Site icon Vistara News

ವಿಸ್ತಾರ MoneyGuide: ನಿವೃತ್ತರಾಗುವುದಕ್ಕೆ ಮುನ್ನ ಈ 5 ಪ್ರಮಾದಗಳನ್ನು ಮಾಡದಿರಿ

ನಿವೃತ್ತಿಯ ಬಳಿಕ ದೈನಂದಿನ ಖರ್ಚುವೆಚ್ಚಗಳಿಗೆ, ಹಾಗೂ ಹಣಕಾಸು ಭದ್ರತೆ ನೀಡುವ ಆದಾಯ ಮೂಲಕ್ಕೆ ಏನು ಮಾಡುವುದು ಎಂಬುದು ಬಹಳ ಮುಖ್ಯ. ಅನೇಕ ಮಂದಿ ಈ ನಿಟ್ಟಿನಲ್ಲಿ ಹಲವು ಪ್ರಮಾದಗಳನ್ನು ಎಸಗುತ್ತಾರೆ. ಬಳಿಕ ಇಳಿ ವಯಸ್ಸಿನಲ್ಲಿ ಕಂಗೆಡುತ್ತಾರೆ. ಇದು ಹೇಳಲಾಗದ ಆರ್ಥಿಕ ಸಮಸ್ಯೆಯಾದೀತು. ಆದ್ದರಿಂದ ನಿವೃತ್ತಿಗೆ ಮುನ್ನ ಮಾಡಬಾರದ ೫ ಪ್ರಮುಖ ಪ್ರಮಾದಗಳು ಯಾವುದು ಎಂಬುದನ್ನು ಹಿರಿ-ಕಿರಿಯರಾದಿಯಾಗಿ ಎಲ್ಲರೂ ಅರಿತುಕೊಳ್ಳುವುದು ಉತ್ತಮ.

೧. ಯಾವುದೇ ಉಳಿತಾಯ ಮಾಡದಿರುವುದು

ಇದು ಎಲ್ಲಕ್ಕಿಂತ ಮೊದಲ ಮತ್ತು ದೊಡ್ಡ ಪ್ರಮಾದ. ಜೀವನ ಹೇಗೋ ನಡೆಯುತ್ತದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಇಳಿ ವಯಸ್ಸಿನಲ್ಲಿ ಪಡಬಾರದ ಕಷ್ಟಪಡಬೇಕಾಗುತ್ತದೆ. ಇದನ್ನು ತಪ್ಪಿಸಲು ಸಂಪಾದನೆಗೆ ಇಳಿಯುವಾಗಲೇ ನಿಗದಿತ ಮೊತ್ತವನ್ನು ನಿವೃತ್ತಿಯ ಬದುಕಿನ ಆರ್ಥಿಕ ಯೋಜನೆಗೆ ಮೀಸಲಿಡಬೇಕು. ಹೂಡಿಕೆ ಬೇಗ ಆರಂಭಿಸಿದಷ್ಟೂ ಒಳಿತು.

೨. ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು

ಅನೇಕ ಮಂದಿ ನಿವೃತ್ತಿಯ ಕಾಲಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಸೈಟು, ಭೂಮಿ ಖರೀದಿ, ಬಾಡಿಗೆಗೆ ಕೊಡಲು ಮನೆ ಕಟ್ಟುವುದು ತಪ್ಪಲ್ಲ. ಆದರೆ ನಿವೃತ್ತಿಯ ಇಳಿ ವಯಸ್ಸಿನಲ್ಲಿ ಇವುಗಳ ನಿರ್ವಹಣೆ ಸುಲಭವಾಗಿರುವುದಿಲ್ಲ.

೩. ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಮಾತ್ರ ಹೂಡಿಕೆ

ಅನೇಕ ಮಂದಿ ಬ್ಯಾಂಕ್‌ಗಳ ಫಿಕ್ಸೆಡ್‌ ಡಿಪಾಸಿಟ್‌, ಅಂಚೆ ಇಲಾಖೆ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯನಿಧಿ ಇತ್ಯಾದಿ ಸುರಕ್ಷಿತ ಹಾಗೂ ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಲ್ಲಿ ಹೂಡುತ್ತಾರೆ. ಆದರೆ ಹಣದುಬ್ಬರ ಇವುಗಳ ಬಡ್ಡಿ ದರಕ್ಕಿಂತಲೂ ಹೆಚ್ಚು ಇದ್ದರೆ, ಈ ಹೂಡಿದ ನಿಧಿ ಬೆಳೆಯುವುದಿಲ್ಲ. ಆದ್ದರಿಂದ ಮ್ಯೂಚುವಲ್‌ ಫಂಡ್‌, ಷೇರು ಸೇರಿದಂತೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬೇಕು.

೪. ಒಂದೇ ಬುಟ್ಟಿಯಲ್ಲಿ ಹೂಡಿಕೆಯ ಅಪಾಯ

ಕೆಲವರು ಕೇವಲ ಬಂಗಾರದಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ. ಮತ್ತೆ ಕೆಲವರು ಮೂರೋ-ನಾಲ್ಕೊ ಸೈಟು ಕೊಂಡು ಅವುಗಳ ಸಾಲ ಕಟ್ಟುವುದರಲ್ಲೇ ಆಯುಷ್ಯ ಕಳೆಯುತ್ತಾರೆ. ಮತ್ತೆ ಕೆಲವರು ಡಿಜಿಟಲ್‌ ಆಸ್ತಿಗಳಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡುತ್ತಾರೆ. ಹಲವರು ಕೇವಲ ಫಿಕ್ಸೆಡ್‌ ಡಿಪಾಸಿಟ್‌ಗಳಲ್ಲಿ ಮಾತ್ರ ಇನ್ವೆಸ್ಟ್‌ ಮಾಡುತ್ತಾರೆ. ಆದರೆ ಹೂಡಿಕೆಯಲ್ಲಿ ವೈವಿಧ್ಯತೆ ಇದ್ದರೆ ಬೆಳೆಯುತ್ತದೆ. ಇಲ್ಲದಿದ್ದರೆ ಅಪಾಯ ಹೆಚ್ಚು.

೫. ಹಣದುಬ್ಬರ ಅಥವಾ ಬೆಲೆ ಏರಿಕೆ ಗಮನಿಸದಿರುವುದು

ವರ್ಷದಿಂದ ವರ್ಷಕ್ಕೆ ಬೆಲೆಗಳು ಏರಿಕೆಯಾಗುತ್ತವೆ. ಆದ್ದರಿಂದ ನಿವೃತ್ತಿಯ ಕಾಲಕ್ಕೆ ಹೂಡಿಕೆ ಮಾಡುವವರು, ತಮ್ಮ ಇಳಿ ವಯಸ್ಸಿನಲ್ಲಿ ಬೆಲೆಗಳು ಎಷ್ಟು ಏರಿಕೆಯಾಗಬಹುದು ಎಂದು ಗಮನಿಸಬೇಕು. ಹಣದುಬ್ಬರವನ್ನು ಅಥವಾ ಬೆಲೆ ಹೆಚ್ಚಳವನ್ನು ಪರಿಗಣಿಸದವರು ಮಾತ್ರ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಸಂಪತ್ತನ್ನು ಬೆಳಸಲು ಇದು ಸರಿಯಾದ ಮಾರ್ಗವೇ ಅಲ್ಲ. ಆದ್ದರಿಂದ ಸಣ್ಣ ಮೊತ್ತವನ್ನಾದರೂ ಮ್ಯೂಚುವಲ್‌ ಫಂಡ್‌, ಷೇರುಗಳಲ್ಲಿ ಹೂಡಿಕೆ ಮಾಡಬೇಕು.

ಈಕ್ವಿಟಿ ಹೂಡಿಕೆಗೆ ಯಾವುದು ಸೂಕ್ತ?

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ, ಎನ್‌ಪಿಎಸ್‌ನಲ್ಲಿ ಹೂಡಿಕೆ, ಭಿನ್ನ ಮ್ಯೂಚುವಲ್‌ ಫಂಡ್‌ಗಳಲ್ಲಿ ಎಸ್‌ಐಪಿ ಮೂಲಕ ಹೂಡಿಕೆ ಸೂಕ್ತ.

Exit mobile version