ಕೋವಿಡ್-19 ಬಿಕ್ಕಟ್ಟಿನ ಬಳಿಕ ಆರೋಗ್ಯ ವಿಮೆಯ ಅಗತ್ಯತೆ ಹಿಂದೆಂದಿಗಿಂತ ಹೆಚ್ಚು ಪ್ರಾಮುಖ್ಯತೆ ಗಳಿಸಿದೆ. ಹೆಚ್ಚುತ್ತಿರುವ ಆಸ್ಪತ್ರೆ, ವೈದ್ಯಕೀಯ ಶುಲ್ಕಗಳು, ಔಷಧಿಯ ವೆಚ್ಚಗಳು ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಉದ್ಯೋಗಿಗಳಿಗೂ ಕೇವಲ ಕಂಪನಿ ಒದಗಿಸುವ ಸಮೂಹ ಆರೋಗ್ಯ ವಿಮೆ ಸಾಲದು ಎಂಬ ಜಾಗೃತಿ ಮೂಡುತ್ತಿದೆ. ಜೀವ ವಿಮೆ ಒಂದೇ ಸಾಲದು ಎಂಬ ಭಾವನೆ ಸಾರ್ವತ್ರಿಕವಾಗುತ್ತಿದೆ. ಮುಖ್ಯವಾಗಿ ಆರೋಗ್ಯ ವಿಮೆ ಇಲ್ಲದಿದ್ದರೆ ಆಸ್ಪತ್ರೆ ಮೆಟ್ಟಿಲೇರುವುದೇ ಕಷ್ಟ ಎಂಬ ಪರಿಸ್ಥಿತಿ ಬಂದಿದೆ. (ವಿಸ್ತಾರ Money Guide) ಹೀಗಾಗಿ ಎಲ್ಲರೂ ಆರೋಗ್ಯ ವಿಮೆಯತ್ತ ಗಮನ ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೊದಲು ಕಾಡುವ ಪ್ರಶ್ನೆಯೇ, ಎಷ್ಟು ಮೌಲ್ಯದ ಆರೋಗ್ಯ ವಿಮೆ ಬೇಕು ಎನ್ನುವುದು. ವಿವರ ಇಲ್ಲಿದೆ.
5-10 ಲಕ್ಷ ರೂ.ಗಳ ಆರೋಗ್ಯ ವಿಮೆಯ ಅಗತ್ಯ
ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಠ 5ರಿಂದ 10 ಲಕ್ಷ ರೂ.ಗಳ ಕವರೇಜ್ ಇರುವ ಆರೋಗ್ಯ ವಿಮೆ ಅಗತ್ಯ ಎನ್ನುತ್ತಾರೆ ವಿಮೆ ವಲಯದ ತಜ್ಞರು. ಹೀಗಿದ್ದರೂ, ಇದು ಹಲವಾರು ಸಂದರ್ಭಗಳನ್ನೂ ಅವಲಂಬಿಸಿದೆ. ನಿಮ್ಮ ವಯಸ್ಸು, ಆರೋಗ್ಯ ಸ್ಥಿತಿಯನ್ನೂ ಅವಲಂಬಿಸಿದೆ. ವಾಸ್ತವವಾಗಿ ಯಾವುದೇ ವಯಸ್ಸಿನ ಇತಿ ಮಿತಿ ಇಲ್ಲದೆ ಆರೋಗ್ಯ ವಿಮೆಯ ಅಗತ್ಯತೆ ಇದೆ. ಆಕಸ್ಮಿಕವಾಗಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೆ, ವೈದ್ಯಕೀಯ ಬಿಲ್‌ಗಳನ್ನು ಭರಿಸಲು ವಿಮೆ ನೆರವಾಗುತ್ತದೆ. ಹಾಗಾದರೆ ಆರೋಗ್ಯ ವಿಮೆ ಖರೀದಿಯ ವೇಳೆ ಪರಿಗಣಿಸಬೇಕಾದ ಅಂಶಗಳೇನು?
ಮಹಾ ನಗರಗಳಲ್ಲಿ ದೊಡ್ಡ ಆರೋಗ್ಯ ವಿಮೆ ಅಗತ್ಯ
ನೀವು ಯಾವ ನಗರ ಮತ್ತು ಪಟ್ಟಣದಲ್ಲಿ ವಾಸಿಸುತ್ತಿದ್ದೀರಿ ಎಂಬುದು ನಿಮ್ಮ ಆರೋಗ್ಯ ವಿಮೆಯ ಕವರೇಜ್ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ದಿಲ್ಲಿ ಮತ್ತು ಭುವನೇಶ್ವರದಲ್ಲಿ ಆರೋಗ್ಯ ವೆಚ್ಚಗಳ ನಡುವೆ ಭಾರಿ ವ್ಯತ್ಯಾಸವಾಗುತ್ತದೆ. ಆರೋಗ್ಯ ವೆಚ್ಚಗಳ ದೊಡ್ಡ ಮೊತ್ತವು ಸ್ಥಳೀಯವಾಗಿರುತ್ತವೆ. ಹೀಗಾಗಿ ನೀವು ವಾಸಿಸುತ್ತಿರುವ ನಗರ, ಪಟ್ಟಣ ಅಥವಾ ಗ್ರಾಮಾಂತರದಲ್ಲಿ ಆಸ್ಪತ್ರೆ, ಆರೋಗ್ಯ ವೆಚ್ಚಗಳು ಎಷ್ಟಿವೆ ಎಂಬುದನ್ನು ಪರಿಶೀಲಿಸಿ ಎನ್ನುತ್ತಾರೆ ನಿವಾ ಬೂಪ ಹೆಲ್ತ್ ಇನ್ಷೂರೆನ್ಸ್‌ನ ನಿರ್ದೇಶಕ ಭಾಬತೋಷ್ ಮಿಶ್ರಾ.
ನಿಮ್ಮ ಅಗತ್ಯವೇ ನಿರ್ಣಾಯಕ
ಆಸ್ಪತ್ರೆಯಲ್ಲಿ ನೀವು ಯಾವೆಲ್ಲ ಸೌಲಭ್ಯವನ್ನು ಪಡೆಯಲು ಬಯಸುತ್ತೀರಿ ಎಂಬುದು ಕೂಡ ನಿರ್ಣಾಯಕವಾಗುತ್ತದೆ. ನಿಮಗೆ ಪ್ರತ್ಯೇಕ ಕೊಠಡಿ ಬೇಕೆ ಅಥವಾ ಶೇರ್ ಮಾಡಿಕೊಳ್ಳುವ ರೂಮ್ ಬೇಕೆ, ಇಲ್ಲವೇ ಡೀಲಕ್ಸ್ ರೂಮ್ ಅಗತ್ಯವಿದೆಯೇ ಎಂಬುದು ನಿರ್ಣಾಯಕವಾಗುತ್ತದೆ. ಡೀಲಕ್ಸ್ ರೂಮ್ ಬಯಸಿದರೆ ನಿಮ್ಮ 5 ಲಕ್ಷ ರೂ. ಕವರೇಜ್ ಆರೋಗ್ಯ ವಿಮೆ ಬೇಗ ಖರ್ಚಾಗಬಹುದು.
ವಯಸ್ಸು ಮತ್ತು ಹೆಲ್ತ್ ಹಿಸ್ಟರಿ
ನೀವು ಜೀವನದ ಯಾವ ಘಟ್ಟದಲ್ಲಿ ಇದ್ದೀರಿ ಎಂಬುದು ಕೂಡ ನಿರ್ಣಾಯಕವಾಗುತ್ತದೆ. 35 ಮತ್ತು 55 ವರ್ಷ ವಯಸ್ಸಿನ ನಡುವೆ ನಿಮ್ಮ ಆರೋಗ್ಯ ವೆಚ್ಚಗಳೂ ಭಿನ್ನವಾಗಿರಬಹುದು. ಕ್ಯಾನ್ಸರ್‌ನಂಥ ದೀರ್ಘಕಾಲೀನ ಕಾಯಿಲೆಗಳು ಆರಂಭವಾದರೆ ಚಿಕಿತ್ಸೆಯ ವೆಚ್ಚವೂ ದುಬಾರಿಯಾಗುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಕವರೇಜ್ ಇರುವ ಆರೋಗ್ಯ ವಿಮೆಯ ಅಗತ್ಯ ಇರುತ್ತದೆ.
10 ಲಕ್ಷ ರೂ.ಗಳ ಕವರೇಜ್ ಸೂಕ್ತ
ಸೆಕ್ಯೂರ್‌ನೌ ಇನ್ಷೂರೆನ್ಸ್ ಬ್ರೋಕರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಬೊನ್ಡಿಯಾ ಪ್ರಕಾರ, ಪ್ರತಿಯೊಬ್ಬರಿಗೂ 10 ಲಕ್ಷ ರೂ.ಗಳ ಆರೋಗ್ಯ ವಿಮೆ ಕವರೇಜ್ ಅಗತ್ಯವಿದೆ. ನಿಮ್ಮ ವಾರ್ಷಿಕ ಆದಾಯಕ್ಕೆ ಸರಿ ಸಮಾನವಾಗುವಷ್ಟು ಆರೋಗ್ಯ ವಿಮೆಯೂ ಬೇಕು ಎಂಬ ಸಲಹೆಯನ್ನೂ ಅವರು ಸಮ್ಮತಿಸುತ್ತಾರೆ.
ಐದು ಲಕ್ಷ ರೂ. ವಿಮೆ ಎಲ್ಲ ಕುಟುಂಬಗಳಿಗೂ ಸಾಕಾಗಲಾರದು. ಹೀಗಾಗಿ ಪ್ರತಿಯೊಬ್ಬರಿಗೂ 10 ಲಕ್ಷ ರೂ. ಕವರೇಜ್ ಇರುವ ವಿಮೆ ಅಗತ್ಯ ಎನ್ನುತ್ತಾರೆ ತಜ್ಞರು.