Site icon Vistara News

Debit card : ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ನಿಯಮ ಶೀಘ್ರ ಬದಲಾವಣೆ, ಲಾಭವೇನು?

debit card

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಕುರಿತ ನಿಯಮಗಳನ್ನು ಶೀಘ್ರ ಬದಲಾವಣೆ ಮಾಡಲಿದೆ. ನೀವು ನಿಮಗೆ ಬೇಕಾದ ನೆಟ್‌ ವರ್ಕ್‌ನ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಅನ್ನು ಇದರಿಂದಾಗಿ ಪಡೆಯಬಹುದು. ಪ್ರಸ್ತುತ ನಿಮ್ಮ ಬ್ಯಾಂಕ್‌ ನೀಡಿರುವ ಡೆಬಿಟ್‌ ಕಾರ್ಡ್‌, ಅಥವಾ ಕ್ರೆಡಿಟ್‌ ಕಾರ್ಡ್‌ ಯಾವ ನೆಟ್‌ವರ್ಕ್‌ನಲ್ಲಿ ಇರುತ್ತದೆಯೋ, ಅದೇ ನೆಟ್‌ ವರ್ಕ್‌ ಬಳಸುವುದು ಅನಿವಾರ್ಯ. ಆರ್‌ಬಿಐ ಈಗ ನಿಯಮ ಬದಲಾವಣೆ ಮಾಡುತ್ತಿದೆ.

ಬಳಕೆದಾರರಿಗೆ ಲಾಭವೇನು? ರಿಸರ್ವ್‌ ಬ್ಯಾಂಕ್‌ 2023ರ ಜುಲೈ 5ರಂದು ಬಿಡುಗಡೆಗೊಳಿಸಿದ ಕರಡು ಸುತ್ತೋಲೆಯ ಪ್ರಕಾರ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಗ್ರಾಹಕರಿಗೆ ತಾವು ಬಯಸಿದ ನೆಟ್‌ ವರ್ಕ್‌ ಅಡಿಯಲ್ಲಿರುವ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳನ್ನು ಪಡೆಯಬಹುದು. ಇದು ಹೇಗೆ ಸಾಧ್ಯ ಎನ್ನುತ್ತೀರಾ?

ನೀವು ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸುವಾಗ ಇದುವರೆಗೆ ಬೇರೆ ಆಯ್ಕೆ ಇರಲಿಲ್ಲ. ನಿಮ್ಮ ಬ್ಯಾಂಕ್‌ ಸಾಮಾನ್ಯವಾಗಿ ಅವರ ಆದ್ಯತೆಯ ಮೇರೆಗೆ ವೀಸಾ, ಮಾಸ್ಟರ್‌ ಕಾರ್ಡ್‌, ರುಪೇ ಇತ್ಯಾದಿ ಕಾರ್ಡ್‌ ನೆಟ್‌ ವರ್ಕ್‌ ಜತೆಗೆ ವಿಶೇಷ ಒಪ್ಪಂದ ಮಾಡಿಕೊಂಡು ನಿಮಗೆ ಕಾರ್ಡ್‌ ಒದಗಿಸುತ್ತದೆ. ಈಗ ಭಾರತದಲ್ಲಿ ಐದು ಬಗೆಯ ಕಾರ್ಡ್‌ ನೆಟ್‌ ವರ್ಕ್‌ಗಳು ಇವೆ. ಅವುಗಳೆಂದರೆ- ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕಿಂಗ್‌ ಕಾರ್ಪೊರೇಷನ್‌, ಡಿನ್ನರ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಮಾಸ್ಟರ್‌ಕಾರ್ಡ್‌ ಏಷ್ಯಾ/ಪೆಸಿಫಿಕ್‌ ಲಿಮಿಟೆಡ್‌, ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ-ರುಪೇ, ವೀಸಾ ವರ್ಲ್ಡ್‌ವೈಡ್‌ ಲಿಮಿಟೆಡ್. ಇದರಿಂದಾಗಿ ಗ್ರಾಹಕರಿಗೆ ಪ್ರಯೋಜನ ಸಿಗಲಿದೆ.

ಆಗಲಿರುವ ಬದಲಾವಣೆ ಏನು? 2023ರ ಅಕ್ಟೋಬರ್‌ 1ರಿಂದ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಅವರ ಆದ್ಯತೆಯ ನೆಟ್‌ ವರ್ಕ್‌ ಅಡಿಯಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಪಡೆಯಬಹುದು. ಅಂದರೆ ವೀಸಾ, ಮಾಸ್ಟರ್‌ ಕಾರ್ಡ್‌, ರುಪೇ ಮತ್ತಿತರ ಕಾರ್ಡ್‌ಗಳ ನೆಟ್‌ವರ್ಕ್‌ನಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ವೀಸಾ ಕಾರ್ಡ್‌ ಬೇಡ ಎಂದಿದ್ದರೆ ರುಪೇ ಕಾರ್ಡ್‌ ಅನ್ನು ಪಡೆಯಬಹುದು.

ಇದನ್ನೂ ಓದಿ: Vistara Money Plus : ಮಕ್ಕಳಿಗೆ ಕ್ರೆಡಿಟ್‌ ಕಾರ್ಡ್‌ ಕೊಡುವಾಗ ಇರಲಿ ಎಚ್ಚರ, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌ ವಿಡಿಯೊ

ಅದೇ ರೀತಿ ಬ್ಯಾಂಕ್‌ಗಳು ಕಾರ್ಡ್‌ ನೆಟ್‌ ವರ್ಕ್‌ ಜತೆಗೆ ಇತರ ಕಾರ್ಡ್‌ ನೆಟ್‌ ವರ್ಕ್‌ ಸೇವೆಯ ಆಯ್ಕೆಯನ್ನು ಗ್ರಾಹಕರು ಪಡೆಯಲು ಸಾಧ್ಯವಾಗದಂಥ ಒಪ್ಪಂದವನ್ನು ಮಾಡಿಕೊಳ್ಳಬಾರದು ಎಂದು ತಿಳಿಸಿದೆ. ಬಳಕೆದಾರರು ಕಾರ್ಡ್‌ ಬಿಡುಗಡೆ ಮಾಡು ವೇಳೆ ಅಥವಾ ನವೀಕರಿಸುವ ಮುನ್ನ ಈ ಆಯ್ಕೆಯನ್ನು ಪಡೆಯಲಿದ್ದಾರೆ. ಹಳೆಯ ಗ್ರಾಹಕರು ಕೂಡ ಕಾರ್ಡ್‌ ನವೀಕರಿಸುವಾಗ ತಮಗೆ ಬೇಕಾದ ನೆಟ್‌ ವರ್ಕ್‌ನ ಕಾರ್ಡ್‌ ಪಡೆಯಬಹುದು.

ನೆಟ್‌ ವರ್ಕ್‌ ಆಯ್ಕೆಯನ್ನು ಪ್ರಜಾಸತ್ತಾತ್ಮಕಗೊಳಿಸುವುದರಿಂದ, ಆಯ್ಕೆಯ ನಿರ್ಧಾರವನ್ನು ಗ್ರಾಹಕರ ಕೈಗೆ ಇಡುವುದರಿಂದಾಗಿ ಈ ಕಂಪನಿಗಳು ಗ್ರಾಹಕರ ಅಹವಾಲುಗಳ ಇತ್ಯರ್ಥವನ್ನು ಸಮರ್ಪಕವಾಗಿ ಮಾಡನೇಕಾಗುತ್ತದೆ. ಸೇವೆಯ ಗುಣಮಟ್ಟವೂ ಸ್ಪರ್ಧಾತ್ಮಕವಾಗಿ ಇರಬೇಕಾಗುತ್ತದೆ. ಭಿನ್ನ ಕ್ರೆಡಿಟ್‌ ಕಾರ್ಡ್‌ಗಳು ಬೇರೆ ಬೇರೆ ರಿವಾರ್ಡ್‌ ಪ್ರೋಗ್ರಾಮ್‌ಗಳನ್ನು ಹೊಂದಿರುತ್ತವೆ. ಟರ್ಮ್ಸ್‌ ಮತ್ತು ಕಂಡೀಶನ್‌ಗಳು ಭಿನ್ನವಾಗಿರುತ್ತವೆ. ಹೀಗಾಗಿ ಗ್ರಾಹಕರಿಗೆ ಅವರ ಆದ್ಯತೆಯ ಕಾರ್ಡ್‌ ಸಿಗುವಂತಾಗುವುದು ಉತ್ತಮ.

Exit mobile version