Site icon Vistara News

Fixed Deposits: ಪೋಸ್ಟ್ ಆಫೀಸ್ ಎಫ್‌ಡಿ; ಬಡ್ಡಿ ದರ ಎಷ್ಟು, ಏನೆಲ್ಲ ಲಾಭ?

Fixed Deposits

ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆಯಾಗಿ ಎಲ್ಲರ ಗಮನ ಸೆಳೆಯುವ ಪೋಸ್ಟ್ ಆಫೀಸ್‌ನ (post office) ಫಿಕ್ಸೆಡ್ ಡೆಪಾಸಿಟ್‌ಗಳನ್ನು (Fixed Deposits) ಟರ್ಮ್ ಡಿಪಾಸಿಟ್‌ಗಳು (term deposits) ಎಂದೂ ಕರೆಯಲಾಗುತ್ತದೆ. ಇದೊಂದು ಅದ್ಭುತ ಯೋಜನೆಯಾಗಿದ್ದು, ಹೂಡಿಕೆ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇದರಲ್ಲಿ ಹೂಡಿಕೆ (investment) ಮಾಡಬಹುದು. ಅದಕ್ಕೂ ಮೊದಲು ಇದರ ಬಗ್ಗೆ ಸಂಪೂರ್ಣ ತಿಳಿದುಕೊಂಡರೆ ಒಳ್ಳೆಯದು.

ಪೋಸ್ಟ್ ಆಫೀಸ್ ಎಫ್‌ಡಿ ಅಥವಾ ಟರ್ಮ್ ಡೆಪಾಸಿಟ್‌ಗಳು ಇಂಡಿಯಾ ಪೋಸ್ಟ್ ಮೂಲಕ ಉಳಿತಾಯ ಮಾಡುವ ಸುರಕ್ಷಿತ ಮತ್ತು ಸುಲಭವಾದ ಮಾರ್ಗಗಳಾಗಿವೆ.

ಬ್ಯಾಂಕ್‌ಗಳು ಎಲ್ಲ ಕಡೆ ಲಭ್ಯವಿರುವುದಿಲ್ಲ. ಹೀಗಾಗಿ ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಸಿಗುವ ಕೆಲವೊಂದು ಪ್ರಯೋಜನಗಳನ್ನು ನಾವು ಸುಲಭವಾಗಿ ಪಡೆಯಬಹುದು. ಪೋಸ್ಟ್ ಆಫೀಸ್‌ನಲ್ಲಿ ಲಭ್ಯವಿರುವ ಎಫ್‌ಡಿ ಯೋಜನೆಯು ಠೇವಣಿದಾರರಿಗೆ ಹೆಚ್ಚಿನ ಬಡ್ಡಿದರದೊಂದಿಗೆ ತಮ್ಮ ಹಣವನ್ನು ಉಳಿಸಲು ಅವಕಾಶ ನೀಡುತ್ತದೆ. ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆಯು ಗ್ರಾಮೀಣ ಜನರಲ್ಲಿ ವಿಶೇಷವಾಗಿ ಅಚ್ಚುಮೆಚ್ಚಿನದ್ದಾಗಿದೆ. ಯಾಕೆಂದರೆ ಇದು ಭಾರತದಲ್ಲಿನ ಅಗ್ರ ಸ್ಥಿರ ಠೇವಣಿ ಪೂರೈಕೆದಾರರಲ್ಲಿ ಒಂದಾಗಿದೆ.

2024ರ ಬಡ್ಡಿ ದರಗಳು

ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಬಡ್ಡಿ ದರ ಇಂತಿದೆ. 1 ವರ್ಷಕ್ಕೆ ಶೇ. 6, 1 ವರ್ಷ 1 ದಿನದಿಂದ 2 ವರ್ಷಗಳ ವರೆಗೆ ಶೇ. 7, 2 ವರ್ಷ 1 ದಿನದಿಂದ 3 ವರ್ಷಗಳ ವರೆಗೆ ಶೇ. 7.1, 3 ವರ್ಷಗಳಿಂದ 5 ವರ್ಷಗಳವರೆಗೆ ಶೇ. 7.5ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

ಪ್ರಯೋಜನಗಳು ಏನೇನು?

ಪೋಸ್ಟ್ ಆಫೀಸ್‌ನ ಎಫ್‌ಡಿಯಲ್ಲಿ ಒಂದು ವರ್ಷದಿಂದ ಐದು ವರ್ಷಗಳವರೆಗೆ ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಬಹುದು. ಒಬ್ಬ ವ್ಯಕ್ತಿಯು ಯಾವುದೇ ಅಂಚೆ ಕಚೇರಿಯಲ್ಲಿ ತನಗೆ ಬೇಕಾದಷ್ಟು ಎಫ್‌ಡಿ ಖಾತೆಗಳನ್ನು ತೆರೆಯಬಹುದು. ಖಾತೆಗಳನ್ನು 10 ವರ್ಷ ಮತ್ತು ಮೇಲ್ಪಟ್ಟವರು ಯಾರಾದರೂ ತೆರೆಯಬಹುದು. ಅಂತಹ ಖಾತೆಗಳನ್ನು 18 ವರ್ಷ ತುಂಬಿದ ಅನಂತರ ಅಪ್ರಾಪ್ತರ ಹೆಸರಿಗೆ ವರ್ಗಾಯಿಸಬಹುದು.

ಠೇವಣಿ ಮಾಡಬೇಕಾದ ಕನಿಷ್ಠ ಮೊತ್ತ 200 ರೂ. ಆಗಿದ್ದು, ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಇದರಲ್ಲಿ ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ. ಅಗತ್ಯವಿರುವಂತೆ ಏಕ ಮತ್ತು ಜಂಟಿ ಖಾತೆ ನಡುವೆ ಬದಲಾಯಿಸಲೂಬಹುದು.
5 ವರ್ಷಗಳ ಹೂಡಿಕೆ ಮಾಡಿರುವ ಠೇವಣಿಗಳಿಗೆ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು. ಖಾತೆಗಳನ್ನು ಸುಲಭವಾಗಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದಾಗಿದೆ. ಎಲ್ಲ ಖಾತೆಗಳು ಆಯಾ ಕಾಲದ ಬಡ್ಡಿ ದರಗಳೊಂದಿಗೆ ಮುಕ್ತಾಯದ ಸಮಯದಲ್ಲಿ ಸ್ವಯಂ ಚಾಲಿತವಾಗಿ ಮರುಸಮತೋಲನಗೊಳ್ಳುತ್ತವೆ.

ಇದನ್ನೂ ಓದಿ: National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

ಅಗತ್ಯವಿರುವ ದಾಖಲೆಗಳು ಏನೇನು?

ಭಾರತೀಯ ನಿವಾಸಿಗಳಿಗೆ ಒಂಟಿಯಾಗಿ ಅಥವಾ ಜಂಟಿಯಾಗಿ, ಪೋಷಕರ ಆರೈಕೆಯಲ್ಲಿ ಅಪ್ರಾಪ್ತ ವಯಸ್ಕರು ಈ ಖಾತೆಗಳನ್ನು ತೆರೆಯಬಹುದು. ಆದರೆ ಎನ್‌ಆರ್‌ಐಗಳು ಮತ್ತು ಸಂಸ್ಥೆಗಳಿಗೆ ಈ ಖಾತೆ ತೆರೆಯಲು ಅವಕಾಶವಿಲ್ಲ.

ಆಧಾರ್, ಪಾನ್ ಕಾರ್ಡ್ ಗುರುತಿನ ಪುರಾವೆಯಾಗಿ, ವಿದ್ಯುತ್ ಬಿಲ್, ನೀರಿನ ಸಂಪರ್ಕ, ಪಾಸ್‌ಪೋರ್ಟ್ ಇತ್ಯಾದಿಗಳನ್ನು ವಿಳಾಸ ಪುರಾವೆಯಾಗಿ, ಸಾಕ್ಷಿ ಸಹಿಯೊಂದಿಗೆ ನಾಮಿನಿ ವಿವರಗಳನ್ನು ಒಳಗೊಂಡಂತೆ ದಾಖಲೆ ಪುರಾವೆಗಳನ್ನು ಒದಗಿಸಬಹುದು.

Exit mobile version