ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಶುಕ್ರವಾರ ತನ್ನ ರೆಪೊ ದರದಲ್ಲಿ ೦.೫೦% ಏರಿಕೆ ಮಾಡಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಹಣದುಬ್ಬರ ಕಡಿಮೆಯಾಗುವ ನಿರೀಕ್ಷೆ ಇದೆ. ಆದರೆ ಒಂದಂತೂ ಖಚಿತ. ಅದೇನೆಂದರೆ, ಗೃಹಸಾಲ ಪಡೆದವರಿಗೆ ಸಾಲದ ಕಂತುಗಳ ಸಂಖ್ಯೆ ಹೆಚ್ಚಲಿದೆ.
ಯಾರಿಗೆ ಇಎಂಐ ಹೆಚ್ಚಳದ ಹೊರೆ?: ಹೊಸತಾಗಿ ಗೃಹ ಸಾಲ ಖರೀದಿಸುವವರು ಹಾಗೂ ರೆಪೊ ದರ ಆಧಾರಿತ, ದೀರ್ಘಾವಧಿಯ ರಿಟೇಲ್ ಸಾಲಗಳನ್ನು ಹೊಂದಿದವರಿಗೆ ಇಎಂಐ ಹೊರೆ ಹೆಚ್ಚಲಿದೆ.
ಯಾವ ಸಾಲಗಳು ದುಬಾರಿಯಾಗಲಿವೆ?: ಗೃಹ ಸಾಲ, ವಾಹನ ಸಾಲ ( ಕಾರು, ಬೈಕ್, ಸ್ಕೂಟರ್ ಸಾಲ) , ವೈಯಕ್ತಿಕ ಸಾಲ ಇತ್ಯಾದಿ.
25 ಲಕ್ಷ ರೂ. ಸಾಲದ ಇಎಂಐನಲ್ಲಿ 771 ರೂ. ಹೆಚ್ಚಳ: ವ್ಯಕ್ತಿಯೊಬ್ಬರು ೨೦ ವರ್ಷಗಳ ಅವಧಿಗೆ 2೫ ಲಕ್ಷ ರೂ. ಗೃಹ ಸಾಲವನ್ನು 7.5 % ಬಡ್ಡಿಗೆ ಪಡೆದಿದ್ದಾರೆ ಎಂದು ಇಟ್ಟುಕೊಳ್ಳಿ. ಆಗ ಮಾಸಿಕ ಇಎಂಐ ಅಂದಾಜು ೨0,140 ರೂ. ಇರುತ್ತದೆ. ಈಗ ಬಡ್ಡಿ ದರದಲ್ಲಿ ೦.೫೦% ಏರಿಕೆಯಾಗಿದೆ. ಅಂದರೆ ಪರಿಷ್ಕೃತ ಬಡ್ಡಿ ದರ ೮% ಹಾಗೂ ಇಎಂಐ ೨0,911 ರೂ. ಆಗುತ್ತದೆ. ಅಂದರೆ ಮಾಸಿಕ 771 ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ಬಡ್ಡಿ ದರ ಏರಿದಾಗ ಸಾಮಾನ್ಯವಾಗಿ ಬ್ಯಾಂಕ್‌ಗಳು ಇಎಂಐ ಅನ್ನು ಹೆಚ್ಚಿಸುವುದಿಲ್ಲ. ಬದಲಿಗೆ ಇಎಂಐ ಅವಧಿಯನ್ನು ಹೆಚ್ಚಿಸುತ್ತವೆ. ಆದರೆ ಇಲ್ಲಿ ನೀವು ಗಮನಿಸಿ, ಕೇವಲ ೦.೫೦% ಬಡ್ಡಿ ದರ ಏರಿದರೂ, ಒಟ್ಟಾರೆಯಾಗಿ ೧,೮೫,೦೮೩ ರೂ. ಹೆಚ್ಚುವರಿ ವೆಚ್ಚವನ್ನು ಸಾಲಗಾರ ಕೊಡಬೇಕಾಗುತ್ತದೆ!
೨೫ ಲಕ್ಷ ರೂ. ಗೃಹ ಸಾಲ ಇಎಂಐ ಲೆಕ್ಕಾಚಾರ, (೭.೫೦% ಬಡ್ಡಿ)
ಸಾಲದ ಮೊತ್ತ | 25,00,000 ರೂ. |
ಅವಧಿ | 20 ವರ್ಷಗಳು |
ಬಡ್ಡಿ ದರ | 7.50% |
ಮಾಸಿಕ ಸಮಾನ ಕಂತು( ಇಎಂಐ) | 20,140 ರೂ. |
ಅಸಲು ಮೊತ್ತ | 25,00,000 ರೂ. |
ಬಡ್ಡಿ ಮೊತ್ತ | 23,33,560 ರೂ. |
ಒಟ್ಟು ಮೊತ್ತ | 48,33,560 ರೂ. |
೨೫ ಲಕ್ಷ ರೂ. ಗೃಹ ಸಾಲ ಇಎಂಐ ಲೆಕ್ಕಾಚಾರ, (೮.೦೦% ಬಡ್ಡಿ)
ಸಾಲದ ಮೊತ್ತ | 25,00,000 ರೂ. |
ಅವಧಿ | 20 ವರ್ಷಗಳು |
ಬಡ್ಡಿ ದರ | 8.00% |
ಸಮಾನ ಮಾಸಿಕ ಕಂತು (ಇಎಂಐ) | 20,911 ರೂ. |
ಅಸಲು ಮೊತ್ತ | 25,00,000 ರೂ. |
ಬಡ್ಡಿ ಮೊತ್ತ | 25,18,643 ರೂ. |
ಒಟ್ಟು ಮೊತ್ತ | 50,18,643 ರೂ. |
ಗೃಹಸಾಲಕ್ಕೆ ಬೇಡಿಕೆ ತಾತ್ಕಾಲಿಕ ಇಳಿಕೆ ಸಂಭವ: ಗೃಹ ಸಾಲದ ಬಡ್ಡಿ ದರಗಳು ಏರಿಕೆಯಾಗುವುದರಿಂದ ತಾತ್ಕಾಲಿಕವಾಗಿ ಗೃಹ ಸಾಲಕ್ಕೆ ಬೇಡಿಕೆ ಇಳಿಕೆಯಾಗುವ ಸಾಧ್ಯತೆ ಇದೆ. ಗೃಹ ಸಾಲ ಖರೀದಿ ಕಡಿಮೆಯಾದಾಗ, ನಿರ್ಮಾಣ ವಲಯದಲ್ಲಿ ಸಿಮೆಂಟ್, ಇಟ್ಟಿಗೆ, ಮರಳು, ಉಕ್ಕು ಇತ್ಯಾದಿ ಕಚ್ಚಾ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಬೇಡಿಕೆ ಕಡಿಮೆಯಾದೊಡನೆ ದರಗಳು ಇಳಿಯುತ್ತವೆ. ದರಗಳು ಇಳಿಕೆಯಾದಾಗ ಹಣದುಬ್ಬರ ತಗ್ಗುತ್ತದೆ.