ವಿಮೆ ನಿಯಂತ್ರಕ ಪ್ರಾಧಿಕಾರ (IRDAI) ಇದೀಗ ಟೆಲಿಮ್ಯಾಟಿಕ್ಸ್ ಆಧಾರಿತ ವಾಹನ ವಿಮೆ ಉತ್ಪನ್ನಗಳ ಮಾರಾಟಕ್ಕೆ ವಿಮೆ ಕಂಪನಿಗಳಿಗೆ ಅನುಮತಿ ನೀಡಿದೆ. ಇದರ ಅಡಿಯಲ್ಲಿ ನೀವು ನಿಮ್ಮ ವಾಹನವನ್ನು ಚಲಾಯಿಸುವ ರೀತಿಗೆ ಅನುಗುಣವಾಗಿ ವಿಮೆ ಪಡೆಯಬಹುದು.
ಏನಿದು ಟೆಲಿಮ್ಯಾಟಿಕ್ಸ್ ಆಧಾರಿತ ಮೋಟಾರು ವಾಹನ ವಿಮೆ?
ಮೊದಲಿಗೆ ಟೆಲಿಮ್ಯಾಟಿಕ್ಸ್ ಆಧಾರಿತ ವಾಹನ ವಿಮೆ ( Telematics based motor insurance) ಎಂದರೇನು ಎಂಬುದನ್ನು ತಿಳಿಯುವುದು ಅವಶ್ಯಕ. ಈ ಪಾಲಿಸಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸುವ ಕ್ರಮ, ಸಂಚಾರ ನಿಯಮಗಳನ್ನು ಪಾಲಿಸುವ ಶಿಸ್ತು ಮತ್ತು ಗುಣಮಟ್ಟವನ್ನು ಆಧರಿಸಿ ವಿಮೆಯ ಪ್ರೀಮಿಯಂ ದರ ನಿಗದಿಯಾಗುತ್ತದೆ. ಭವಿಷ್ಯದಲ್ಲಿ ಟೆಲಿಮ್ಯಾಟಿಕ್ಸ್ ಆಧಾರಿತ ಮೋಟಾರು ವಾಹನ ವಿಮೆ ಹೆಚ್ಚು ಜನಪ್ರಿಯವಾಗಬಹುದು ಎನ್ನಲಾಗುತ್ತಿದೆ.
ಸಾಂಪ್ರದಾಯಿಕ ಪದ್ಧತಿಯಲ್ಲಿ ನಿಮ್ಮ ವಾಹನದ ಮಾದರಿ ಮತ್ತಿತರ ಅಂಶಗಳನ್ನು ಆಧರಿಸಿ ವಿಮೆ ಪ್ರೀಮಿಯಂ ನಿರ್ಧಾರವಾಗುತ್ತದೆ. ಇದರ ಪರಿಣಾಮ ಒಂದೇ ಮಾಡೆಲ್‌ನ ಕಾರನ್ನು ಇಬ್ಬರು ಬಳಸುತ್ತಿದ್ದರೆ, ಇಬ್ಬರಿಗೂ ಪ್ರೀಮಿಯಂ ಒಂದೇ ರೀತಿ ಇರುತ್ತದೆ. ಆದರೆ ಒಂದು ಕಾರಿನ ಚಾಲಕ ಸುರಕ್ಷಿತ ಚಾಲನೆ ಮಾಡುವವನಾಗಿದ್ದರೆ, ಅಂಥ ಕಾರಿಗೂ ಒಂದೇ ರೀತಿ ಪ್ರೀಮಿಯಂ ಇರಬೇಕೆ? ಈ ಪ್ರಶ್ನೆಗೆ ಪರಿಹಾರ ಟೆಲಿಮ್ಯಾಟಿಕ್ಸ್ ತಂತ್ರಜ್ಞಾನ ಆಧಾರಿತ ವಿಮೆ.
ಪ್ರಸ್ತುತ ವಿಮೆ ಕಂಪನಿಗಳು ಐಆರ್‌ಡಿಎಐನ ಸ್ಯಾಂಡ್‌ಬಾಕ್ಸ್ ಉಪಕ್ರಮದ ಅಡಿಯಲ್ಲಿ ಬಿಡುಗಡೆಗೊಳಿಸಬಹುದು. ಇಲ್ಲಿ ಸ್ವತಃ ಐಆರ್‌ಡಿಎಐ ಹಾಕಿ ಕೊಡುವ ನೀತಿಯ ಚೌಕಟ್ಟಿನಡಿಯಲ್ಲಿ ವಿಮೆ ಕಂಪನಿಗಳು ಇಂಥ ವಿಮೆ ಉತ್ಪನ್ನಗಳನ್ನು ಬಿಡುಗಡೆಗೊಳಿಸಬಹುದು. ಉದಾಹರಣೆಗೆ ಎಡಿಲ್‌ವೈಸ್ ಜನರಲ್ ಇನ್ಷೂರೆನ್ಸ್ ಇತ್ತೀಚೆಗೆ ಸ್ವಿಚ್ ( SWITCH ) ಎಂಬ ಮೋಟಾರು ವಾಹನ ವಿಮೆಯನ್ನು ಬಿಡುಗಡೆಗೊಳಿಸಿದೆ. ಇದರ ವಿಶೇಷತೆ ಏನೆಂದರೆ, ಆ್ಯಪ್ ಒಂದು ವಾಹನದ ಚಲನೆಯನ್ನು ಗುರುತಿಸುತ್ತದೆ. ಹಾಗೂ ವಾಹನ ಚಾಲನೆಯಲ್ಲಿದ್ದಾಗ ಮಾತ್ರ ವಿಮೆ ಸಕ್ರಿಯವಾಗುತ್ತದೆ. ಹೀಗಾಗಿ ವಾಹನವನ್ನು ಹೆಚ್ಚು ಚಲಾಯಿಸಿದರೆ ಪ್ರೀಮಿಯಂ ಹೆಚ್ಚುತ್ತದೆ ಹಾಗೂ ಕಡಿಮೆ ಬಳಸಿದರೆ ಡಿಸ್ಕೌಂಟ್ ಸಿಗುತ್ತದೆ. ಜತೆಗೆ ಶಿಸ್ತಿನಿಂದ ಸುರಕ್ಷಿತವಾಗಿ ಚಲಾಯಿಸಿದರೆ ಕೂಡ ಲಾಭವಾಗಲಿದೆ. ಇದು ಗ್ರಾಹಕರಿಗೆ ಅನುಕೂಲಕರ ಎನ್ನುತ್ತಾರೆ ತಜ್ಞರು.
ಕೋವಿಡ್ ಬಿಕ್ಕಟ್ಟಿನ ಬಳಿಕ ಅನೇಕ ಮಂದಿಯ ಕೆಲಸದ ವಿಧಾನಗಳು ಮತ್ತು ಪ್ರಯಾಣದ ಪದ್ಧತಿ ಬದಲಾಗಿದೆ. ಎಷ್ಟೋ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಾರೆ. ಹೀಗಾಗಿ ಕಾರು ವಿಮೆ ಪ್ರೀಮಿಯಂ ಅನ್ನು ಅವರ ವಾಹನ ಚಲಾವಣೆಯ ಕ್ರಮಗಳಿಗೆ ಅನುಸಾರ ನಿರ್ಧರಿಸಿದರೆ ಸೂಕ್ತ ಎನ್ನುತ್ತಾರೆ ತಜ್ಞರು.
” ಈಗಿನ ಜಮಾನದ ವಾಹನ ಬಳಕೆದಾರರ ಕ್ರಮಗಳು ಬದಲಾಗಿವೆ. ಅವರ ಬಳಕೆಗೆ ತಕ್ಕಂತೆ ವಿಮೆ ಸೌಕರ್ಯವನ್ನು ಕೊಡುವುದರಿಂದ ಹೆಚ್ಚು ಅನುಕೂಲಕರವಾಗಲಿದೆ. ” ಕಡಿಮೆ ವಾಹನ ಚಲಾಯಿಸಿ ಕಡಿಮೆ ಪ್ರೀಮಿಯಂ ಕೊಡಿ, ಚೆನ್ನಾಗಿ ವಾಹನ ಚಲಾಯಿಸಿಯೂ ರಿಯಾಯತಿ ಪಡೆಯಿರಿʼ ಎನ್ನುವುದು ನಮ್ಮ ಆಶಯʼʼ ಎನ್ನುತ್ತಾರೆ ಎಡಿಲ್‌ವೈಸ್ ಜನರಲ್ ಇನ್ಷೂರೆನ್ಸ್‌ನ ಸಿಇಒ ಶನಾಯ್ ಘೋಷ್.
ವಾಹನ ಚಾಲನೆ ಗುಣಮಟ್ಟ ನಿರ್ಧಾರ ಹೇಗೆ?
ಟೆಲಿಮ್ಯಾಟಿಕ್ಸ್ ಆಧಾರದಲ್ಲಿ ಆ್ಯಪ್ ಮೂಲಕ ವಾಹನ ಚಾಲನೆಯ ಗುಣಮಟ್ಟ ಅಳೆಯುವುದು ಹೇಗೆ ಎನ್ನುವಿರಾ. ಇಲ್ಲಿ ಡ್ರೈವಿಂಗ್ ಸ್ಕೋರ್ ನೀಡಲಾಗುತ್ತದೆ. ಅತಿಯಾದ ವೇಗ, ಅಡ್ಡಾದಿಡ್ಡಿ ಚಾಲನೆ, ಹಠಾತ್ ಬ್ರೇಕ್ ಹಾಕುವುದು ಇತ್ಯಾದಿಗಳನ್ನು ಎಸಗಿದರೆ ವಾಹನ ಚಾಲನೆಯ ಗುಣಮಟ್ಟ ಕಳಪೆಯಾಗುತ್ತದೆ. ಸಂಚಾರದ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಸ್ಕೋರ್ ಸುಧಾರಿಸುತ್ತದೆ. ಇದನ್ನು ಪತ್ತೆ ಹಚ್ಚಲು ಸೂಕ್ತ ಸಾಧನವನ್ನು ವಾಹನದಲ್ಲಿ ಅಳವಡಿಸಲಾಗುತ್ತದೆ. ಹೀಗಿದ್ದರೂ ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ವಾಹನವನ್ನು ಎಲ್ಲಿಗೆ ತೆಗೆದುಕೊಂಡು ಹೋದರೂ ವಿಮೆ ಕಂಪನಿಗೆ ಲೊಕೇಶನ್ ಶೇರ್ ಆಗುವುದರಿಂದ ಗೊತ್ತಾಗುತ್ತದೆ.
ಒಟ್ಟಾರೆಯಾಗಿ ನೂತನ ತಂತ್ರಜ್ಞಾನದ ಪರಿಣಾಮ ವಾಹನ ವಿಮೆ ಉದ್ದಿಮೆಯಲ್ಲಿ ಸ್ವಾರಸ್ಯಕರ ಬದಲಾವಣೆಯ ಕಾಲ ಬಂದಿದೆ.