ನವ ದೆಹಲಿ: ಡಿಜಿಟಲ್ ಲೆಂಡಿಂಗ್ ಪದ್ಧತಿಯಲ್ಲಿ (Digital lending) ಸಾಲ ಸುಸ್ತಿಯಾದಾಗ ಮರು ವಸೂಲಾತಿಗೆ ಕಳಿಸುವ ರಿಕವರಿ ಏಜೆಂಟರ ಬಗ್ಗೆ ಮೊದಲೇ ಸಾಲಗಾರರಿಗೆ ಮಾಹಿತಿ ನೀಡಬೇಕು ಎಂದು ಆರ್‌ಬಿಐ ( Reserve Bank of India) ತಿಳಿಸಿದೆ. ರಿಕವರಿ ಏಜೆಂಟರು ಸಾಲಗಾರರಿಗೆ ಕಿರುಕುಳ ಕೊಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಈ ಮಹತ್ವದ ಸೂಚನೆ ನೀಡಿದೆ.
ಸಾಲ ಸಕಾಲಕ್ಕೆ ಮರು ಪಾವತಿಯಾಗದೆ ಇದ್ದರೆ ವಸೂಲಾತಿಗೆ ರಿಕವರಿ ಏಜೆಂಟರನ್ನು ಸಾಲಗಾರರ ಬಳಿಗೆ ಕಳಿಸಬಹುದು. ಆದರೆ ಅದಕ್ಕೂ ಮುನ್ನ ಇ-ಮೇಲ್, ಎಸ್ಸೆಮ್ಮೆಸ್ ಮೂಲಕ ರಿಕವರಿ ಏಜೆಂಟರ ವಿವರಗಳನ್ನು ಸಾಲಗಾರರಿಗೆ ತಿಳಿಸಬೇಕು ಎಂದು ಆರ್‌ಬಿಐ ತನ್ನ FAQ ನಲ್ಲಿ ತಿಳಿಸಿದೆ.
ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ಸಾಲಗಾರರಿಗೆ ಅಧಿಕೃತ ರಿಕವರಿ ಏಜೆಂಟರ ಹೆಸರು ಮತ್ತು ವಿವರಗಳನ್ನು ನೀಡಬಹುದು ಎಂದು ಆರ್‌ಬಿಐ ತಿಳಿಸಿದೆ.
ಕ್ರೆಡಿಟ್ ಕಾರ್ಡ್ ಇಎಂಐ ಡಿಜಿಟಲ್ ಲೆಂಡಿಂಗ್ ಮಾರ್ಗದರ್ಶಿ ವ್ಯಾಪ್ತಿಗೆ ಬರುವುದೇ?
ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳ ಬಿಡುಗಡೆ 2022 ಕುರಿತ ಮಾಸ್ಟರ್ ಡೈರೆಕ್ಷನ್ ಅಡಿಗೆ ಬರುವ ಕ್ರೆಡಿಟ್ ಕಾರ್ಡ್ ಸಾಲಗಳು ಡಿಜಿಟಲ್ ಲೆಂಡಿಂಗ್ ಮಾರ್ಗದರ್ಶಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಇದನ್ನು ಹೊರತುಪಡಿಸಿದ ಇತರ ಕ್ರೆಡಿಟ್ ಕಾರ್ಡ್ ಸಾಲಗಳ ಇಎಂಐಗಳು ಡಿಜಿಟಲ್ ಲೆಂಡಿಂಗ್ ಮಾರ್ಗದರ್ಶಿ ವ್ಯಾಪ್ತಿಗೆ ಬರುತ್ತದೆ.