ಕಳೆದ ಎರಡು-ಮೂರು ವರ್ಷಗಳಿಂದೀಚೆಗೆ ಭಾರತದಲ್ಲೂ ಫಿನ್‌ಫ್ಲುಯೆನ್ಸರ್‌ಗಳು ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಅವರ ಆದಾಯವೂ ಲಕ್ಷಾಂತರ ರೂ.ಗಳಲ್ಲಿ ಏರಿಕೆಯಾಗಿದೆ. ( Finfluencers) ಸೆಲೆಬ್ರಿಟಿಗಳ ಸಾಲಿನಲ್ಲೀಗ ಫಿನ್‌ಫ್ಲುಯೆನ್ಸರ್‌ಗಳೂ ಸೇರಿದ್ದಾರೆ. ಹಾಗಾದರೆ ದೇಶದಲ್ಲಿನ ಪ್ರಮುಖ ಫಿನ್‌ಫ್ಲಯೆನ್ಸರ್‌ಗಳು ಯಾರು? ಅವರ ಹಿಂಬಾಲಕರೆಷ್ಟು? ಅವರು ಹೇಗೆ ದುಡ್ಡು ಸಂಪಾದಿಸುತ್ತಾರೆ ಎಂಬುದನ್ನು ನೋಡೋಣ.
ಅಂದಹಾಗೆ ಈ ಫಿನ್‌ಫ್ಲುಯೆನ್ಸರ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಳ ಮೂಲಕ ಹಣಕಾಸು ಸಲಹೆಗಳನ್ನು ನೀಡುತ್ತಾರೆ. ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ಕೂಡ ಮಾಡುತ್ತಾರೆ. ಹಣಕಾಸು ಹೂಡಿಕೆಗಳ ಬಗ್ಗೆ ಜನರಿಗೆ ಸಲಹೆಗಳನ್ನು ನೀಡುತ್ತಾರೆ. ರೀಲ್‌ಗಳಲ್ಲಿ 90 ಸೆಕೆಂಡ್‌ಗಳ ಸಣ್ಣ ವಿಡಿಯೊ ಹಾಗೂ ಯೂಟ್ಯೂಬ್‌ನಲ್ಲಿ ಸುದೀರ್ಘ ವಿಡಿಯೊವನ್ನು ಮಾಡುತ್ತಾರೆ.
ಫಿನ್‌ಫ್ಲಯೆನ್ಸರ್‌ಗಳು ಆದಾಯ ಗಳಿಸುವ ದಾರಿ ಯಾವುದು? ಫಿನ್ ಫ್ಲುಯೆನ್ಸರ್‌ಗಳು ರೀಲ್ಸ್ ಅಥವಾ ವಿಡಿಯೊ ಮೂಲಕ ಹಣ ಸಂಪಾದಿಸುತ್ತಾರೆ. ಜತೆಗೆ ಹಣಕಾಸು ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡು ಅವರ ಹಣಕಾಸು ಪ್ರಾಡಕ್ಟ್‌ಗಳನ್ನು ತಮ್ಮ ರೀಲ್ಸ್ ಹಾಗೂ ಯೂಟ್ಯೂಬ್ ವಿಡಿಯೊಗಳ ಮೂಲಕ ಪ್ರಚಾರ ಮಾಡಿ ಹಣ ಗಳಿಸುತ್ತಾರೆ. ಒಂದು ಕಡೆ ತಮ್ಮ ಫಾಲೋವರ್ಸ್ ಹಾಗೂ ಸಬ್‌ಸ್ಕ್ರೈಬರ್ ಬೇಸ್‌ಗೆ ಮಾಹಿತಿಗಳನ್ನು ತಲುಪಿಸುತ್ತಾರೆ. ಮತ್ತೊಂದು ಕಡೆ ಹಣಕಾಸು ಸಂಸ್ಥೆಗಳ ಗ್ರಾಹಕರನ್ನು ಇವರು ತಲುಪುತ್ತಾರೆ.
ಕಂಪನಿಗಳಿಗೂ ಫಿನ್‌ಫ್ಲುಯೆನ್ಸರ್‌ಗಳಿಂದ ಲಾಭ: ಫಿನ್‌ಫ್ಲುಯೆನ್ಸರ್‌ಗಳಿಂದ ಕಂಪನಿಗಳಿಗೂ ಲಾಭವಿದೆ. ನಿಷ್ಠಾವಂತ ಗ್ರಾಹಕರ ನೆಲೆಯನ್ನು ಗಳಿಸುತ್ತವೆ. ಉತ್ಪನ್ನಗಳನ್ನು ಸಮರ್ಪಕವಾಗಿ ಹಾಗೂ ಕೇಂದ್ರೀಕೃತವಾಗಿ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ. 30 ಸೆಕೆಂಡ್‌ಗಳ ಟಿವಿ ಕಮರ್ಶಿಯಲ್‌ಗಿಂತಲೂ ಇದು ಪರಿಣಾಮಕಾರಿ ಎನ್ನಿಸುತ್ತದೆ.
ಜನಪ್ರಿಯ ಫಿನ್‌ಫ್ಲುಯೆನ್ಸರ್‌ಗಳಿವರು: ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿರುವ ಫಿನ್‌ಫ್ಲುಯೆನ್ಸರ್‌ಗಳಲ್ಲಿ ಕೆಲವರನ್ನು ಗುರುತಿಸೋಣ. ಇನ್‌ಸ್ಟಾಗ್ರಾಮ್‌ನಲ್ಲಿ ಅಕ್ಷತ್ ಶ್ರೀವಾಸ್ತವ ಅವರು 1.43 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅಂಕುರ್ ವಾರಿಕೊ 22 ಲಕ್ಷ ಫಾಲೋವರ್ಸ್, ಪ್ರಾಂಜಲ್ ಕಾಮ್ರಾ 77 ಲಕ್ಷ ಫಾಲೋವರ್ಸ್, ರಚನಾ ರಾನಡೆ 93 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇವರೆಲ್ಲ ಯೂಟ್ಯೂಬ್‌ನಲ್ಲೂ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್ ಪ್ಲಾಟ್ ಫಾರ್ಮ್‌ಗಳ ಮೂಲಕ ಆದಾಯ ಗಳಿಸುತ್ತಾರೆ. ಜೆರೋಧಾ, ಫಿನ್‌ಶಾಟ್, ಸ್ಮಾಲ್ ಕೇಸ್, ಕ್ರೆಡ್, ಮೊಬಿವಿಕ್, ಅಪ್ಸ್ ಸಟಾಕ್, ವಾಜಿರ್, ಕೋಟಕ್ ಲೈಫ್ ಇನ್ಸೂರೆನ್ಸ್, ಐಎನ್‌ಡಿ ಮನಿ ಮೊದಲಾದ ಹಣಕಾಸು ಸೇವಾ ಸಂಸ್ಥೆಗಳು ಕಂಟೆಂಟ್‌ಗಳಿಗೆ ಹಣ ಪಾವತಿಸುತ್ತವೆ. ಹಣಕಾಸು ವಲಯದ ಸ್ಟಾರ್ಟಪ್‌ಗಳು ತಮ್ಮ ಉತ್ಪನ್ನಗಳ ಪ್ರಚಾರ ಸಲುವಾಗಿ ಫಿನ್‌ಫ್ಲುಯೆನ್ಸರ್‌ಗಳಿಗೆ ಕಮಿಶನ್ ನೀಡುತ್ತವೆ.
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಇಂಥ ಫಿನ್‌ಫ್ಲುಯೆನ್ಸರ್‌ಗಳ ಮೇಲೆ ನಿಗಾ ವಹಿಸಲು ಇತ್ತೀಚೆಗೆ ಮುಂದಾಗಿದೆ. ಹಾಗಂತ ಇದಕ್ಕೋಸ್ಕರ ಎಲ್ಲ ಫಿನ್‌ಫ್ಲುಯೆನ್ಸರ್‌ಗಳನ್ನೂ ವಿಲನ್‌ಗಳೆಂದು ಒಂದೇ ತಕ್ಕಡಿಗೆ ಹಾಕಬೇಕಾಗಿಲ್ಲ. ಇಲ್ಲೂ ಜನರನ್ನು ವೈಯಕ್ತಿಕ ಹಣಕಾಸು ವಿಷಯಗಳಲ್ಲಿ ಯಾವ ಶಾಲೆ-ಕಾಲೇಜು-ಬಿ-ಸ್ಕೂಲ್‌ಗಳಲ್ಲಿ, ಯುನಿವರ್ಸಿಟಿಗಳ ಅಂಗಳದಲ್ಲಿ ಯಾರೂ ಹೇಳಿ ಕೊಡದಿದ್ದ ಸಂಗತಿಗಳನ್ನು ಸುಲಲಿತವಾಗಿ ಹೇಳಿಕೊಡುವವರು ಇದ್ದಾರೆ. ಹಣಕಾಸು ಜಗತ್ತಿನಲ್ಲಿ ಹೇಗೆ ಮುನ್ನೆಚ್ಚರ ವಹಿಸಬೇಕು ಎಂದು ಸಕಾಲಕ್ಕೆ ತಿಳಿವಳಿಕೆ ಕೊಡುವವರು ಇದ್ದಾರೆ.
ಇದನ್ನೂ ಓದಿ: ವಿಸ್ತಾರ Money Guide : Finfluencers : ಯಾರಿವರು ಸುಲಭವಾಗಿ ಕೋಟಿ ಗಳಿಸಲು ದಾರಿ ತೋರುವವರು?