ್ನೂ ಓದಿ: Money Guide: ಶೇ.7.79ಕ್ಕೆ ಜಿಗಿದ ಹಣದುಬ್ಬರ, ಉಳಿತಾಯ ಖಾತೆಗೆ ಸಾಲದು ಬಡ್ಡಿದರ