ದೇಶದಲ್ಲಿ ಈಗ ಒಟ್ಟು 12 ಸಾರ್ವಜನಿಕ ಬ್ಯಾಂಕ್‌ಗಳು ಇವೆ. ಈ ಪೈಕಿ 10 ಬ್ಯಾಂಕ್‌ಗಳ ಷೇರು ದರಗಳು ಈ ತಿಂಗಳು ಹೊಸ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿವೆ.
ಕಳೆದ ಒಂದು ತಿಂಗಳಿನಲ್ಲಿ ಪಂಜಾಬ್ & ಸಿಂಧ್ ಬ್ಯಾಂಕ್ ಸುಮಾರು 71%, ಯೂಕೊ ಬ್ಯಾಂಕ್ 55%, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 51%, ಬ್ಯಾಂಕ್ ಆಫ್ ಇಂಡಿಯಾ 42%, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಷೇರು ದರ 39.5% ಏರಿಕೆಯಾಗಿದೆ. ವಾರ್ಷಿಕ ದರದ ಆಧಾರದಲ್ಲಿ ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರು ದರಗಳು ಜಿಗಿದ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ ಇಮ್ಮಡಿಗಿಂತಲೂ ಹೆಚ್ಚಳವಾಗಿದೆ. ಕಳಪೆ ಪ್ರದರ್ಶನ ದಾಖಲಿಸಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಷೇರು ದರ ಕೂಡ 25% ಹೆಚ್ಚಳವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಷೇರು ದರ ಕಳೆದ 52 ವಾರಗಳಲ್ಲಿ ಗರಿಷ್ಠ ಎತ್ತರಕ್ಕೆ ಏರಿಕೆಯಾಗಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಇಂಡೆಕ್ಸ್ 34% ಏರಿಕೆ ದಾಖಲಿಸಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆ ಹೆಚ್ಚಳ ಎಫೆಕ್ಟ್?
ಹಾಗಾದರೆ ಸಾರ್ವಜನಿಕ ಬ್ಯಾಂಕ್ ಷೇರುಗಳ ದರ ಜಿಗಿತಕ್ಕೆ ಕಾರಣವೇನು? ವರದಿಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಈ ರ‍್ಯಾಲಿಯ ಹಿಂದೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಸಾರ್ವಜನಿಕ ಬ್ಯಾಂಕ್ | 1 ತಿಂಗಳಿನ ಆದಾಯ (%) | ವಾರ್ಷಿಕ ಆದಾಯ (%) |
ಬ್ಯಾಂಕ್ ಆಫ್ ಬರೋಡಾ | 18.76% | 129.47% |
ಇಂಡಿಯನ್ ಬ್ಯಾಂಕ್ | 13.57% | 111.54% |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 51.32% | 104.15% |
ಪಂಜಾಬ್ & ಸಿಂಧ್ ಬ್ಯಾಂಕ್ | 70.81% | 96.27% |
ಬ್ಯಾಂಕ್ ಆಫ್ ಇಂಡಿಯಾ | 42% | 95.23% |
ಯುಕೊ ಬ್ಯಾಂಕ್ | 55.12% | 80.77% |
ಕೆನರಾ ಬ್ಯಾಂಕ್ | 4.86% | 62.33% |
ಬ್ಯಾಂಕ್ ಆಫ್ ಮಹಾರಾಷ್ಟ್ರ | 29.18% | 56.77% |
ಪಂಜಾಬ್ ನ್ಯಾಷನಲ್ ಬ್ಯಾಂಕ್ | 37.87% | 54.69% |
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 39.51% | 48.71% |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | -0.41% | 32.85% |
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ | 21.04% | 25.49% |
ಕಳೆದ ಕೆಲವು ವಾರಗಳಿಂದ ವಿದೇಶಿ ಹೂಡಿಕೆದಾರರು ಸಾರ್ವಜನಿಕ ಬ್ಯಾಂಕ್‌ಗಳ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿದ್ದಾರೆ. ಜಾಗತಿಕ ಇನ್ವೆಸ್ಟ್‌ಮೆಂಟ್ ಕಂಪನಿ BofA Securities ಪ್ರಕಾರ, (ಬ್ಯಾಂಕ್ ಆಫ್ ಅಮೆರಿಕ ಮೆರಿಲಿ ಲಿಂಚ್) ಪಿಎಸ್‌ಯು ಬ್ಯಾಂಕ್‌ಗಳ ಷೇರು ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮೋರ್ಗಾನ್ ಸ್ಟಾನ್ಲಿ ಏನೆನ್ನುತ್ತದೆ?
ಮೋರ್ಗಾನ್ ಸ್ಟಾನ್ಲಿ ಪ್ರಕಾರ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಕಳೆದ ವರ್ಷದಿಂದೀಚೆಗೆ ಉತ್ತಮ ಲಾಭ, ವಹಿವಾಟು ಹೆಚ್ಚಳದ ಪರಿಣಾಮ ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಷೇರುಗಳ ದರ ಏರಿಕೆಯಾಗುತ್ತಿದೆ. ಕ್ರೆಡಿಟ್ ಸ್ವೀಸ್, ಜೆಪಿ ಮೋರ್ಗಾನ್ ಕೂಡ ಪಿಎಸ್‌ಯು ಷೇರುಗಳ ದರ ವೃದ್ಧಿಸಲಿದೆ ಎಂದು ನಿರೀಕ್ಷಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನವೆಂಬರ್‌ನಲ್ಲಿ 14,205 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.
ಮೋರ್ಗಾನ್ ಸ್ಟಾನ್ಲಿ ಪ್ರಕಾರ ಸಾರ್ವಜನಿಕ ಬ್ಯಾಂಕ್‌ಗಳು ಷೇರು ಮಾರುಕಟ್ಟೆಯಲ್ಲಿ 2022-24 ಅವಧಿಯಲ್ಲಿ ಹಲವು ಖಾಸಗಿ ಬ್ಯಾಂಕ್‌ಗಳಿಗಿಂತಲೂ ಉತ್ತಮ ಪ್ರದರ್ಶನ ದಾಖಲಿಸಲಿವೆ.
ಸಾಮಾನ್ಯವಾಗಿ ಪಿಎಸ್‌ಯು ಬ್ಯಾಂಕ್ ಷೇರುಗಳು ತಮ್ಮ ಕಳಪೆ ಪ್ರದರ್ಶನಕ್ಕೆ ಕುಖ್ಯಾತಿ ಗಳಿಸಿವೆ. ಬೇಕಾಬಿಟ್ಟಿ ಸಾಲ ವಿತರಣೆ, ಅನುತ್ಪಾದಕ ಆಸ್ತಿ, ನಷ್ಟ ಸಂಕಷ್ಟಗಳ ಪರಿಣಾಮ ಷೇರುಗಳ ದರ ನೆಲ ಕಚ್ಚುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಷೇರುಗಳ ದರ ಜಿಗಿದಿವೆ. ಬ್ಯಾಂಕ್‌ಗಳ ವಹಿವಾಟು ಕಳೆದ ವರ್ಷದಿಂದೀಚೆಗೆ ಸುಧಾರಿಸಿರುವುದನ್ನೂ ಈ ಸಂದರ್ಭ ಗಮನಿಸಬಹುದು.
ಬ್ಯಾಂಕ್‌ಗಳ ಸ್ವತ್ತಿನ ಗುಣಮಟ್ಟ ಸುಧಾರಣೆ, ಸಾಲ ವಿತರಣೆ ಚುರುಕಾಗಿರುವುದು, ಬಂಡವಾಳ ಪೂರೈಕೆ, ಅನುತ್ಪಾದಕ ಸಾಲದ ನಿರ್ವಹಣೆಯಲ್ಲಿ ಸುಧಾರಣೆಯಿಂದ ಪಿಎಸ್‌ಯು ಬ್ಯಾಂಕ್ ಷೇರುಗಳ ಮೌಲ್ಯವೂ ಏರಿಕೆಯಾಗಿದೆ ಎನ್ನುತ್ತಾರೆ ತಜ್ಞರು.